ಮಂಗಳವಾರ, ಡಿಸೆಂಬರ್ 7, 2021
23 °C
100 ಕೋಟಿ ಡೋಸ್ ಲಸಿಕೆಯ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಹೇಳಿಕೆ

ವರ್ಷಾಂತ್ಯದೊಳಗೆ ಶೇ 90ರಷ್ಟು ಜನರಿಗೆ ಲಸಿಕೆ ನೀಡುವ ಗುರಿ: ಸಿಎಂ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕೋವಿಡ್ ಅಲೆ ಎದುರಿಸುವ ಕಾರ್ಯವು ರಾಜ್ಯ ಮತ್ತು ರಾಷ್ಟ್ರದ ಆರೋಗ್ಯ ವ್ಯವಸ್ಥೆಯ ಸಾಮರ್ಥ್ಯ ಮತ್ತು ಕೊರತೆಗಳೆರಡನ್ನೂ ತೆರೆದಿಟ್ಟಿತು. ಇದರಿಂದಾಗಿ ಆರೋಗ್ಯ ಕ್ಷೇತ್ರದ ಮೂಲ ಸೌಕರ್ಯಗಳಲ್ಲಿ ಗುಣಾತ್ಮಕ ಅಭಿವೃದ್ಧಿ ತರಲು ಕಾರಣವಾಗಿದೆ. 100 ಕೋಟಿ ಜನರಿಗೆ ಕೋವಿಡ್ ಡೋಸ್ ನೀಡಿರುವುದು ಸಾಮಾನ್ಯ ಸಾಧನೆಯಲ್ಲ.ಇದಕ್ಕಾಗಿ ಹೆಮ್ಮೆ ಪಡೋಣ, ಆದರೆ ವಿಶ್ರಮಿಸುವುದು ಬೇಡ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಕಿಮ್ಸ್ ಆವರಣದ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ 100 ಕೋಟಿ ಲಸಿಕಾಕರಣ ಭಾರತ ದೇಶದ ಪಯಣ ಕಾರ್ಯಕ್ರಮ ಹಾಗೂ ನ್ಯುಮೋಕಾಕಲ್ ಕಾಂಜುಗೇಟ್ ಲಸಿಕೆ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ‘ಬರುವ ಡಿಸೆಂಬರ್ ಅಂತ್ಯದೊಳಗೆ ರಾಜ್ಯದ ಅರ್ಹ ಶೇ 90ರಷ್ಟು ಜನರಿಗೆ ಮೊದಲ ಡೋಸ್ ಹಾಗೂ ಶೇ 70ರಷ್ಟು ಜನರಿಗೆ ಎರಡನೇ ಡೋಸ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ’ ಎಂದರು.

ವಿಪತ್ತನ್ನು ಕೂಡ ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳಬೇಕು ಎಂಬ ಮಾತನ್ನು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ನಿಜ ಮಾಡಿ ತೋರಿಸಿದೆ. ಕೋವಿಡ್ ದೇಶಕ್ಕೆ ಕಾಲಿಟ್ಟಾಗ ಸಾಕಷ್ಟು ಪ್ರಮಾಣದಲ್ಲಿ ಪಿಪಿಇ ಕಿಟ್, ಮಾಸ್ಕ್, ಕೈಗವಸುಗಳಿರಲಿಲ್ಲ. ಇಂದು ಈ ಉತ್ಪನ್ನಗಳನ್ನಷ್ಟೇ ಅಲ್ಲ, ಕೋವಿಡ್ ಲಸಿಕೆಯನ್ನು ಕೂಡ ರಫ್ತು ಮಾಡುವ ಸಾಮರ್ಥ್ಯ ಗಳಿಸಿಕೊಂಡಿದ್ದೇವೆ. ಭಾರತದ ಈ ಸಾಧನೆಗೆ ವಿಶ್ವವೇ ಬೆರಗಾಗಿದೆ ಎಂದರು.

ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುವಾಗ ಲಸಿಕಾಕರಣವೇ ಮದ್ದು ಎಂಬುದು ನೂರು ವರ್ಷಗಳ ಹಿಂದೆಯೇ ಸಾಬೀತಾಗಿದೆ. ಪೆನ್ಸಿಲಿನ್‌ಲಿಂದ ಪೋಲಿಯೋದವರೆಗೆ ಅನೇಕ ಲಸಿಕೆಗಳು ಮನುಷ್ಯನಿಗೆ ಶಕ್ತಿ ತುಂಬಿವೆ. ವೈರಾಣು ಅಣುಸ್ಫೋಟದಂತೆ ವೇಗವಾಗಿ ಹರಡಬಲ್ಲದು. ವೈರಾಣು ರೂಪಾಂತರಗೊಳ್ಳುವುದು ನಮ್ಮ ಮುಂದಿರುವ ಸವಾಲಾಗಿದೆ. ವಿಜ್ಞಾನಿಗಳು ಈ ನಿಟ್ಟಿನಲ್ಲಿ ಸಂಶೋಧನೆಗಳಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.

ಕೋವಿಡ್‌ನಿಂದಾಗಿ ನಮ್ಮ ರಾಜ್ಯದ ಆಸ್ಪತ್ರೆಗಳಲ್ಲಿ ಒಂದೇ ವರ್ಷದಲ್ಲಿ 1 ಲಕ್ಷ 25 ಸಾವಿರ ಹಾಸಿಗೆಗಳ ಸಾಮರ್ಥ್ಯ ಹೆಚ್ಚಾಗಿದೆ. ನಾಲ್ಕು ಸಾವಿರ ವೈದ್ಯಾಧಿಕಾರಿಗಳ ನೇಮಕ ಮಾಡಿಕೊಳ್ಳಲಾಗಿದೆ. ತಾಲ್ಲೂಕು ಆಸ್ಪತ್ರೆಗಳಲ್ಲಿಯೂ ಆಕ್ಸಿಜನ್ ಬೆಡ್‌ಗಳ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ಕಿಮ್ಸ್ ಕೆಲಸಕ್ಕೆ ಶ್ಲಾಘನೆ: ಉತ್ತರ ಕರ್ನಾಟಕದ ಹೆಮ್ಮೆ ಹಾಗೂ ಬಡವರ ಪಾಲಿನ ಸಂಜೀವಿನಿ ಎಂದೇ ಹೆಸರಾಗಿರುವ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ(ಕಿಮ್ಸ್)ಯನ್ನು ಈ ಪ್ರದೇಶದ ಆರೇಳು ಜಿಲ್ಲೆಗಳ ಅವಲಂಬಿಸಿವೆ. ಕೋವಿಡ್ ಮೊದಲ ಮತ್ತು ಎರಡನೇ ಅವಧಿಯಲ್ಲಿ ಕಿಮ್ಸ್ ನೀಡಿದ ಸೇವೆ ಶ್ಲಾಘನೀಯ ಎಂದು ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.

ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ದೇಶದಲ್ಲಿ ನೂರು ಕೋಟಿ ಕೋವಿಡ್ ಲಸಿಕೆ ನೀಡಲಾಗಿದೆ. ಇದಕ್ಕೆ ರಾಜ್ಯದ ಜನರೂ ಸಹಕಾರ ನೀಡಿದ್ದಾರೆ. ಹೆಚ್ಚು ಡೋಸ್‌ ಕೋವಿಡ್‌ ಲಸಿಕೆ ನೀಡಿದ ಪಟ್ಟಿಯಲ್ಲಿ ಮಧ್ಯಪ್ರದೇಶ, ಗುಜರಾತ್‌ ಮೊದಲ ಎರಡು ಸ್ಥಾನಗಳಲ್ಲಿವೆ. ಮೂರನೇ ಸ್ಥಾನ ಕರ್ನಾಟಕ ಹೊಂದಿದೆ’ ಎಂದರು.

ಸಕ್ಕರೆ ಖಾತೆ ಸಚಿವ ಶಂಕರಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ನವೀನರಾಜ್‌ಸಿಂಗ್, ಆರೋಗ್ಯ ಇಲಾಖೆಯ ಆಯುಕ್ತ ಡಾ. ರಂದೀಪ್ , ರಾಷ್ಟ್ರೀಯ ಆರೋಗ್ಯ ಮಿಷನ್‌ ವ್ಯವಸ್ಥಾಪಕ ನಿರ್ದೇಶಕಿ ಡಾ. ಅರುಂಧತಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಆಯುಕ್ತ ಲಾಬೂರಾಮ್‌, ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಬಿ. ಸುಶೀಲಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ. ಪ್ರಭು ಬಿರಾದಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ ಮದೀನಕರ್, ಕಿಮ್ಸ್ ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ಎಸ್.ಎಂ.ಹೊನಕೇರಿ, ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು