ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೂಕ, ಅಳತೆಯಲ್ಲಿ ದೋಷ ಕಂಡುಬಂದರೆ ಶೇ 900ರಷ್ಟು ದಂಡ

‘ಕರ್ನಾಟಕ ಕಾನೂನು ಮಾಪನ ನಿಯಮ –2022’ ಜಾರಿಗೆ ಅಧಿಸೂಚನೆ
Last Updated 20 ಜನವರಿ 2023, 23:24 IST
ಅಕ್ಷರ ಗಾತ್ರ

ಬೆಂಗಳೂರು: ಉತ್ಪನ್ನಗಳ ಪ್ಯಾಕೇಜ್, ಅಳತೆ ಮತ್ತು ತೂಕದಲ್ಲಿ ದೋಷ ಕಂಡುಬಂದರೆ ವಿಧಿಸುವ ದಂಡದ ಪ್ರಮಾಣವನ್ನು ರಾಜ್ಯ ಸರ್ಕಾರ ಇದೇ ಜನವರಿಯಿಂದ ಶೇ 100 ರಿಂದ ಶೇ 900ರಷ್ಟು ಹೆಚ್ಚಿಸಿದೆ. ಪರಿಷ್ಕೃತ ದಂಡ ಪ್ರಮಾಣವುಚಿಲ್ಲರೆ ವ್ಯಾಪಾರಿಗಳು, ಆಟೋ ಚಾಲಕರು, ಪೆಟ್ರೋಲ್‌ ಪಂಪ್‌ ಮಾಲೀಕರು ಸೇರಿ ಎಲ್ಲ ಬಗೆಯ ಸೇವಾ ಪೂರೈಕೆದಾರರಿಗೆ ಅನ್ವಯವಾಗಲಿದೆ.

ಇದೇ ಡಿಸೆಂಬರ್‌ನಲ್ಲಿ ‘ಕರ್ನಾಟಕ ಕಾನೂನು ಮಾಪನ (ಜಾರಿ) (ತಿದ್ದುಪಡಿ) ನಿಯಮ–2022’ದ ಅಧಿಸೂಚನೆ ಹೊರಡಿಸಲಾಗಿದ್ದು, ಅದರ ಅನ್ವಯ ವಿಧಿಸುವ ದಂಡದ ಮೊತ್ತ ₹ 5 ಸಾವಿರದಿಂದ ಆರಂಭವಾಗಲಿದೆ. ಡಿಸೆಂಬರ್‌ವರೆಗೆ ಜಾರಿಯಲ್ಲಿದ್ದ 2016ರ ನಿಯಮದ ಪ್ರಕಾರ ದಂಡದ ಮೊತ್ತ ₹ 2,500 ರಿಂದ ಆರಂಭವಾಗುತ್ತಿತ್ತು.

ಹೊಸ ನಿಯಮಗಳ ಪ್ರಕಾರ, ಪ್ಯಾಕ್‌ ಮಾಡಿದ ಸರಕುಗಳಲ್ಲಿ (ಆಹಾರ ಉತ್ಪನ್ನಗಳು, ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳು) ಅಸಮರ್ಪಕವಾಗಿ ಲೇಬಲ್‌ ಅಂಟಿಸಿದರೆ ತಯಾರಕರು, ವಿತರಕರು ₹ 5 ಸಾವಿರ ದಂಡ ಪಾವತಿಸಬೇಕಾಗುತ್ತದೆ. ಗರಿಷ್ಠ ಚಿಲ್ಲರೆ ಮಾರಾಟ ದರ (ಎಂಆರ್‌ಪಿ), ತೂಕ ಇತ್ಯಾದಿಗಳನ್ನು ಪ್ರದರ್ಶಿಸದಿರುವುದೂ ನಿಯಮಗಳ ಉಲ್ಲಂಘನೆ ಆಗಲಿದೆ. ಉತ್ಪನ್ನವನ್ನು ಸ್ವತಃ ಪ್ಯಾಕ್‌ ಮಾಡುವ ಚಿಲ್ಲರೆ ವ್ಯಾಪಾರಿಗಳು, ಅಸಮರ್ಪಕವಾಗಿ ಲೇಬಲ್ ಹಾಕಿದರೆ ₹ 2,500 ದಂಡ ಪಾವತಿಸಬೇಕಾಗಿದೆ. ಈ ದಂಡ ಪ್ರಮಾಣವು ಈ ಹಿಂದೆ ಕ್ರಮವಾಗಿ ₹ 2,500 ಮತ್ತು ₹ 500 ಆಗಿದ್ದವು. ಅಂದರೆ, ದಂಡ ಮೊತ್ತವು ಕ್ರಮವಾಗಿ ಶೇ 100 ಮತ್ತು ಶೇ 400ರಷ್ಟು ಹೆಚ್ಚಳವಾಗಿದೆ.

ಪ್ಯಾಕ್‌ ಮಾಡಿದ ಉತ್ಪನ್ನದಲ್ಲಿ ನಮೂದಿಸಿದ ನಿವ್ವಳ ಪ್ರಮಾಣ ಇಲ್ಲದೇ ಇದ್ದರೆ ತಯಾರಕರು, ವಿತರಕರಿಗೆ ವಿಧಿಸುವ ದಂಡ ಮೊತ್ತವು ಈ ಹಿಂದಿನಂತೆಯೇ (₹ 15 ಸಾವಿರ) ಇರಲಿದೆ. ಆದರೆ, ಚಿಲ್ಲರೆ‌ ವ್ಯಾಪಾರಿಗಳು ಈ ನಿಯಮವನ್ನು ಉಲ್ಲಂಘಿಸಿದರೆ ವಿಧಿಸುವ ದಂಡವನ್ನು ₹ 1 ಸಾವಿರದಿಂದ ₹ 5 ಸಾವಿರಕ್ಕೆ (ಶೇ 400) ಹೆಚ್ಚಿಸಲಾಗಿದೆ. ಪ್ರಮಾಣಿತ ತೂಕ ಮತ್ತು ಅಳತೆಗಳನ್ನು ಬಳಸದ ಮಾರಾಟಗಾರರಿಗೆ ದಂಡ ವಿಧಿಸಲು ಈ ನಿಯಮಗಳನ್ನು ರೂಪಿಸಲಾಗಿದೆ.

‘1, 2 ಮತ್ತು 5 ಕೆಜಿ ತೂಕದ ಪ್ರಮಾಣಿತ ತೂಕವನ್ನು ವ್ಯಾಪಾರಿಗಳು ಬಳಸಬೇಕು. ಆದರೆ, ಕೆಲವು ವ್ಯಾಪಾರಿಗಳು 3 ಕೆಜಿ ತೂಕಕ್ಕೆ ಪ್ರಮಾಣಿತ ತೂಕದ ಬದಲು ಬೇರೊಂದು ವಸ್ತುವನ್ನು ಬಳಸುತ್ತಾರೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಸಣ್ಣ ಪುಟ್ಟ ಅಂಗಡಿಯವರು, ಆಟೋ ಚಾಲಕರಿಗೂ ಪರಿಷ್ಕೃತ ನಿಯಮವು ಅನ್ವಯಿಸಲಿದೆ. ಆದರೆ, ಮಾನವೀಯತೆಯ ಆಧಾರದಲ್ಲಿ ಅಂಥವರಿಗೆ ವಿಧಿಸುವ ದಂಡ ಪ್ರಮಾಣವನ್ನು ₹ 500 ರ ಒಳಗೆ ಮಿತಿಗೊಳಿಸಲಾಗಿದೆ. ಹಳೆಯ ಮೀಟರ್‌ಗಳನ್ನು ಬಳಸುವ ಅಥವಾ ಹೊಸ ದರಗಳಿಗೆ ಅನ್ವಯವಾಗುವಂತೆ ತಮ್ಮ ಮೀಟರ್‌ಗಳನ್ನು ನವೀಕರಿಸದ ಆಟೋ ಚಾಲಕರಿಗೆ ಈ ನಿಯಮದಡಿ ದಂಡ ವಿಧಿಸಲು ಅವಕಾಶವಿದೆ’ ಎಂದೂ ಅವರು ಹೇಳಿದರು.

ಪ್ರಮಾಣಿತವಲ್ಲದ ತೂಕ, ಅಳತೆ ಬಳಸಿಕೊಂಡು ವಾಣಿಜ್ಯ ವಹಿವಾಟು ನಡೆಸುವವರಿಗೆ ₹ 10 ಸಾವಿರ ದಂಡ ವಿಧಿಸಲು ಹೊಸ ನಿಯಮದಲ್ಲಿ ಅವಕಾಶವಿದೆ. ಪ್ಯಾಕೇಜ್ ಮಾಡದ ಸರಕುಗಳನ್ನು (ಪೆಟ್ರೋಲ್ ಅಥವಾ ಪಡಿತರ ಧಾನ್ಯ ಇತ್ಯಾದಿ) ಮಾರಾಟಗಾರ ಖಚಿತಪಡಿಸಿದ ಪ್ರಮಾಣದಷ್ಟು ಪೂರೈಸದಿದ್ದರೂ ಇದೇ ದಂಡ ಅನ್ವಯವಾಗಲಿದೆ. ಈ ಎರಡೂ ಅಪರಾಧಗಳಿಗೆ ಈ ಹಿಂದೆ ಕೇವಲ ₹ 1 ಸಾವಿರ ದಂಡ ವಿಧಿಸಲಾಗುತ್ತಿತ್ತು.

‘ಪ್ರಮಾಣಿತವಲ್ಲದ ಅಳತೆಗಳನ್ನು ಬಳಸಿಕೊಂಡು ಉತ್ಪನ್ನಗಳ ಜಾಹೀರಾತು ಅಥವಾ ದರ ಪಟ್ಟಿ ಪ್ರದರ್ಶಿಸಿದರೆ ಇನ್ನು ಮುಂದೆ ₹ 10 ಸಾವಿರ ದಂಡ ವಿಧಿಸಲಾಗುವುದು. ಉದಾಹರಣೆಗೆ, ಚಿನ್ನದ ದರದ ಜಾಹೀರಾತುಗಳು ಕೆಜಿ, ಗ್ರಾಂನಲ್ಲಿ ಇರಬೇಕು’ ಎಂದು ಅಧಿಕಾರಿ ಹೇಳಿದರು.

ನಿಯಮ ಉಲ್ಲಂಘನೆ ಗಮನಕ್ಕೆ ಬಂದರೆ ಕರೆ ಮಾಡಿ (080-22253500) ಅಥವಾ ಇ–ಮೇಲ್‌ ಮೂಲಕ (clm-lm-ka@nic.in) ಗ್ರಾಹಕರು ದೂರು ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT