ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹9,500 ಕೋಟಿ ಹೆಚ್ಚುವರಿ ತೆರಿಗೆ ಸಂಗ್ರಹ: ಬೊಮ್ಮಾಯಿ

ವಿತ್ತೀಯ ಶಿಸ್ತು ಹಳಿಗೆ ತರಲು ಏಪ್ರಿಲ್‌ನಿಂದಲೇ ಇನ್ನಷ್ಟು ಕಠಿಣ ಶ್ರಮ– ಬೊಮ್ಮಾಯಿ
Last Updated 29 ಮಾರ್ಚ್ 2022, 16:53 IST
ಅಕ್ಷರ ಗಾತ್ರ

ಬೆಂಗಳೂರು: 2021–22 ನೇ ಸಾಲಿನಲ್ಲಿ ನಿಗದಿತ ಗುರಿಗಿಂತ ₹9,500 ಕೋಟಿ ಹೆಚ್ಚುವರಿ ತೆರಿಗೆ ಸಂಗ್ರಹವಾಗಿದೆ ಎಂದು ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಸಭೆಯಲ್ಲಿ ಮಂಗಳವಾರ ವಿವಿಧ ಇಲಾಖೆಗಳ ಅನುದಾನ ಬೇಡಿಕೆಗಳ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ‘2021–22 ನೇ ಸಾಲಿಗೆ ₹1,19,522 ಕೋಟಿ ತೆರಿಗೆ ಸಂಗ್ರಹದ ಗುರಿ ಇತ್ತು. ಹೆಚ್ಚಿನ ತೆರಿಗೆ ಸಂಗ್ರಹಕ್ಕಾಗಿ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಇದರ ಪರಿಣಾಮ ಮೋಟಾರು ವಾಹನ ತೆರಿಗೆ ಬಿಟ್ಟು ₹7,500 ಕೋಟಿ ಹೆಚ್ಚುವರಿ ತೆರಿಗೆ ಸಂಗ್ರಹವಾಗಬಹುದು ಎಂಬ ನಿರೀಕ್ಷೆ ಇತ್ತು. ನಮ್ಮ ನಿರೀಕ್ಷೆಯನ್ನೂ ಮೀರಿ ಎರಡು ಸಾವಿರ ಕೋಟಿ ಅಧಿಕ ತೆರಿಗೆ ಸಂಗ್ರಹವಾಯಿತು’ ಎಂದರು.

‘ತೆರಿಗೆ ಸೋರಿಕೆ ಆಗುತ್ತಿರುವ ಮೂಲಗಳನ್ನು ಪತ್ತೆ ಮಾಡಿ ಅದರ ತಡೆಗೆ ಕ್ರಮ ತೆಗೆದುಕೊಳ್ಳಲಾಯಿತು. ಅಬಕಾರಿಯಲ್ಲಿ ‘ನಂ2’ ದಂಧೆ ಇನ್ನೂ ನಡೆಯುತ್ತಿದ್ದು, ನಿರ್ದಿಷ್ಟವಾಗಿ ಎಲ್ಲೆಲ್ಲಿ ನಡೆಯುತ್ತಿದೆ ಎಂಬುದನ್ನು ನಾನೇ ಅಧಿಕಾರಿಗಳ ಗಮನಕ್ಕೆ ತಂದೆ. ಇದರಿಂದ ಸುಮಾರು ₹2,000 ಕೋಟಿ ಅಧಿಕ ವರಮಾನ ಸಂಗ್ರಹ ಮಾಡಲಾಯಿತು. ಮುದ್ರಾಂಕ ಶುಲ್ಕದಲ್ಲಿ ಶೇ 10 ರಷ್ಟು ರಿಯಾಯ್ತಿ ನೀಡಿದ್ದರಿಂದ ಹೆಚ್ಚುವರಿಯಾಗಿ ₹100 ಕೋಟಿ ಸಂಗ್ರಹವಾಯಿತು. ಕಬ್ಬಿಣ ಅದಿರು ಮಾರಾಟ ಮಾಡಿದ್ದರಿಂದ ₹500 ಕೋಟಿ ಸಿಕ್ಕಿತು. ಅಲ್ಲದೆ, ತೆರಿಗೆಯೇತರ ಆದಾಯ ₹4,000 ಕೋಟಿ ಹೆಚ್ಚಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೂ ಕೂಡ ನಿರೀಕ್ಷೆ ಮೀರಿ ಅಂದರೆ ₹6,000 ಕೋಟಿ ಸಂಗ್ರಹವಾಗಿದೆ. ಬಜೆಟ್‌ ಗಾತ್ರ ಕಡಿಮೆ ಮಾಡಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದರು. ಅದಕ್ಕೆ ನಾನು ಒಪ್ಪಿಗೆ ನೀಡಿರಲಿಲ್ಲ’ ಎಂದರು.

ವರಮಾನ ಹೆಚ್ಚಳಕ್ಕೆ ಶ್ರಮ:

ಕೇಂದ್ರದಿಂದ ಜಿಎಸ್‌ಟಿ ಪರಿಹಾರ ಬರಲಿ ಬಿಡಲಿ, ಆಂತರಿಕ ವರಮಾನ ಹೆಚ್ಚಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಈ ಮೂಲಕ ರಾಜ್ಯದ ವಿತ್ತೀಯ ಶಿಸ್ತು ಕಾಪಾಡಲು ಏಪ್ರಿಲ್‌ನಿಂದಲೇ ಕಠಿಣ ಪರಿಶ್ರಮ ಹಾಕುವುದಾಗಿ ಬೊಮ್ಮಾಯಿ ಹೇಳಿದರು.

ಕೋವಿಡ್‌ ಎರಡನೇ ಅಲೆಯ ಬಳಿಕ ರಾಜ್ಯದ ಆರ್ಥಿಕ ಚಟುವಟಿಕೆಯಲ್ಲಿ ಚೇತರಿಕೆ ಆಗಿದೆ. ಮೊದಲ ಎರಡು ಅಲೆಗಳ ಸಂದರ್ಭದಲ್ಲಿ ಲಾಕ್‌ಡೌನ್‌ ಪರಿಣಾಮ ಆರ್ಥಿಕ ಚಟುವಟಿಕೆ ತಳಮುಟ್ಟಿತ್ತು. ಏನೂ ಆದಾಯ ಇರಲಿಲ್ಲ. ಆ ಬಳಿಕ ಹೊಸದಾಗಿಯೇ ಎಲ್ಲ ಆರಂಭಗೊಂಡಿತು. ಮೂರನೇ ಅಲೆ ಹೆಚ್ಚಿಗೆ ಬಾಧಿಸಲಿಲ್ಲ. ಆರ್ಥಿಕ ಚಟುವಟಿಕೆ ಸುಗಮವಾಗಿ ನಡೆಯಿತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT