ದಾವಣಗೆರೆ: ಇಲ್ಲಿನ ರಾಮನಗರದ ಯುವತಿಯೊಬ್ಬರು ತಮ್ಮ ನೆಚ್ಚಿನ ನಟ ದುನಿಯಾ ವಿಜಯ್ ಬಂದು ಹಾರೈಸಿದರೆ ಮಾತ್ರ ಮದುವೆಯಾಗುವುದಾಗಿ ಹಠ ಹಿಡಿಯುವ ಮೂಲಕ ಅಭಿಮಾನ ಮೆರೆದಿದ್ದಾರೆ.
ರಾಮನಗರದ ಶಿವಾನಂದ ಭಜಂತ್ರಿ ಅವರ ಪುತ್ರಿ ಅನುಷಾ ಅವರ ವಿವಾಹವು ಸ್ವಗೃಹದಲ್ಲಿ ನವೆಂಬರ್ 29ರಂದು ಪ್ರಕಾಶ್ ಎಂಬ ಯುವಕನ ಜೊತೆ ನಿಗದಿಯಾಗಿದೆ. ದುನಿಯಾ ವಿಜಯ್ ಅವರ ಅಪ್ಪಟ ಅಭಿಮಾನಿಯಾಗಿರುವ ಅನುಷಾ ಅವರು ತಮ್ಮ ಮದುವೆಗೆ ನೆಚ್ಚಿನ ನಟ ಬರಲೇಬೇಕು ಎಂದು ದಾರಿ ಕಾಯುತ್ತಿದ್ದಾರೆ.
ಶಿವಾನಂದ ಭಜಂತ್ರಿ ಅವರೂ ದುನಿಯಾ ವಿಜಯ್ ಅವರ ಅಭಿಮಾನಿ. ತಾವು ಕಟ್ಟಿಸಿದ ಮನೆಗೆ ‘ದುನಿಯಾ ಋಣ’ ಎಂದು ಹೆಸರಿಟ್ಟಿದ್ದರು. ನೆಚ್ಚಿನ ನಟ ಬಂದು ಉದ್ಘಾಟನೆ ಮಾಡುವವರೆಗೂ ಗೃಹ ಪ್ರವೇಶ ಮಾಡುವುದಿಲ್ಲ ಎಂದು ಐದು ವರ್ಷಗಳ ಹಿಂದೆ ಪಟ್ಟು ಹಿಡಿದ್ದರು. ಈ ವಿಚಾರ ತಿಳಿದು ದುನಿಯಾ ವಿಜಯ್ ಗೃಹಪ್ರವೇಶಕ್ಕೆ ಬಂದು ಹೋಗಿದ್ದರು. ಇದೀಗ ಶಿವಾನಂದ ಅವರ ಪುತ್ರಿಯೂ ನೆಚ್ಚಿನ ನಟ ಬಂದರೆ ಮಾತ್ರ ಮದುವೆ ಮಾಡಿಕೊಳ್ಳುವುದಾಗಿ ಪಟ್ಟು ಹಿಡಿದಿದ್ದಾಳೆ. ವಿವಾಹ ಆಮಂತ್ರಣ ಪತ್ರಿಕೆಯಲ್ಲೂ ತಮ್ಮ ಫೋಟೊ ಪಕ್ಕ ನೆಚ್ಚಿನ ನಟನ ಫೋಟೊವನ್ನು ಮುದ್ರಿಸಿದ್ದಾರೆ. ‘ಒಂಟಿ ಸಲಗ’ ಎಂದು ಕೈಗೆ ಹಚ್ಚೆಯನ್ನೂ ಹಾಕಿಸಿಕೊಂಡಿದ್ದಾರೆ. ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
‘ಐದು ವರ್ಷಗಳ ಹಿಂದೆ ನಮ್ಮ ಮನೆಯ ಉದ್ಘಾಟನೆಗೆ ದುನಿಯಾ ವಿಜಯ್ ಬಂದು ಹೋಗಿದ್ದರು. ಇದೀಗ ಮಗಳೂ ವಿಜಯಣ್ಣ ಬರಬೇಕು ಎಂದು ಹಠ ಹಿಡಿದಿದ್ದಾಳೆ. ನಾನು ಅಂಗವಿಕಲನಾಗಿದ್ದೇನೆ. ಮಗಳ ಆಸೆಯಂತೆ ನೆಚ್ಚಿನ ನಟ ಬಂದು ಹಾರೈಸಲಿ ಎಂದು ನಾವೂ ಬಯಸುತ್ತಿದ್ದೇವೆ’ ಎಂದು ಶಿವಾನಂದ ಭಜತ್ರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ನಾನು ದುನಿಯಾ ವಿಜಯ್ ಅಪ್ಪಟ ಅಭಿಮಾನಿ. ನನ್ನ ಮದುವೆಗೆ ವಿಜಯಣ್ಣ ಬಂದು ಅಕ್ಷತೆ ಹಾಕಬೇಕು ಎಂದು ಅಭಿಮಾನಿಗಳ ಸಂಘದ ರಾಜ್ಯ ಅಧ್ಯಕ್ಷರಿಗೆ ಮೂರು ತಿಂಗಳ ಹಿಂದೆಯೇ ಮನವಿ ಸಲ್ಲಿಸಿದ್ದೇನೆ. ಅವರು ಬಂದು ಹಾರೈಸಿದರೆ ಮಾತ್ರ ಮದುವೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ್ದೇನೆ. ಅಭಿಮಾನಿಯ ಮನವಿಗೆ ಸ್ಪಂದಿಸಿ, ಮದುವೆಗೆ ಬರಲಿದ್ದಾರೆ ಎಂಬ ವಿಶ್ವಾಸ ಇದೆ’ ಎಂದು ಅನುಷಾ ತಮ್ಮ ಮನದಾಳದ ಆಸೆಯನ್ನು ಹೇಳಿಕೊಂಡರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.