ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪದ ಬೆಳಕಿನಲ್ಲಿ ಅದ್ಧೂರಿ ಜಂಬೂಸವಾರಿ

Last Updated 5 ಅಕ್ಟೋಬರ್ 2022, 18:54 IST
ಅಕ್ಷರ ಗಾತ್ರ

ಮೈಸೂರು: ಕೋವಿಡ್‌ನಿಂದಾಗಿ ಎರಡು ವರ್ಷ ಅಂಬಾವಿಲಾಸ ಅರಮನೆಯ ಆವರಣಕ್ಕಷ್ಟೇ ಸೀಮಿತವಾಗಿದ್ದನಾಡಹಬ್ಬ ದಸರಾ ಉತ್ಸವದ ಜಂಬೂ ಸವಾರಿ ಬುಧವಾರ ಅದ್ಧೂರಿಯಾಗಿ ನಡೆಯಿತು. ಇದಕ್ಕೆ ಸಾವಿರಾರು ಮಂದಿ ಸಾಕ್ಷಿ ಯಾದರು.

ಸಂಜೆ 5.37ಕ್ಕೆ ಅರಮನೆ ಆವರಣ ದಲ್ಲಿ ಶುರುವಾದ ಜಂಬೂಸವಾರಿ ರಾಜಪಥವನ್ನು ಪ್ರವೇಶಿಸಿ ಮುಂದೆ ಸಾಗುವ ಹೊತ್ತಿಗೆ ಕತ್ತಲೆ ಆವರಿಸಿತು. ರಸ್ತೆಯುದ್ದಕ್ಕೂ ಝಗಮಗಿಸಿದ ವಿದ್ಯುತ್‌ ದೀಪಾಲಂಕಾರದ ಬೆಳಕಿನಲ್ಲಿ ಅಂಬಾರಿಯು ಹೊಳೆದು ದಸರೆಯನ್ನು ವಿಶೇಷವಾಗಿ ಸಂಪನ್ನಗೊಳಿಸಿತು. ವಿದ್ಯುತ್ ದೀಪಗಳ ಬೆಳಕಿನಲ್ಲಿ ಸಾಗಲು ಆನೆಗಳಿಗೆ ತರಬೇತಿಯನ್ನೂ ನೀಡಿದ್ದು ಈ ಬಾರಿಯ ವಿಶೇಷ. ಉತ್ಸವದ ಇತಿಹಾಸದಲ್ಲಿ ಇದೇ ಮೊದಲು.

ಮಧ್ಯಾಹ್ನ 2.34ಕ್ಕೆ ಅರಮನೆ ಹೊರ ಆವರಣದ ಕೋಟೆ ಆಂಜನೇಯ ಗುಡಿಯ ಮುಂದೆ ನಂದಿಧ್ವಜಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೂಜೆ ಸಲ್ಲಿಸಿದ ಬಳಿಕ ಸ್ತಬ್ಧಚಿತ್ರ ಮತ್ತು ಕಲಾತಂಡಗಳ ಮೆರವಣಿಗೆ ಆರಂಭವಾಯಿತು.

ಎರಡೂವರೆ ಗಂಟೆ ಜನಸಾಗರವನ್ನು ಆಕರ್ಷಕ ಮೆರವಣಿಗೆ ಹಿಡಿದಿಟ್ಟಿತ್ತು. ಬಳಿಕ, ಅಭಿಮನ್ಯು ಆನೆ ಹೊತ್ತಿದ್ದ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ಅಲಂಕರಿಸಿಡಲಾಗಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುಷ್ಪನಮನ ಸಲ್ಲಿಸಿದರು.

ರಾಷ್ಟ್ರಗೀತೆ ಮುಗಿಯುವುದರೊಳಗೆ 21 ಸುತ್ತು ಕುಶಾಲತೋಪು ಸಿಡಿಸಲಾಯಿತು. ಆನೆಗಳು ಸೊಂಡಿಲೆತ್ತಿ ದೇವಿಗೆ ನಮಸ್ಕರಿಸಿದವು. ಎಲ್ಲರೂ ಚಾಮುಂಡೇಶ್ವರಿಗೆ ಜೈಕಾರ ಹಾಕಿದ ಬಳಿಕ ಅಂಬಾರಿಯು ಮುಂದಕ್ಕೆ ಸಾಗಿತು.

ಅಂಬಾರಿ ಆನೆ ಜೊತೆ ಕುಮ್ಕಿ ಆನೆಗಳಾಗಿ ಚೈತ್ರಾ, ಕಾವೇರಿ ಹೆಜ್ಜೆ ಹಾಕಿದರೆ, ಅರ್ಜುನ ನಿಶಾನೆ ಆನೆಯಾಗಿ ಜವಾಬ್ದಾರಿ ನಿರ್ವಹಿಸಿದ. ಮಹೇಂದ್ರ, ಭೀಮ, ಧನಂಜಯ, ಗೋಪಾಲಸ್ವಾಮಿ ಹಾಗೂ ಗೋಪಿ ಆನೆಗಳು ಜೊತೆ ಯಾದವು. ಆಕರ್ಷಕವಾದ ಸ್ತಬ್ಧಚಿತ್ರಗಳು, ಪೊಲೀಸ್‌ ಪಡೆ, ಅಶ್ವಾರೋಹಿ ಪಡೆಗಳೊಂದಿಗೆ, ಜಾನಪದ ಕಲಾ ತಂಡಗಳ ನೂರಾರು ಕಲಾವಿದರು ಸಾಂಸ್ಕೃತಿಕ ವೈಭವವನ್ನು ಸೃಷ್ಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT