ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಸಂಘದ ಹೆಸರು, ಲಾಂಛನ, ಹಸಿರು ಟವಲ್‌ನಲ್ಲಿ ಮಾರ್ಪಾಡು: ಚಳವಳಿಗೆ ಹೊಸ ಆಯಾಮ

Last Updated 18 ಫೆಬ್ರುವರಿ 2021, 22:02 IST
ಅಕ್ಷರ ಗಾತ್ರ

ಮೈಸೂರು: ‘ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ’ಯ ಹೆಸರಿನಲ್ಲಿ ತುಸು ಮಾರ್ಪಾಡು ಮಾಡಲಾಗಿದ್ದು, ಇನ್ನು ಮುಂದೆ ‘ಕರ್ನಾಟಕ ರಾಜ್ಯ ರೈತ ಸಂಘ’ ಎಂದಷ್ಟೇ ಗುರುತಿಸಲಾಗುತ್ತದೆ.

ಸಂಘದ ವತಿಯಿಂದ ಗುರುವಾರ ಇಲ್ಲಿ ನಡೆದ ರೈತ ನಾಯಕ ‘ಕೆ.ಎಸ್‌.ಪುಟ್ಟಣ್ಣಯ್ಯನವರ ನೆನಪು’ ಕಾರ್ಯಕ್ರಮದಲ್ಲಿ ಈ ಬದಲಾವಣೆಯನ್ನು ಅಂಗೀಕರಿಸಲಾಯಿತು. ನೇಗಿಲಿನ ಚಿತ್ರ ಇರುವ ಹಸಿರು ಟವಲ್‌, ಹೊಸ ಲಾಂಛನ, ಹೊಸ ಬಾವುಟ ಹಾಗೂ ‘ನೇಗಿಲ ಹಾಡು’ ಹೆಸರಿನ ಪತ್ರಿಕೆಯನ್ನು ಅನಾವರಣಗೊಳಿಸಲಾಯಿತು.

ರಾಜ್ಯದ ಪ್ರತಿ ಗ್ರಾಮದಲ್ಲಿ ‘ನಮ್ಮ ಭೂಮಿ ನಮ್ಮ ಹಕ್ಕು, ಅನ್ಯರಿಗೆ ಮಾರಾಟಕ್ಕಿಲ್ಲ’ ಎಂಬ ನಾಮಫಲಕ ಅಳವಡಿಸಲು ನಿರ್ಣಯ ಕೈಗೊಳ್ಳಲಾಯಿತು. ರೈತ ಚಳವಳಿಗೆ ಹೊಸ ಆಯಾಮ ನೀಡುವ ಉದ್ದೇಶದೊಂದಿಗೆ ಸಂಘದ ಹೊಸ ಸಂವಿಧಾನವನ್ನು ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಬಿಡುಗಡೆ ಮಾಡಿದರು.

ಮಹಿಳೆಯರಿಗೆ ಹಾಗೂ ಯುವ ಜನರಿಗೆ ಹೆಚ್ಚಿನ ಆದ್ಯತೆ ನೀಡಲು ತೀರ್ಮಾನಿಸಲಾಗಿದ್ದು, ಸಂಘದ ಹೊಸ ವೆಬ್‌ಸೈಟ್‌ (www.krrs.org) ಜೊತೆಗೆ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಟ್ವಿಟರ್‌ ಖಾತೆಯನ್ನು ಘೋಷಿಸಲಾಯಿತು.

’ರಾಜಕಾರಣಿಗಳು ರೈತರ ಹೆಸರು ಹೇಳಿಕೊಂಡು, ಹಸಿರು ಶಾಲು ಹೊದ್ದು ರಾಜಕಾರಣ ಮಾಡುತ್ತಿದ್ದಾರೆ. ಯಾವುದೇ ತತ್ವ ಸಿದ್ಧಾಂತ ಇಲ್ಲದ ಬಿ.ಸಿ.ಪಾಟೀಲ ಅವರಂಥವರೂ ಹಸಿರು ಶಾಲು ಹಾಕಿಕೊಂಡು ಬರುತ್ತಾರೆ. ಈಚೆಗೆ ರೈತರಿಂದ ಉಗಿಸಿಕೊಂಡಿದ್ದಾರೆ’ ಎಂದು ಸಂಘದ ಗೌರವ ಅಧ್ಯಕ್ಷ ಚಾಮರಸ ಮಾಲೀಪಾಟೀಲ ಹೇಳಿದರು.

‘ಯಾವುದೇ ಕಾಳಜಿ ಇಲ್ಲದ ಕೆಲವರು, ರೈತ ಸಂಘದ ಹೆಸರು ಹೇಳಿಕೊಂಡು ಹೋರಾಟದ ಹೆಸರಿನಲ್ಲಿ ಆಸ್ತಿ ಅಂತಸ್ತು ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಮೇಧಾವಿಗಳು ಎಂದು ಭಾವಿಸಿಕೊಂಡು ಗುಂಪುಗಾರಿಕೆ ನಡೆಸುತ್ತಿದ್ದಾರೆ. ಸರ್ಕಾರದಿಂದ, ಹೊರದೇಶದಿಂದ ಬರುವ ಹಣ ಲೂಟಿ ಹೊಡೆಯುತ್ತಿದ್ದಾರೆ’ ಎಂದು ಆರೋಪಿಸಿದರು.

ಸಂಘದ ಮಹಿಳಾ ಘಟಕದ ಅಧ್ಯಕ್ಷರಾದ ನಂದಿನಿ ಜಯರಾಂ ಮಾತನಾಡಿದರು. ರೈತಗೀತೆ ಹಾಡುವಾಗ ಕೆ.ಎಸ್‌.ಪುಟ್ಟಣ್ಣಯ್ಯ ಅವರನ್ನು ನೆನೆದು, ಪತ್ನಿ ಸುನೀತಾ ಪುಟ್ಟಣ್ಣಯ್ಯ, ಪುತ್ರಿ ಸ್ಮಿತಾ ಪುಟ್ಟಣ್ಣಯ್ಯ ಕಣ್ಣೀರಾದರು.

‘ಆದಾಯ ಘೋಷಿಸಿಕೊಳ್ಳಬೇಕು’
‘ಹೋರಾಟದಲ್ಲಿ ತೊಡಗಿರುವವರ ಮೇಲೂ ಭ್ರಷ್ಟಾಚಾರದ ಆರೋಪ ಬರುತ್ತಿದೆ. ಕೆಲವರು ಹಸಿರು ಶಾಲು ಹಾಕಿಕೊಂಡು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ, ಸಂಘದ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ, ಸಂಘದ ರಾಜ್ಯ ಪದಾಧಿಕಾರಿಗಳೂ ವಾರ್ಷಿಕ ಸಾರ್ವಜನಿಕವಾಗಿಆಸ್ತಿ ಘೋಷಣೆ ಮಾಡಬೇಕು, ಆರ್ಥಿಕ ವ್ಯವಹಾರ ಪಾರದರ್ಶಕವಾಗಿರಬೇಕು’ ಎಂದೂ ಬಡಗಲಪುರ ನಾಗೇಂದ್ರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT