ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕೆ ಇಷ್ಟು ದರ್ಪ ಅರವಿಂದ ಲಿಂಬಾವಳಿ ಅವರೇ? ಎಎಪಿ ಪ್ರಶ್ನೆ 

ಅಹವಾಲು ಹೇಳಿಕೊಳ್ಳಲು ಬಂದ ಮಹಿಳೆಯನ್ನು ನಿಂದಿಸಿದ್ದ ಶಾಸಕ
Last Updated 3 ಸೆಪ್ಟೆಂಬರ್ 2022, 2:57 IST
ಅಕ್ಷರ ಗಾತ್ರ

ಬೆಂಗಳೂರು: ಅಹವಾಲು ಹೇಳಿಕೊಳ್ಳಲು ಬಂದ ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಆಮ್‌ ಆದ್ಮಿ ಪಕ್ಷದ ರಾಜ್ಯ ಘಟಕ ಟೀಕಿಸಿದೆ. ‘ಏಕೆ ಇಷ್ಟು ದರ್ಪ?’ ಎಂದು ಪ್ರಶ್ನೆ ಮಾಡಿದೆ.

ಸೋಮವಾರ ಸುರಿದ ಮಳೆಯಿಂದಾಗಿ ಮಹದೇವಪುರದ ಕ್ಷೇತ್ರ ವ್ಯಾಪ್ತಿಯ ಹಲವೆಡೆ ಪ್ರವಾಹ ಉಂಟಾಗಿ ಸಮಸ್ಯೆ ಎದುರಾಗಿತ್ತು. ಗುರುವಾರ ಮಧ್ಯಾಹ್ನ ನಲ್ಲೂರಹಳ್ಳಿಯ ವೈಟ್‌ಫೀಲ್ಡ್ ಕೋಡಿ ಸರ್ಕಲ್ ಬಳಿಯ ರಾಜಕಾಲುವೆ ಒತ್ತುವರಿ ಆಗಿರುವ ಸ್ಥಳಕ್ಕೆ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಾಜಕಾಲುವೆಗೆ ಹೊಂದಿಕೊಂಡಂತೆ ಇರುವ ವಾಣಿಜ್ಯ ಕಟ್ಟಡದ ಕೆಲ ಭಾಗವನ್ನು ಜೆಸಿಬಿಯಿಂದ ತೆರವುಗೊಳಿಸುವ ವೇಳೆ ಸ್ಪಷ್ಟನೆ ನೀಡಲು ಮುಂದಾದ ರುತ್ ಸಗಾಯಿ ಮೇರಿ ಅಮೀಲಾ ಎಂಬ ಮಹಿಳೆ, ದಾಖಲೆ ಪತ್ರಗಳನ್ನು ತೋರಿಸಿ ಶಾಸಕರ ಬಳಿ ಅಳಲು ತೋಡಿಕೊಳ್ಳಲು ಮುಂದಾದರು. ಮಹಿಳೆ ಕೈಯಿಂದ ದಾಖಲೆ ಕಿತ್ತುಕೊಳ್ಳಲು ಶಾಸಕರು ಯತ್ನಿಸಿದರು. ಪತ್ರಗಳನ್ನು ಕೊಡಲು ನಿರಾಕರಿಸಿದ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡು ಏಕ ವಚನದಲ್ಲೇ ನಿಂದಿಸಿದರು.

ಶಾಸಕರು ಮಹಿಳೆಯೊಂದಿಗೆ ಏರುಧ್ವನಿಯಲ್ಲಿ ಮಾತನಾಡುತ್ತಿರುವ ವಿಡಿಯೊವನ್ನು ಹಂಚಿಕೊಂಡಿರುವ ಎಎಪಿ, ತೀವ್ರ ಟೀಕೆ ಮಾಡಿದೆ.

‘ಇದೇನಿದು ಅರವಿಂದ ಲಿಂಬಾವಳಿ ಅವರೇ? ಒಂದು ಹೆಣ್ಣಿನೊಂದಿಗೆ ನಡೆದುಕೊಳ್ಳುವ ರೀತಿಯೇ ಇದು? ತಪ್ಪಿದ್ದರೆ ಕಾನೂನಿದೆ. ಇದೇನು ನಿಮ್ಮ ಮಾತುಗಳು? ನಿಮ್ಮ ಸ್ಥಾನಕ್ಕೆ ಶೋಭೆ ತರುವುದೆ? ಅಧಿಕಾರ ಶಾಶ್ವತ ಅಲ್ಲ, ಅದೇತಕೆ ಇಷ್ಟು ದರ್ಪ?’ ಎಂದು ಪ್ರಶ್ನೆ ಮಾಡಿದೆ.

‘ಒತ್ತುವರಿ ಮಾಡಿಕೊಂಡು ನನಗೆ ನ್ಯಾಯ ಕೇಳಲು ಬರುತ್ತಿಯಾ, ಮಾನ ಮರ್ಯಾದೆ ಇಲ್ವ ನಿನಗೆ, ನನಗೂ ಬೇರೆ ಭಾಷೆ ಬರುತ್ತೆ. ಇವಳಿಗೆ ಮರ್ಯಾದೆ ಬೇರೆ ಕೇಡು, ಒದ್ದು ಒಳಗೆ ಹಾಕಿ’ ಎಂದು ಅರವಿಂದ ಲಿಂಬಾವಳಿ ಅವರು ಸ್ಥಳದಲ್ಲಿದ್ದ ಪೊಲೀಸರಿಗೆ ಸೂಚನೆ ನೀಡಿರುವುದು ವೈರಲ್‌ ಆಗಿರುವ ವಿಡಿಯೊದಲ್ಲಿದೆ.

‘ಮರ್ಯಾದೆಯಿಂದ ಮಾತನಾಡಿ. ಹೆಣ್ಣುಮಕ್ಕಳು ಅನ್ನುವ ಗೌರವ ಇರಲಿ. ನೀವು‌ ನನಗೂ ಎಂಎಲ್ಎ. ಎಲ್ಲರಿಗೂ ಶಾಸಕರೇ’ ಎಂದು ಮಹಿಳೆ ಹೇಳಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಇವುಗಳನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT