ಸರ್ಕಾರದ ನಿರ್ಲಕ್ಷದಿಂದ ಮಕ್ಕಳ ಭವಿಷ್ಯ ಡೋಲಾಯಮಾನ: ಪೃಥ್ವಿ ರೆಡ್ಡಿ ಆರೋಪ

ಬೆಂಗಳೂರು: ‘ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಹದಗೆಡುತ್ತಿದೆ. ಸರ್ಕಾರದ ನಿರ್ಲಕ್ಷದಿಂದಾಗಿ ಮಕ್ಕಳ ಭವಿಷ್ಯ ಡೋಲಾಯಮಾನವಾಗಿದೆ. ಜನರ ಹಿತ ಕಾಯಬೇಕಾದ ಸರ್ಕಾರವು ಖಾಸಗಿ ಶಾಲಾ ಆಡಳಿತ ಮಂಡಳಿಯವರ ಜೊತೆ ಕೈಜೋಡಿಸಿ ಪೋಷಕರ ಜೀವ ಹಿಂಡುತ್ತಿದೆ’ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಆರೋಪಿಸಿದರು.
ಪಕ್ಷವು ಆರಂಭಿಸಿರುವ ‘ಫೀಸ್ ಇಳಿಸಿ; ಮಕ್ಕಳ ಭವಿಷ್ಯ ಉಳಿಸಿ’ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
‘ಕೋವಿಡ್ ಬಿಕ್ಕಟ್ಟಿನಿಂದಾಗಿ ಹಲವು ಪೋಷಕರು ಕೆಲಸ ಕಳೆದುಕೊಂಡಿದ್ದಾರೆ. ಮಕ್ಕಳ ಶಾಲಾ ಶುಲ್ಕ ಪಾವತಿಸಲಾಗದ ಪರಿಸ್ಥಿತಿಗೆ ತಲುಪಿದ್ದಾರೆ. ಕೆಲವರು ಕೂಡಿಟ್ಟ ಹಣವನ್ನು ಕೊಟ್ಟಿದ್ದಾರೆ. ಹಲವರು ಚಿನ್ನ ಹಾಗೂ ಆಭರಣಗಳನ್ನು ಗಿರವಿ ಇಟ್ಟು ಶುಲ್ಕ ಕಟ್ಟಿದ್ದಾರೆ. ಕೆಲ ಶಾಲೆಯವರು ಶುಲ್ಕ ಭರಿಸದ ಮಕ್ಕಳನ್ನು ಆನ್‌ಲೈನ್ ತರಗತಿಗಳಿಂದ ಹೊರಗಿಟ್ಟಿದ್ದಾರೆ. ಅಂತಹ ಶಾಲೆಗಳ ಮೇಲೆ ಯಾವ ಕ್ರಮವನ್ನೂ ಜರುಗಿಸಿಲ್ಲ. ಜನರ ಕಷ್ಟ ಆಲಿಸದ ಶಿಕ್ಷಣ ಸಚಿವರು ಕೂಡಲೇ ರಾಜೀನಾಮೆ ನೀಡಲಿ’ ಎಂದು ಆಗ್ರಹಿಸಿದರು.
ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ‘ಸರ್ಕಾರ ಕಣ್ಣಿದ್ದೂ ಕುರುಡಾಗಿದೆ. ಆಳುವವರಿಗೆ ಪೋಷಕರ ಕಷ್ಟಗಳು ಕಾಣುತ್ತಿಲ್ಲ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಈ ಸಮಸ್ಯೆ ಬಗೆಹರಿಸಲು ತಾತ್ಸಾರ ತೋರುತ್ತಿದ್ದಾರೆ. ಖಾಸಗಿ ಶಾಲೆಯವರೊಂದಿಗೆ ಕೈಜೋಡಿಸಿರುವ ಅವರು ಸಚಿವ ಸ್ಥಾನದಲ್ಲಿ ಮುಂದುವರಿಯುವ ನೈತಿಕತೆಯನ್ನೇ ಕಳೆದುಕೊಂಡಿದ್ದಾರೆ’ ಎಂದರು.
ಮನೆ ಮನೆಗಳಿಗೆ ಭೇಟಿ ನೀಡಿದ ಪಕ್ಷದ ಕಾರ್ಯಕರ್ತರು, ಅಭಿಯಾನವನ್ನು ಬೆಂಬಲಿಸಿ 7669100500 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.