ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೆಂಥಾ ಸ್ಥಿತಿಗೆ ಬಂತು ಬಿಜೆಪಿಗೆ? ಮಾಧುಸ್ವಾಮಿ ಮಾತು ಗೇಲಿ ಮಾಡಿದ ಎಎಪಿ 

Last Updated 7 ಜನವರಿ 2023, 4:45 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಕಾರ್ಯಕರ್ತರು ಜನರ ಮನೆ ಬಾಗಿಲಿನಲ್ಲಿ ನಿಂತು ಮತ ಭಿಕ್ಷೆ ಕೇಳಬೇಕು. ಕೊಡದಿದ್ದರೂ ಬಿಡಬಾರದು ಎಂಬ ಸಚಿವ ಮಾಧುಸ್ವಾಮಿ ಅವರ ಭಾಷಣವನ್ನು ಎಎಪಿ ರಾಜ್ಯ ಘಟಕ ತೀವ್ರವಾಗಿ ಗೇಲಿ ಮಾಡಿದೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಟ್ವಿಟರ್‌ನಲ್ಲಿ ಪೋಸ್ಟ್‌ ಹಂಚಿಕೊಳ್ಳಲಾಗಿದೆ.

‘ಈಗಾಗಲೇ ನಿಮ್ಮ ಕಾರ್ಯಕರ್ತರನ್ನು ಕೊಂದು ತಿನ್ನುತ್ತಿದ್ದೀರ, ಕಾರ್ಯಕರ್ತರನ್ನು ಬೀದಿಗೆ ತಂದಿದ್ದೀರಾ, ನಿಮ್ಮ ಕಾರ್ಯಕರ್ತರು ಅಳುಕುವಂತೆ ಮಾಡಿದ್ದೀರಾ. ಇನ್ನು ನಿಮ್ಮನ್ನು ನಂಬಿದ್ದಕ್ಕೆ ಉಳಿದದ್ದು ಜನರ ಕೈಕಾಲು ಹಿಡಿಯುವುದೇ ಅಲ್ಲವೇ. ಇದೆಂಥಾ ಸ್ಥಿತಿಗೆ ಬಂತು ಬಿಜೆಪಿಗೆ? ಎಂದು ಆಮ್‌ ಆದ್ಮಿ ಪಕ್ಷ ಪ್ರಶ್ನೆ ಮಾಡಿದೆ.

ತುಮಕೂರಿನಲ್ಲಿ ಗುರುವಾರ ಬಿಜೆಪಿ ಹಮ್ಮಿಕೊಂಡಿದ್ದ ಶಕ್ತಿ ಕೇಂದ್ರದ ಪ್ರಮುಖರು ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಅವರು, ಬಿಜೆಪಿ ಕಾರ್ಯಕರ್ತರು ಭಿಕ್ಷುಕರಂತೆ ಮತ ಕೇಳಬೇಕು ಎಂದು ಹೇಳಿದ್ದರು.

‘ನಮ್ಮ ಮುಖದ ಮೇಲೆ ಜನರು ವೋಟು ಬಿಸಾಕುವವರೆಗೂ ಬಿಡಬಾರದು. ಆ ರೀತಿ ಬಿಜೆಪಿ ಕಾರ್ಯಕರ್ತರು ಕೆಲಸ ಮಾಡಬೇಕು. ಭಿಕ್ಷೆ ಬೇಡುವ ಭಿಕ್ಷುಕರಂತಾಗಬೇಕು. ತಿರುಪೆ ಬೇಡುವವನಿಗೆ ಏನೂ ಕೊಡದಿದ್ದರೆ ‘ಏನಾದರೂ ಕೊಡಿ, ಎಷ್ಟಾದರೂ ಕೊಡಿ’ ಎಂದು ಗೋಗರೆಯುತ್ತಾನೆ. ಕೊನೆಗೆ ತೊಲಗಿದರೆ ಸಾಕೆಂದು ಏನಾದರೂ ಕೊಟ್ಟು ಕಳುಹಿಸುತ್ತೇವೆ. ಅದೇ ರೀತಿ ಜನರ ಮನೆ ಬಾಗಿಲಿನಲ್ಲಿ ನಿಂತು ಮತ ಭಿಕ್ಷೆ ಕೇಳಬೇಕು. ಕೊಡದಿದ್ದರೆ ಬಿಡಬಾರದು. ಐದರಲ್ಲಿ ಕೊನೆಗೆ ಎರಡು–ಮೂರಾದರೂ ವೋಟು ಬರುವಂತೆ ನೋಡಿಕೊಳ್ಳಬೇಕು. ಪಕ್ಷದ ಪರವಾದ ಅಲೆ ಸೃಷ್ಟಿಸಿದರೆ ಗೆಲುವು ಸುಲಭವಾಗುತ್ತದೆ’ ಎಂದು ಹೇಳಿದ್ದರು.

ಬಿಜೆಪಿ ಬ್ರಹ್ಮ ರಾಕ್ಷಸ

ಭ್ರಷ್ಟಾಚಾರದ ರಕ್ತ ಬೀಜಾಸುರರನ್ನು ಹುಟ್ಟಿಸಿದ್ದೇ ಕಾಂಗ್ರೆಸ್‌ ಎಂಬ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರ ಹೇಳಿಕೆ ಬಗ್ಗೆಯೂ ಎಎಪಿ ಕುಹಕವಾಡಿದೆ.

’ಹೌದು ಸ್ವಾಮಿ, ಹುಟ್ಟಿಸಿದ್ದು ಕಾಂಗ್ರೆಸ್ಸೇ. ಆದರೆ ಅವರನ್ನು ತಂದು ಸಾಕುತ್ತಿರುವುದು ನೀವು (ಬಿಜೆಪಿ). ಅಲ್ಲದೆ, ನೀವುಗಳು ಭ್ರಷ್ಟಾಚಾರ ಮಾಡುವುದರಲ್ಲಿ ಕೇವಲ ರಕ್ತಬೀಜಾಸುರರಾಗಿ ಉಳಿದಿಲ್ಲ, ಬ್ರಹ್ಮ ರಾಕ್ಷಸರಾಗಿದ್ದೀರಿ. ನಿಮ್ಮಿಬ್ಬರಿಂದಲು ದೇಶಕ್ಕೆ ಮುಕ್ತಿ ಬೇಕಿದೆ,’ ಎಂದು ಎಎಪಿ ಅಧಿಕೃತ ಟ್ವಿಟರ್‌ ಖಾತೆಯಿಂದ ಟ್ವೀಟ್‌ ಮಾಡಲಾಗಿದೆ.

‘ಬಿಜೆಪಿ ಬ್ರೋಕರ್ ಪಾರ್ಟಿಯಾಗಿದ್ದು, ವಿಧಾನಸೌಧವೇ ಸರ್ಕಾರಿ ಕೆಲಸಗಳ ಮಾರಾಟದ ಶಾಪಿಂಗ್ ಮಾಲ್‌ ಆಗಿದೆ’ ಎಂಬ ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಅವರ ಹೇಳಿಕೆಗೆ ತಿರುಗೇಟು ನೀಡಿದ್ದ ಪಲ್ಹಾದ್‌ ಜೋಶಿ, ‘ಕಾಂಗ್ರೆಸ್ ಪಕ್ಷ ಎಂದರೆ ಭ್ರಷ್ಟಾಚಾರ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಮನೆ ಎದುರು ಓಡಾಡುವವರನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ. ಭ್ರಷ್ಟಾಚಾರ ಆರಂಭವಾಗಿದ್ದೇ ನೆಹರೂ ಕಾಲದಲ್ಲಿ. ಭ್ರಷ್ಟಾಚಾರದ ರಕ್ತಬೀಜಾಸುರರನ್ನು ಹುಟ್ಟಿಸಿದ್ದೇ ಕಾಂಗ್ರೆಸ್’ ಎಂದಿದ್ದರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT