ಗುರುವಾರ , ಜೂನ್ 30, 2022
22 °C
ಎ.ಸಿ. ಶಿವಣ್ಣ ವಿರುದ್ಧ ಕ್ರಮ ಏಕಿಲ್ಲ: ಪ್ರಶ್ನೆ

ಭೂಮಾಫಿಯಾಗೆ ಸಚಿವ ಅಶೋಕ ರಕ್ಷಣೆ: ಎಎಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಗರದ ಭೂಮಾಫಿಯಾಗೆ ಕಂದಾಯ ಸಚಿವ ಆರ್‌.ಅಶೋಕ ಬೆನ್ನೆಲುಬಾಗಿ ನಿಂತಿದ್ದಾರೆ. ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳನ್ನು ಅವರು ರಕ್ಷಿಸುತ್ತಿದ್ದಾರೆ’ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ವಕೀಲರ ಘಟಕದ ಅಧ್ಯಕ್ಷ ಮಂಜುನಾಥ್‌ ಸ್ವಾಮಿ ಆರೋಪಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿಯಾಗಿದ್ದ ಎಂ.ಜಿ.ಶಿವಣ್ಣ ಹಾಗೂ ತಹಶೀಲ್ದಾರ್‌ ಶಿವಪ್ಪ ಲಮಾಣಿ ಅವರು ಮುನಿರಾಜು ಹಾಗೂ ಇತರೆ ಭೂಗಳ್ಳರ ಜತೆಗೂಡಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ದೊಡ್ಡತೋಗೂರು ಗ್ರಾಮದಲ್ಲಿ ಭೂಕಬಳಿಕೆ ಮಾಡಿದ್ದಾರೆ’ ಎಂದರು.

‘ಸಂತ್ರಸ್ತರು ಹೈಕೋರ್ಟ್‌ ಮೆಟ್ಟಿಲೇರಿದಾಗ, ಇಬ್ಬರು ಅಧಿಕಾರಿಗಳು ಅಕ್ರಮ ಎಸಗಿರುವುದು ಸಾಬೀತಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ. ಆದರೆ, ಸಚಿವ ಅಶೋಕ ಅವರ ಪ್ರಭಾವದಿಂದಾಗಿ ತಪ್ಪಿತಸ್ಥರಿಗೆ ಯಾವುದೇ ಶಿಕ್ಷೆಯಾಗಿಲ್ಲ’ ಎಂದು ಹೇಳಿದರು.

ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ, ‘ಅಶೋಕ ಅವರು ಸಚಿವರಾದಾಗಿನಿಂದ ಬೆಂಗಳೂರಿನಲ್ಲಿ ಭೂಮಾಫಿಯಾ ಹಾವಳಿ ಹೆಚ್ಚಾಗಿದೆ. ಅಕ್ರಮವಾಗಿ ಜಮೀನನ್ನು ವಶಪಡಿಸಿಕೊಳ್ಳುವುದು, ಬೆದರಿಕೆಯೊಡ್ಡಿ ಒಕ್ಕಲೆಬ್ಬಿಸುವಂತಹ ಧೋರಣೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಕಂದಾಯ ಇಲಾಖೆಯ ಅಧಿಕಾರಿಗಳೇ ಭೂಮಾಫಿಯಾಗೆ ಸಹಕಾರ ನೀಡುತ್ತಿದ್ದಾರೆ. ಬಡ ಹಾಗೂ ಮಧ್ಯಮ ವರ್ಗದ ಜನರು ಆತಂಕದಲ್ಲೇ ಜೀವನ ನಡೆಸಬೇಕಾಗಿದೆ’ ಎಂದು ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು