ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶ್ವರಪ್ಪ ಬಂಧನಕ್ಕೆ ಆಗ್ರಹ: ಸಿಎಂ ನಿವಾಸಕ್ಕೆ ಎಎಪಿ ಕಾರ್ಯಕರ್ತರ ಮುತ್ತಿಗೆ ಯತ್ನ

Last Updated 13 ಏಪ್ರಿಲ್ 2022, 12:06 IST
ಅಕ್ಷರ ಗಾತ್ರ

ಬೆಂಗಳೂರು: ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರನ್ನು ಬಂಧಿಸುವಂತೆ ಆಗ್ರಹಿಸಿ ಆಮ್‌ ಆದ್ಮಿ ಪಕ್ಷದ (ಎಎಪಿ) ಕಾರ್ಯಕರ್ತರು ಕುಮಾರಕೃಪಾ ರಸ್ತೆಯಲ್ಲಿರುವ ಮುಖ್ಯಮಂತ್ರಿಯವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.

ಶಿವಾನಂದ ವೃತ್ತದಿಂದ ಬೃಹತ್‌ ಮೆರವಣಿಗೆ ಮೂಲಕ ಸಾಗಿದ ಕಾರ್ಯಕರ್ತರು ಈಶ್ವರಪ್ಪ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ‘ಯಮಕಿಂಕರ ಈಶ್ವರಪ್ಪನಿಗೆ ಧಿಕ್ಕಾರ’, ‘ಕೊಲೆಗಡುಕ ಈಶ್ವರಪ್ಪನಿಗೆ ಧಿಕ್ಕಾರ’, ‘ಭ್ರಷ್ಟಾಚಾರಿ ಈಶ್ವರಪ್ಪನಿಗೆ ಧಿಕ್ಕಾರ’, ‘ಈಶ್ವರಪ್ಪನನ್ನು ವಜಾಗೊಳಿಸಿ’ ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.

ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾದ ಕಾರ್ಯಕರ್ತರನ್ನು ಮಾರ್ಗಮಧ್ಯದಲ್ಲೇ ಬಂಧಿಸಿದ ಪೊಲೀಸರು ಹೈಗ್ರೌಂಡ್ಸ್‌ ಠಾಣೆಗೆ ಕರೆದೊಯ್ದರು.

ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್‌ ದಾಸರಿ, ‘ಸಂತೋಷ್‌ ಪಾಟೀಲ್‌ ಅವರು ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಧೈರ್ಯ ತೋರಿದ್ದರು. ಅವರ ಸಾವಿಗೆ ಈಶ್ವರಪ್ಪನವರೇ ಹೊಣೆ. ಸಚಿವ ಸಂಪುಟದಲ್ಲಿ ಪ್ರಭಾವಿಯಾಗಿರುವ ಅವರು ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಅವರನ್ನು ಕೂಡಲೇ ಬಂಧಿಸಬೇಕು’ ಎಂದು ಆಗ್ರಹಿಸಿದರು.

‘ತನ್ನ ಸಾವಿಗೆ ಈಶ್ವರಪ್ಪನವರೇ ಹೊಣೆ ಎಂದು ಸಂತೋಷ್‌ ಪಾಟೀಲ್‌ ಅವರು ಮರಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹೀಗಿದ್ದರೂ ಅವರನ್ನು ಬಂಧಿಸಲು ಏಕೆ ವಿಳಂಬ ಮಾಡಲಾಗುತ್ತಿದೆ. ಕಾನೂನು ಎಲ್ಲರಿಗೂ ಒಂದೇ ಅಲ್ಲವೇ. ಅವರನ್ನು ಬಂಧಿಸದಿದ್ದರೆ ನಾಗರಿಕರಿಗೆ ಒಂದು ಕಾನೂನು ಪ್ರಭಾವಿಗಳಿಗೇ ಒಂದು ಕಾನೂನು ಇದೆ ಎಂಬ ತಪ್ಪು ಸಂದೇಶ ಸಮಾಜಕ್ಕೆ ರವಾನೆಯಾಗಲಿದೆ. ಅವರನ್ನು ಸಚಿವ ಸಂಪುಟದಿಂದ ಕೈಬಿಡದಿದ್ದರೆ ಪ್ರಕರಣದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ’ ಎಂದು ದೂರಿದರು.

‘ಸಂತೋಷ್‌ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಈಶ್ವರಪ್ಪನವರನ್ನು ಬಂಧಿಸುವ ಬದಲು ಪೊಲೀಸರು ನಮ್ಮನ್ನು ವಶಕ್ಕೆ ಪಡೆದಿದ್ದಾರೆ. ಅವರ ನಡೆ ಖಂಡನೀಯ’ ಎಂದು ಟೀಕಿಸಿದರು.

ಮುಖಂಡರಾದ ಜಗದೀಶ್‌ ವಿ. ಸದಂ, ಚನ್ನಪ್ಪಗೌಡ ನೆಲ್ಲೂರು, ಕುಶಲಸ್ವಾಮಿ, ಉಷಾ ಮೋಹನ್‌, ಪ್ರಕಾಶ್‌ ನೆಡುಂಗಡಿ, ಸೀತಾರಾಮ್‌, ನಂಜಪ್ಪ ಕಾಳೇಗೌಡ, ಗೋಪಿನಾಥ್‌, ಕುದ್ರತ್‌, ಜಗದೀಶ್‌ ಬಾಬು, ಅಬ್ಬಾಸ್‌ ಇದ್ದರು.ಪಕ್ಷ ಸಂಘಟನೆಯ ಪ್ರವಾಸದ ಎರಡನೇಯ ದಿನದ ಅಂಗವಾಗಿ ಇಂದು ಬಂಟ್ವಾಳದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಹಲವು ಸಂಘಟನಾತ್ಮಕ ವಿಷಯಗಳ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಸಚಿವರಾದ ಡಾ. ಅಶ್ವಥನಾರಾಯಣ , ವಿ. ಸುನಿಲ್ ಕುಮಾರ್ , ಸಂಸದ ಡಿವಿ ಸದಾನಂದ ಗೌಡ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡಬಿದ್ರೆ ಸೇರಿದಂತೆ ಜಿಲ್ಲೆಯ ಪ್ರಮುಖರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT