ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗದ ನೈತಿಕ ಸ್ಥೈರ್ಯ ಕುಗ್ಗಿಸಲು ಬಿಜೆಪಿ ಯತ್ನ: ಅಭಿಷೇಕ್ ಮನು ಸಿಂಘ್ವಿ

Last Updated 6 ಜುಲೈ 2022, 18:21 IST
ಅಕ್ಷರ ಗಾತ್ರ

ಬೆಂಗಳೂರು: ‘ನ್ಯಾಯಾಂಗ ವ್ಯವಸ್ಥೆ ಹಾಗೂ ನ್ಯಾಯಮೂರ್ತಿಗಳ ಮೇಲೆ ಈಗ ನಡೆಯುತ್ತಿರುವ ದಾಳಿ ಕಾಕತಾಳೀಯವಲ್ಲ. ಇದು ಬಿಜೆಪಿಯ ಸಂಘಟಿತ ಹಾಗೂ ಪೂರ್ವನಿಯೋಜಿತ ದಾಳಿ. ಇದರ ಹಿಂದೆ ನ್ಯಾಯಾಂಗದ ನೈತಿಕ ಸ್ಥೈರ್ಯ ಕುಗ್ಗಿಸುವ, ಒತ್ತಡ ಹೇರುವ, ಬೆದರಿಸುವ ಉದ್ದೇಶ ಅಡಗಿದೆ’ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಅಭಿಷೇಕ್ ಮನು ಸಿಂಘ್ವಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ, ತಮಗೆ ವರ್ಗಾವಣೆ ಬೆದರಿಕೆ ಇದ್ದು, ನಾನು ಕೇವಲ ಸಂವಿಧಾನಕ್ಕೆ ಮಾತ್ರ ಉತ್ತರದಾಯಿಯಾಗಿದ್ದೇನೆ ಎಂದು ನ್ಯಾಯಾಲಯದಲ್ಲಿ ತಿಳಿಸಿದ್ದಾರೆ. ಈ ವಿಚಾರಗಳನ್ನು ನಾವು ಇಲ್ಲಿಗೆ ಬಿಡುವುದಿಲ್ಲ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದು ಈ ಗಂಭೀರ ಆರೋಪದ ಬಗ್ಗೆ ತನಿಖೆ ನಡೆಸಲು ವಿಶೇಷ ಸಮಿತಿ ರಚಿಸುವಂತೆ ಕೋರುತ್ತೇವೆ’ ಎಂದರು.

‘ದೇಶದಲ್ಲಿನ ಇತ್ತೀಚಿನ ಬೆಳವಣಿಗೆಗಳು ಬಿಜೆಪಿ ಪಾಲಿಗೆ ಅನುಕೂಲಕರವಾಗಿಲ್ಲ. ಉದಯಪುರದಲ್ಲಿನ ಹತ್ಯೆ ಪ್ರಕರಣದಲ್ಲಿ ಪ್ರಚಾರ ಪಡೆಯಲು ಬಿಜೆಪಿ ಮುಂದಾಗಿತ್ತು, ಆದರೆ ಹಂತಕರು ಬಿಜೆಪಿಯ ಸದಸ್ಯರು ಎಂಬ ವಿಚಾರ ಬಯಲಾಗಿದೆ. ಅಲ್ಲದೆ,‌ ಕಾಶ್ಮೀರದಲ್ಲಿ ಕುಖ್ಯಾತ ಲಷ್ಕರ್ ಉಗ್ರಗಾಮಿ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಎಂಬುದೂ ಗೊತ್ತಾಗಿದೆ. ಇದೆಲ್ಲದರ ಮಧ್ಯೆ ಬಿಜೆಪಿ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ನಕಲಿ ರಾಷ್ಟ್ರೀಯತೆಯನ್ನು ಪ್ರದರ್ಶಿಸುತ್ತಿದೆ’ ಎಂದರು.

‘ನೂಪುರ್ ಶರ್ಮಾ ಅವರ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್‌ ಪೀಠವು ಅದಕ್ಕೆ ಸೂಕ್ತ ಕಾರಣವನ್ನು ತಿಳಿಸಿತ್ತು. ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಪ್ರಾಮಾಣಿಕ ಹಾಗೂ ನೇರ ನುಡಿಯಲ್ಲಿ ಟೀಕಿಸಿದಾಗ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕಿತ್ತು. ಆದರೆ, ಬಿಜೆಪಿ, ತನ್ನ ಪಕ್ಷದ ವಕ್ತಾರೆಯನ್ನು ಖಂಡಿಸಿದ ನ್ಯಾಯ ಪೀಠದ ವಿರುದ್ಧವೇ ದಾಳಿ ಮಾಡಿದೆ. 2014ರ ನಂತರ ನ್ಯಾಯಾಂಗ ವ್ಯವಸ್ಥೆ ಮೇಲೆ ಕಾಣದ ಶಕ್ತಿಗಳು ಈ ರೀತಿ ಒತ್ತಡ ಹೇರುತ್ತಿರುವುದು ಇದೇ ಮೊದಲಲ್ಲ’ ಎಂದರು.

‘ಹೈಕಮಾಂಡ್ ನಿರ್ದೇಶನದಂತೆ ನಡೆ’

ಬೆಂಗಳೂರು: ‘ನಾಯಕರು ಹುಟ್ಟುಹಬ್ಬ ಆಚರಿಸಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ನಾನು ಪಕ್ಷದ ಹೈಕಮಾಂಡ್ ನಿರ್ದೇಶನದಂತೆ ನಡೆದುಕೊಳ್ಳುತ್ತಿದ್ದೇನೆ’ ಎಂದು ಕೆ‍ಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬ (ಸಿದ್ದರಾಮೋತ್ಸವ) ಕಾರ್ಯಕ್ರಮದ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ವಿಚಾರವಾಗಿ ನನಗೆ ಯಾವುದೇ ಆಕ್ಷೇಪ ಇಲ್ಲ’ ಎಂದರು.

‘ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಅವರವರ ವೈಯಕ್ತಿಕ ಹಾಗೂ ಅಭಿಮಾನಿಗಳ ಇಚ್ಛೆಗೆ ಬಿಟ್ಟಿದ್ದು. ಪಕ್ಷಕ್ಕೆ ಏನೆಲ್ಲಾ ಕಾರ್ಯಕ್ರಮಗಳು ಅನುಕೂಲವಾಗುತ್ತವೋ ಅದಕ್ಕೆ ಪಕ್ಷದ ಅಧ್ಯಕ್ಷನಾಗಿ ನಾನು ಬೆಂಬಲವಾಗಿ ನಿಲ್ಲುತ್ತೇನೆ’ ಎಂದರು.

‘ದೇಶದ 75ನೇ ಸ್ವಾತಂತ್ರ್ಯೋತ್ಸವ ಆಚರಣೆ ಅಂಗವಾಗಿ ಆಗಸ್ಟ್ 15ರಂದು ನಡೆಯಲಿರುವ ಪಕ್ಷದ ಕಾರ್ಯಕ್ರಮದ ಹೊಣೆಯನ್ನು ಸೋನಿಯಾ ಗಾಂಧಿ ನನಗೆ ವಹಿಸಿದ್ದಾರೆ. ಅಂದು ಕಾಂಗ್ರೆಸ್ ನಾಯಕರು, ಸುಮಾರು 1 ಲಕ್ಷ ಕಾರ್ಯಕರ್ತರು ಬೆಂಗಳೂರಿನಲ್ಲಿ ಮೆರವಣಿಗೆ ನಡೆಸಲಿದ್ದಾರೆ. ‌ಜತೆಗೆ 75 ಕಿ. ಮೀ ಪಾದಯಾತ್ರೆ ಮಾಡಲಿದ್ದಾರೆ. ಎಲ್ಲ ಜಿಲ್ಲೆಗಳಲ್ಲಿಯೂ ಪಾದಯಾತ್ರೆ ನಡೆಸಲು ಸೂಚಿಸಲಾಗಿದೆ. ಈ ಬಗ್ಗೆ ಚರ್ಚಿಸಲು ಪಕ್ಷದ ನಾಯಕರ ಸಭೆ ಗುರುವಾರ (ಜುಲೈ 7) ನಡೆಯಲಿದೆ’ ಎಂದರು.

‘ದೇಶಕ್ಕೆ ಕಾಂಗ್ರೆಸ್ ಸ್ವಾತಂತ್ರ್ಯ ತಂದುಕೊಟ್ಟಿದೆ, ಸಂವಿಧಾನ ನೀಡಿದೆ. ಈ ಕಾರ್ಯಕ್ರಮದ ಆಚರಣೆ ನಮ್ಮ ಕರ್ತವ್ಯ. ಕಾರ್ಯಕ್ರಮದ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಾತ್ರವನ್ನು ಎಲ್ಲರಿಗೂ ತಿಳಿಸಬೇಕಿದೆ’ ಎಂದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT