ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹ ಸಚಿವರ ಮನೆಗೆ ನುಗ್ಗಿ ಗಲಭೆ: ಎಬಿವಿಪಿ ಕಾರ್ಯಕರ್ತರ ಮೇಲೆ ಲಘು ಲಾಠಿ ಪ್ರಹಾರ

Last Updated 30 ಜುಲೈ 2022, 23:15 IST
ಅಕ್ಷರ ಗಾತ್ರ

ಬೆಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರುಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಅಧಿಕೃತ ನಿವಾಸಕ್ಕೆ ಅಕ್ರಮವಾಗಿ ನುಗ್ಗಿ ಗಲಭೆ ಸೃಷ್ಟಿಸಿದ್ದಾರೆ ಎಂದು ಆರೋಪಿಸಿರುವ ಪೊಲೀಸರು, 30 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಜಯಮಹಲ್‌ನಲ್ಲಿರುವ ಸಚಿವರ ಮನೆಗೆ ಶನಿವಾರ ಬೆಳಿಗ್ಗೆ 9.30ರ ಸುಮಾರಿಗೆ ಬಂದಿದ್ದ ಎಬಿವಿಪಿ ಕಾರ್ಯಕರ್ತರು, 'ರಾಜ್ಯದಲ್ಲಿ ಎಸ್‌ಡಿಪಿಐ ಹಾಗೂ ಪಿಎಫ್‌ಐ ನಿಷೇಧಿಸಬೇಕು. ಗೃಹ ಸಚಿವ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

ಮನೆಯ ಭದ್ರತೆ ಕರ್ತವ್ಯದಲ್ಲಿದ್ದ ನಗರ ಸಶಸ್ತ್ರ ಪಡೆಯ ಪೊಲೀಸರು, ‘ಪ್ರತಿಭಟನೆಗೆ ಅವಕಾಶವಿಲ್ಲ. ದಯವಿಟ್ಟು ವಾಪಸು ಹೋಗಿ’ ಎಂದರೂ ಕಾರ್ಯಕರ್ತರು, ಮಾತಿನ ಚಕಮಕಿ ನಡೆಸಿದರು.

ಗೇಟ್ ತಳ್ಳಿ ಒಳನುಗ್ಗಿದ ಕಾರ್ಯಕರ್ತರು, ಮನೆ ಬಾಗಿಲು ಬಳಿ ಕುಳಿತು ಪ್ರತಿಭಟನೆ ಮುಂದುವರಿಸಿದರು. ತಡೆಯಲು ಬಂದ ಪೊಲೀಸರನ್ನು ತಳ್ಳಾಡಿದರು. ಸ್ಥಳಕ್ಕೆ ಬಂದ ಹೆಚ್ಚುವರಿ ಸಿಬ್ಬಂದಿ, ಕಾರ್ಯಕರ್ತರ ಮೇಲೆ ಲಘು ಲಾಠಿ ಪ್ರಹಾರ ನಡೆಸಿ ಸ್ಥಳದಿಂದ ಚದುರಿಸಿದರು.

ಕೆಲವರನ್ನು ಎತ್ತಿಕೊಂಡು ಹೋಗಿ ವಾಹನದಲ್ಲಿ ಕೂರಿಸಿ ಠಾಣೆಗೆ ಕರೆದೊಯ್ದರು. ಪರಸ್ಪರ ತಳ್ಳಾಟದ ವೇಳೆ ಮನೆಯ ಹೂವಿನಕುಂಡಗಳುಚಿಲ್ಲಾಪಿಲ್ಲಿಯಾದವು.

ಅನುಮತಿ ಪಡೆಯದೇ ಪ್ರತಿಭಟನೆ: ‘ಎಬಿವಿಪಿ ಕಾರ್ಯಕರ್ತರು ಯಾವುದೇ ಅನುಮತಿ ಪಡೆಯದೇ ಏಕಾಏಕಿ ಪ್ರತಿಭಟನೆ ನಡೆಸಿದ್ದರು. ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು, ಕಾನೂನು ಪ್ರಕಾರ ಕ್ರಮ ಜರುಗಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಅಕ್ರಮ ಕೂಟ (ಐಪಿಸಿ 143), ಗಲಭೆ (ಐಪಿಸಿ 147), ಅಕ್ರಮವಾಗಿ ಗುಂಪು ಸೇರುವುದು (ಐಪಿಸಿ 149), ಅಕ್ರಮ ಪ್ರವೇಶ (ಐಪಿಸಿ 448) ಹಾಗೂ ಸಾರ್ವಜನಿಕರ ಆಸ್ತಿಗೆ ನಷ್ಟ ಉಂಟು ಮಾಡಿದ (ಐಪಿಸಿ 427) ಆರೋಪದಡಿ 30 ಪ್ರತಿಭಟನಕಾರರ ವಿರುದ್ಧ ಜೆ.ಸಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೆಲವರನ್ನು ವಶಕ್ಕೆ ಪಡೆಯಲಾಗಿದೆ’ಎಂದು ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ ಹೇಳಿದರು.

ಪಿಎಸ್‌ಐ, ಹೆಡ್ ಕಾನ್‌ಸ್ಟೆಬಲ್ ಅಮಾನತು

ಎಬಿವಿಪಿ ಕಾರ್ಯಕರ್ತರ ಮುತ್ತಿಗೆ ಪ್ರಕರಣ ಸಂಬಂಧ, ಜೆ.ಸಿ.ನಗರ ಠಾಣೆ ಪಿಎಸ್‌ಐ ರಾಜೇಸಾಬ್ ಹಾಗೂ ಹೆಡ್ ಕಾನ್‌ಸ್ಟೆಬಲ್ ಶ್ರೀನಿವಾಸ್ ಮೂರ್ತಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

‘ಗೃಹ ಸಚಿವರ ಮನೆ ಜೆ.ಸಿ.ನಗರ ಠಾಣೆ ವ್ಯಾಪ್ತಿಯಲ್ಲಿದೆ. ಇಲ್ಲಿಯ ಇನ್‌ಸ್ಪೆಕ್ಟರ್‌ ವರ್ಗಾವಣೆ ಆಗಿದ್ದು, ಸದ್ಯ ಈ ಹುದ್ದೆ ಖಾಲಿ ಇದೆ. ಪಿಎಸ್‌ಐ ರಾಜೇಸಾಬ್ ಅವರಿಗೆ ಪ್ರಭಾರಿಯಾಗಿ ಠಾಣಾಧಿಕಾರಿ ಜವಾಬ್ದಾರಿ ನೀಡಲಾಗಿತ್ತು. ಪ್ರತಿಭಟನೆ ಬಗ್ಗೆ ಮಾಹಿತಿ ಬಂದರೂ ಪಿಎಸ್‌ಐ ಹಾಗೂ ಹೆಡ್‌ ಕಾನ್‌ಸ್ಟೆಬಲ್ ತುರ್ತಾಗಿ ಸ್ಥಳಕ್ಕೆ ಹೋಗದೇ ಕರ್ತವ್ಯಲೋಪ ಎಸಗಿದ್ದರು. ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ, ಇಬ್ಬರನ್ನೂ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತೇಜಸ್ವಿ ಸೂರ್ಯ ಕಚೇರಿಗೆ ಮುತ್ತಿಗೆ ಯತ್ನ:

ಸಂಸದ ತೇಜಸ್ವಿ ಸೂರ್ಯ ಅವರ ಕಚೇರಿಗೆ ಮುತ್ತಿಗೆ ಹಾಕುವ ಜತೆಗೆ, ಹೂವು–ಕಲ್ಲು ನೀಡಲು ಹೊರಟಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

‘ಪ್ರವೀಣ್ ಹತ್ಯೆ ಸಂಬಂಧ ಮಾತನಾಡಿದ್ದ ತೇಜಸ್ವಿ, ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಕಲ್ಲು ಹೊಡೆಯಬಹುದಿತ್ತು’ ಎಂದು ಹೇಳಿದ್ದು ಜಾಲತಾಣಗಳಲ್ಲಿ ಹರಿದಾಡಿತ್ತು. ಸಂಸದರ ಕಚೇರಿಗೆ ಕಲ್ಲು, ಹೂವು ನೀಡುವ ಜತೆಗೆ ಮುತ್ತಿಗೆ ಹಾಕಲು ಮುಂದಾಗಿದ್ದು ಕಾಂಗ್ರೆಸ್ ಕಾರ್ಯಕರ್ತರು, ಗಿರಿನಗರದಲ್ಲಿರುವ ಸಂಸದರ ಗೃಹಕಚೇರಿಯತ್ತ ಮೆರವಣಿಗೆಯಲ್ಲಿ ಹೊರಟಿದ್ದರು. ಯಾವುದೇ ಅನುಮತಿ ಪಡೆಯದಿದ್ದರಿಂದ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಯಿತು’ ಎಂದು ಪೊಲೀಸರು ಹೇಳಿದರು.

ಎಬಿವಿಪಿಯವರ ಭಾವನೆ ಅರ್ಥವಾಗಿದೆ: ಜ್ಞಾನೇಂದ್ರ

‘ಎಸ್‌ಡಿಪಿಐ, ಪಿಎಫ್‌ಐಯಂಥ ಸಂಘಟನೆಗಳನ್ನು ನಿಷೇಧಿಸುವಂತೆ ಬೇಡಿಕೆ ಇಟ್ಟಿರುವ ಎಬಿವಿಪಿ ಕಾರ್ಯಕರ್ತರ ಭಾವನೆಗಳನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಸರ್ಕಾರ ಕೂಡಾ ಆ ನಿಟ್ಟಿನಲ್ಲಿ ಯೋಚಿಸುತ್ತಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಡಿ.ಜಿ. ಹಳ್ಳಿ, ಕೆ.ಜಿ. ಹಳ್ಳಿ ಗಲಭೆಗಳಿಂದ ಹಿಡಿದು, ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಹತ್ಯೆಯಂಥ ಘಟನೆಯ ಕಾರಣಕ್ಕೆ ಈ ಸಂಘಟನೆಗಳನ್ನು ನಿಷೇಧಿಸುವಂತೆ ಬೇಡಿಕೆ ಇಟ್ಟಿದ್ದಾರೆ’ ಎಂದಿದ್ದಾರೆ.

‘ನನ್ನನ್ನು ಭೇಟಿಯಾಗಲು ಮನೆಗೆ ಬಂದಿದ್ದ ಎಬಿವಿಪಿ ಕಾರ್ಯಕರ್ತರು ನನ್ನ ಅನುಪಸ್ಥಿತಿಯಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಎಬಿವಿಪಿ ಸದಸ್ಯರನ್ನು ನಾನೇ ಆಹ್ವಾನಿಸಿ ಮಾತನಾಡುತ್ತೇನೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT