ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌–ಆಫ್‌ಲೈನ್‌ ಬೋಧನೆಗೆ ಮಾರ್ಗಸೂಚಿ

ಪರ್ಯಾಯ ಶೈಕ್ಷಣಿಕ ಯೋಜನೆ ಪ್ರಕಟಿಸಿದ ಶಿಕ್ಷಣ ಇಲಾಖೆ
Last Updated 11 ಜೂನ್ 2021, 20:15 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಕ್ತ ವರ್ಷದ (2021–22) ಶೈಕ್ಷಣಿಕ ಚಟುವಟಿಕೆಗಳ ನಿರ್ವಹಣೆಗೆ ಶುಕ್ರವಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ಭೌತಿಕ ತರಗತಿಯಲ್ಲದೆ, ಆನ್‌ಲೈನ್‌ ಬೋಧನೆಗೂ ಸಹಕಾರಿಯಾಗುವಂತೆ ಪರ್ಯಾಯ ಶೈಕ್ಷಣಿಕ ಯೋಜನೆ ರೂಪಿಸಿದೆ.

ಮೊಬೈಲ್‌ ಫೋನ್, ದೂರದರ್ಶನ ಸಂಪರ್ಕ ಹೊಂದಿರುವ ವಿದ್ಯಾರ್ಥಿಗಳು ಮತ್ತು ಈ ಸಂಪರ್ಕ ಇಲ್ಲದ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುವ ಬಗ್ಗೆಯೂ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

1ರಿಂದ 10ನೆಯ ತರಗತಿಯ ಎಲ್ಲ ವಿದ್ಯಾರ್ಥಿಗಳ ಪೋಷಕರಲ್ಲಿ ಇರುವ ತಾಂತ್ರಿಕ ಸಾಧನಗಳ ಲಭ್ಯತೆಯ ಕುರಿತ ಮಾಹಿತಿಯನ್ನು ಸಂಗ್ರಹಿಸಬೇಕು, ತಂದೆ–ತಾಯಿ ಇಲ್ಲದಿದ್ದಲ್ಲಿ ಮನೆಯ ಹತ್ತಿರದಲ್ಲಿ ಶೈಕ್ಷಣಿಕ ಬೆಂಬಲ ನೀಡಲು ಇಚ್ಛೆ ಇರುವ ಸಹೃದಯರನ್ನು ಗುರುತಿಸಬೇಕು ಎಂದು ಇಲಾಖೆ ಸೂಚಿಸಿದೆ.

ಯಾವುದೇ ಫೋನ್, ದೂರದರ್ಶನ ಲಭ್ಯವಿಲ್ಲದಿರುವ ವಿದ್ಯಾರ್ಥಿಗಳಿಗೆ ನೆರೆ ಮನೆಯವರ ಸಮ್ಮತಿಯ ಮೇರೆಗೆ, ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಪಾಠಗಳನ್ನು ವಿದ್ಯಾರ್ಥಿಗಳು ವೀಕ್ಷಿಸಲು ವ್ಯವಸ್ಥೆ ಮಾಡಬಹುದಾಗಿದೆ ಎಂದೂ ಸಲಹೆ ನೀಡಲಾಗಿದೆ.

ಕೀ ಪ್ಯಾಡ್ ಮೊಬೈಲ್ ಸಂಪರ್ಕ ಇರುವ ವಿದ್ಯಾರ್ಥಿಗಳ ಮನೆಯಲ್ಲಿ ರೇಡಿಯೊ ಲಭ್ಯವಿದ್ದಲ್ಲಿ, ಎಫ್‌.ಎಂ. ಮೂಲಕ ಪ್ರಸಾರವಾಗುವ ರೇಡಿಯೊ ಪಾಠಗಳನ್ನು ಕೇಳಲು ಮಾರ್ಗದರ್ಶನ ನೀಡಬೇಕು ಎಂದು ಸೂಚಿಸಲಾಗಿದೆ.

ಪ್ರತಿ ವಿದ್ಯಾರ್ಥಿಗೆ ವಿಷಯವಾರು ಕೃತಿ ಸಂಪುಟ (ಚೈಲ್ಡ್‌ ಪ್ರೊಫೈಲ್‌) ನಿರ್ವಹಣೆ ಮಾಡಿ, ಮೌಲ್ಯಮಾಪನ ಮಾಡಬೇಕು. ಇದರ ವಿವರವನ್ನು ಕಡ್ಡಾಯವಾಗಿ ಸ್ಯಾಟ್ಸ್‌ (ಎಸ್‌ಎಟಿಎಸ್‌) ತಂತ್ರಾಂಶದಲ್ಲಿ ಅಳವಡಿಸಬೇಕು ಎಂದು ಇಲಾಖೆಯ ಆಯುಕ್ತರು ಸೂಚಿಸಿದ್ದಾರೆ.

ಪ್ರಗತಿ ವರದಿ ನೀಡಲು ಸೂಚನೆ:

ಈ ಚಟುವಟಿಕೆಗಳು ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳಲು ಪ್ರತಿ ಜಿಲ್ಲೆಯಲ್ಲಿ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇವರು, ಪ್ರಸ್ತುತ ವರ್ಷದ ಬೋಧನೆ–ಕಲಿಕೆ ಮತ್ತು ಪರ್ಯಾಯ ಶೈಕ್ಷಣಿಕ ಯೋಜನೆಯ ಅನುಷ್ಠಾನ ಕುರಿತು ಪ್ರತಿ ತಿಂಗಳ ಐದರೊಳಗೆ ಹಿಂದಿನ ತಿಂಗಳ ಪ್ರಗತಿ ವರದಿಯನ್ನು ಆಯುಕ್ತರಿಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಜುಲೈ 1ರಿಂದ ನೂತನ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT