ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್‌ ಚಾಟಿ: ತನಿಖಾ ಪ್ರಗತಿಯ ಬೆನ್ನು ಹತ್ತಿದ ಎಸಿಬಿ

ಹೈಕೋರ್ಟ್‌ ಚಾಟಿ ಬೆನ್ನಲ್ಲೇ ಅಧಿಕಾರಿಗಳು ಚುರುಕು
Last Updated 12 ಜುಲೈ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಕಾರ್ಯವೈಖರಿ ಕುರಿತು ಹೈಕೋರ್ಟ್‌ ಚಾಟಿ ಬೀಸಿರುವ ಬೆನ್ನಲ್ಲೇ, ಆರು ವರ್ಷಗಳ ಅವಧಿಯಲ್ಲಿ ದಾಖಲಿಸಿದ ಪ್ರಕರಣಗಳ ಸ್ಥಿತಿಗತಿ ಕುರಿತು ತನಿಖಾ ಸಂಸ್ಥೆ ಅವಲೋಕನಕ್ಕೆ ಇಳಿದಿದೆ.

ಪ್ರತಿ ಪ್ರಕರಣವನ್ನೂ ಪ್ರತ್ಯೇಕವಾಗಿ ಪರಿಶೀಲಿಸಿ ತನಿಖಾ ಪ್ರಗತಿಯ ವರದಿ ಸಿದ್ಧಪಡಿಸಲಾಗುತ್ತಿದೆ. ಎಲ್ಲ ಜಿಲ್ಲೆಗಳಿಂದಲೂ ತನಿಖಾಧಿಕಾರಿಗಳು ಎಸಿಬಿ ಕೇಂದ್ರ ಕಚೇರಿಗೆ ದೌಡಾಯಿಸಿ, ಭ್ರಷ್ಟಾಚಾರ ಪ್ರಕರಣಗಳ ತನಿಖೆ ಕುರಿತು ವರದಿ ಸಲ್ಲಿಸುತ್ತಿದ್ದಾರೆ.

2016 ಮಾರ್ಚ್‌ 14ರಂದು ಎಸಿಬಿ ಅಸ್ತಿತ್ವಕ್ಕೆ ಬಂದಿದೆ. ಈವರೆಗೆ 350ಕ್ಕೂ ಹೆಚ್ಚು ಎಫ್‌ಐಆರ್‌ಗಳನ್ನು ದಾಖಲಿಸಿ, ತನಿಖೆ ನಡೆಸಿದೆ. ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅನುಕೂಲಕರ ಆದೇಶ ನೀಡಲು ₹ 5 ಲಕ್ಷ ಲಂಚ ಪಡೆದ ಆರೋಪದ ಮೇಲೆ ಬಂಧಿತರಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ಉಪ ತಹಶೀಲ್ದಾರ್‌ ಮಹೇಶ್‌ ಅವರ ಜಾಮೀನು ಅರ್ಜಿ ವಿಚಾರಣೆ ವೇಳೆ, ಎಸಿಬಿ ದಾಖಲಿಸಿದ ಪ್ರಕರಣಗಳತನಿಖಾ ಪ್ರಗತಿಯ ವಿಷಯ ಚರ್ಚೆಗೆ ಬಂದಿತ್ತು.

ಎಫ್‌ಐಆರ್‌ ದಾಖಲು, ಆರೋಪಪಟ್ಟಿ ಸಲ್ಲಿಕೆ, ‘ಬಿ’ ವರದಿ ಸಲ್ಲಿಕೆ ಕುರಿತು ಖಚಿತ ಮಾಹಿತಿಯೊಂದಿಗೆ ಸಮಗ್ರ ವರದಿ ಸಲ್ಲಿಸುವಂತೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು. ಆ ಬಳಿಕ ಎಲ್ಲ ಪ್ರಕರಣಗಳ ಸ್ಥಿತಿಗತಿ ಕುರಿತು ಪರಿಶೀಲನೆ ಆರಂಭಿಸಲಾಗಿತ್ತು. ಈ ಪ್ರಕ್ರಿಯೆ ಮುಂದುವರಿದಿದ್ದು, ಮಂಗಳವಾರವೂ ತನಿಖಾ ಸಂಸ್ಥೆಯ ಅಧಿಕಾರಿಗಳು ಹಲವು ಸುತ್ತಿನ ಸಭೆ ನಡೆಸಿದ್ದಾರೆ.

ಜಿಲ್ಲಾವಾರು ಅವಲೋಕನ: ‘ಪ್ರತಿ ಜಿಲ್ಲೆಯಲ್ಲೂ ಎಸಿಬಿ ಘಟಕಗಳಿವೆ. ಆಯಾ ಜಿಲ್ಲೆಯಲ್ಲಿ ದಾಖಲಾದ ಪ್ರಕರಣಗಳ ಕುರಿತು ಪ್ರತ್ಯೇಕವಾಗಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆಯಾ ವಲಯದ ಎಸ್‌ಪಿಗಳು ಮತ್ತು ಜಿಲ್ಲಾ ಘಟಕದ ಮುಖ್ಯಸ್ಥರ ಜತೆ ಚರ್ಚಿಸಿ, ತನಿಖಾ ಪ್ರಗತಿ ಪರಿಶೀಲಿಸಲಾಗುತ್ತಿದೆ. ‘ಬಿ’ ವರದಿ ಸಲ್ಲಿಸಿರುವ ಪ್ರಕರಣಗಳಲ್ಲಿ ತನಿಖಾಧಿಕಾರಿಗಳಿಂದಲೇ ವಿವರಣೆ ಪಡೆಯಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

‘ಹಲವು ಪ್ರಕರಣಗಳಲ್ಲಿ ಆರೋಪಿತ ಸರ್ಕಾರಿ ನೌಕರರ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಸರ್ಕಾರದ ವಿವಿಧ ಇಲಾಖೆಗಳಿಂದ ಅನುಮತಿ ದೊರಕಬೇಕಿದೆ. ಅಂತಹ ಪ್ರಕರಣಗಳನ್ನೂ ಪಟ್ಟಿ ಮಾಡುತ್ತಿದ್ದು, ಆರೋಪಪಟ್ಟಿ ಸಲ್ಲಿಸಲು ತ್ವರಿತವಾಗಿ ಅನುಮತಿ ನೀಡುವಂತೆ ಸಕ್ಷಮ ಪ್ರಾಧಿಕಾರಗಳಿಗೆ ಪತ್ರ ಬರೆಯಲು ಎಸಿಬಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ’ ಎಂದು ಮೂಲಗಳು ಹೇಳಿವೆ.

105 ಪ್ರಕರಣಗಳಲ್ಲಿ ‘ಬಿ’ ವರದಿ

ಎಸಿಬಿ ಈವರೆಗೆ 105 ಪ್ರಕರಣಗಳಲ್ಲಿ ‘ಬಿ’ ವರದಿ ಸಲ್ಲಿಸಿದೆ ಎಂದು ತನಿಖಾ ಸಂಸ್ಥೆಯ ಪರ ವಕೀಲರು ಶುಕ್ರವಾರ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದರು. ಆದರೆ, ಅಂಕಿಅಂಶ ನಿಖರವಾಗಿಲ್ಲ ಎಂದು ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT