ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ: ₹ 200 ಕೋಟಿಗೂ ಹೆಚ್ಚು ಅಕ್ರಮ

ಎಸಿಬಿ ದಾಳಿ: ಎರಡನೇ ದಿನವೂ ಮುಂದುವರಿದ ಶೋಧ
Last Updated 20 ನವೆಂಬರ್ 2021, 21:45 IST
ಅಕ್ಷರ ಗಾತ್ರ

ಬೆಂಗಳೂರು: ನಿವೇಶನ ಹಂಚಿಕೆಯಲ್ಲಿ ಅಕ್ರಮ, ಸರ್ಕಾರಿ ಜಮೀನುಗಳ ಹೆಸರಿನಲ್ಲಿ ಖಾಸಗಿ ವ್ಯಕ್ತಿಗಳಿಗೆ ಪರಿಹಾರ ಪಾವತಿ ಸೇರಿದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (ಬಿಡಿಎ) ₹ 200 ಕೋಟಿಗೂ ಹೆಚ್ಚು ಮೊತ್ತದ ಅಕ್ರಮ ನಡೆದಿರುವುದನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶನಿವಾರ ಪತ್ತೆಮಾಡಿದೆ.

ವ್ಯಾಪಕ ಅಕ್ರಮ, ಅವ್ಯವಹಾರ ನಡೆಯುತ್ತಿರುವ ದೂರುಗಳನ್ನು ಆಧರಿಸಿ ಶುಕ್ರವಾರ ಬಿಡಿಎ ಕೇಂದ್ರ ಕಚೇರಿ ಮೇಲೆ ದಾಳಿಮಾಡಿದ್ದ ಎಸಿಬಿ ಅಧಿಕಾರಿಗಳು, ₹ 100 ಕೋಟಿಗೂ ಹೆಚ್ಚು ಮೌಲ್ಯದ ಅಕ್ರಮಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಕಾರ್ಯಾಚರಣೆ ಪೂರ್ಣಗೊಳ್ಳದ ಕಾರಣದಿಂದ ಕಚೇರಿಗಳ ಬಾಗಿಲುಗಳನ್ನು ಮೊಹರು ಮಾಡಲಾಗಿತ್ತು. ಶನಿವಾರ ಮತ್ತೆ ಶೋಧ ನಡೆಸಿದ್ದು, ಅಕ್ರಮಗಳ ಸರಮಾಲೆಯೇ ಪತ್ತೆಯಾಗಿದೆ.

‘ನಕಲಿ ದಾಖಲೆಗಳನ್ನು ಸೃಷ್ಟಿಸಿ ಅರ್ಕಾವತಿ, ಕೆಂಪೇಗೌಡ ಮತ್ತು ವಿಶ್ವೇಶ್ವರಯ್ಯ ಬಡಾವಣೆಗಳಲ್ಲಿ ಅನರ್ಹ ವ್ಯಕ್ತಿಯೊಬ್ಬರಿಗೆ ₹ 75 ಕೋಟಿ ಮೌಲ್ಯದ ಆರು ನಿವೇಶನಗಳನ್ನು ಅಕ್ರಮವಾಗಿ ನೀಡಿರುವುದು ಪತ್ತೆಯಾಗಿದೆ. ಕೆಂಗೇರಿ ಹೋಬಳಿ ಉಲ್ಲಾಳ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಜಮೀನನ್ನು ಬಡಾವಣೆಗೆ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ನಕಲಿ ದಾಖಲೆ ಸೃಷ್ಟಿಸಿ ಪರಿಹಾರ ರೂಪದಲ್ಲಿ ₹ 1.5 ಕೋಟಿ ಮೌಲ್ಯದ ನಿವೇಶನ ನೀಡಿರುವುದನ್ನೂ ಪತ್ತೆಮಾಡಲಾಗಿದೆ’ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಿ ಚಂದ್ರಾ ಲೇಔಟ್‌ ಪ್ರದೇಶದಲ್ಲಿ ವ್ಯಕ್ತಿಯೊಬ್ಬರಿಗೆ ₹ 5 ಕೋಟಿ ಮೌಲ್ಯದ ನಿವೇಶನ ಮತ್ತು ಕೆಂಗೇರಿ ಉಪನಗರ ಬಳಿ ₹ 80 ಲಕ್ಷ ಮೌಲ್ಯದ ನಿವೇಶನ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕೆಂಪೇಗೌಡ ಬಡಾವಣೆಯಲ್ಲಿ ಮೂಲ ಅರ್ಜಿದಾರರ ದಾಖಲೆಗಳನ್ನು ತಿದ್ದುಪಡಿ ಮಾಡಿ ಬೇರೊಬ್ಬರಿಗೆ ₹ 30 ಲಕ್ಷ ಮೌಲ್ಯದ ನಿವೇಶನ ಹಂಚಿಕೆ ಮಾಡಲಾಗಿದೆ. ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ವ್ಯಕ್ತಿಯೊಬ್ಬರಿಗೆ ಮಂಜೂರಾದ ₹ 52 ಲಕ್ಷ ಮೌಲ್ಯದ ನಿವೇಶನವನ್ನು ಬೇರೊಬ್ಬರಿಗೆ ಹಂಚಿಕೆ ಮಾಡಿರುವುದು ಕಂಡುಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

ಅಂಜನಾಪುರ ಬಡಾವಣೆಯಲ್ಲಿ ವ್ಯಕ್ತಿಯೊಬ್ಬರಿಗೆ ನೀಡಿದ್ದ ನಿವೇಶನವನ್ನು ಬೇರೊಬ್ಬರು ಒತ್ತುವರಿ ಮಾಡಿದ್ದರು. ಈ ಕುರಿತು ದೂರು ನೀಡಿದಾಗ ಫಲಾನುಭವಿಗೆ ಮತ್ತೊಂದು ಬಡಾವಣೆಯಲ್ಲಿ ಪರ್ಯಾಯ ನಿವೇಶನ ಹಂಚಿಕೆ ಮಾಡಲಾಗಿದೆ. ಬಳಿಕ ಅದೇ ನಿವೇಶನವನ್ನು ಮತ್ತೊಬ್ಬರಿಗೂ ಹಂಚಿಕೆ ಮಾಡಿ ಅಕ್ರಮ ಎಸಗಿರುವ ದಾಖಲೆ ವಶಕ್ಕೆ ಪಡೆಯಲಾಗಿದೆ.

ಪರಿಹಾರದಲ್ಲಿ ಭಾರಿ ಅಕ್ರಮ: ಕೆಂಪೇಗೌಡ ಬಡಾವಣೆ, ಶಿವರಾಮ ಕಾರಂತ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗಳ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡ ಜಮೀನುಗಳ ಮಾಲೀಕರಿಗೆ ಪರಿಹಾರ ನೀಡುವುದರಲ್ಲಿ ಭಾರಿ ಅಕ್ರಮ ಪತ್ತೆಯಾಗಿದೆ. ಸ್ವಾಧೀನಪಡಿಸಿಕೊಂಡ ಜಮೀನುಗಳ ಮಾಲೀಕರು ಎಂದು ಖಾಸಗಿ ವ್ಯಕ್ತಿಗಳಿಗೆ ₹ 100 ಕೋಟಿಗೂ ಹೆಚ್ಚು ಪರಿಹಾರ ವಿತರಿಸಿರುವುದಕ್ಕೆ ಸಂಬಂಧಿಸಿದ ಕಡತಗಳನ್ನು ತನಿಖಾ ತಂಡ ವಶಕ್ಕೆ ಪಡೆದಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಸ್ವಾಧೀನಪಡಿಸಿಕೊಂಡಿರುವ ಜಮೀನುಗಳ ಮಾಲೀಕರಿಗೆ ಪರಿಹಾರ ವಿತರಿಸುವುದರಲ್ಲೂ ಅಕ್ರಮಗಳು ಕಂಡುಬಂದಿವೆ. ಬಿಡಿಎ ಅಧಿಕಾರಿಗಳು, ಸಿಬ್ಬಂದಿ ಮತ್ತು ಖಾಸಗಿ ಮಧ್ಯವರ್ತಿಗಳು ಶಾಮೀಲಾಗಿ ನಕಲಿ ದಾಖಲೆ ಸೃಷ್ಟಿಸಿ ಪರಿಹಾರದ ಹಣವನ್ನೇ ಲಪಟಾಯಿಸಿರುವ ಪ್ರಕರಣಗಳೂ ಶೋಧದಲ್ಲಿ ಪತ್ತೆಯಾಗಿವೆ ಎಂದು ಎಸಿಬಿ ಮಾಹಿತಿ ನೀಡಿದೆ.

ಎಸಿಬಿ ಎಸ್‌ಪಿಗಳಾದ ಜಿ.ಎಚ್. ಯತೀಶ್‌ ಚಂದ್ರ, ಅಬ್ದುಲ್‌ ಅಹದ್‌, ಉಮಾ ಪ್ರಶಾಂತ್‌ ಸೇರಿದಂತೆ 20ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು 50 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಳಂಬ, ಕಿರುಕುಳದ ಆರೋಪಕ್ಕೆ ಸಾಕ್ಷ್ಯ

‘ಒಂದೇ ನಿವೇಶನವನ್ನು ಇಬ್ಬರಿಗೆ ಹಂಚಿಕೆ ಮಾಡಿ, ಫಲಾನುಭವಿಗಳು ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿರುವ ಹಲವು ಪ್ರಕರಣಗಳು ಪತ್ತೆಯಾಗಿವೆ. ಒಂದು ಬಡಾವಣೆಯಲ್ಲಿ ನಿವೇಶನ ಮಂಜೂರಾದ ಬಳಿಕ ಸಕಾರಣವಿಲ್ಲದೆ ಅದನ್ನು ರದ್ದುಪಡಿಸಿ, ಬೇರೊಂದು ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡಿರುವುದೂ ಕಂಡುಬಂದಿದೆ’ ಎಂದು ಎಸಿಬಿ ತಿಳಿಸಿದೆ.

ನಿಗದಿತ ಅವಧಿ ಮುಗಿದಿದ್ದರೂ ಫಲಾನುಭವಿಗಳಿಗೆ ಶುದ್ಧ ಕ್ರಯಪತ್ರ ಮಾಡಿಕೊಡದೇ ಸತಾಯಿಸುತ್ತಿರುವುದು ಮತ್ತು ಹಣ ಪಾವತಿಸಿದವರಿಗೆ ಸಕಾಲದಲ್ಲಿ ನಿವೇಶನ ಹಂಚಿಕೆ ಮಾಡದೇ ವಿಳಂಬ ನೀತಿ ಅನುಸರಿಸುತ್ತಿರುವುದೂ ಪತ್ತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT