ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರ ಬಂಧನ: ₹82.65 ಲಕ್ಷ ವಶ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭೂಮಿ ಖರೀದಿಸುವ ಯೋಜನೆಯಲ್ಲಿ ಅವ್ಯವಹಾರ
Last Updated 28 ಆಗಸ್ಟ್ 2020, 21:40 IST
ಅಕ್ಷರ ಗಾತ್ರ

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಅವ್ಯವಹಾರ ಪ್ರಕರಣ ಸಂಬಂಧ ಪ್ರಧಾನ ವ್ಯವಸ್ಥಾಪಕ ನಾಗೇಶ್ ಸೇರಿ ಮೂವರನ್ನು ಬಂಧಿಸಿರುವ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಅಧಿಕಾರಿಗಳು, ಒಟ್ಟು ₹82.65 ಲಕ್ಷ ವಶಕ್ಕೆ ಪಡೆದಿದ್ದಾರೆ.

ನಿಗಮದ ಕಚೇರಿ ಮೇಲೆ ಗುರುವಾರ ದಾಳಿ ನಡೆಸಿ ₹22.65 ಲಕ್ಷ ಜಪ್ತಿ‌ ಮಾಡಿದ್ದರು. ಶುಕ್ರವಾರವೂ ತನಿಖೆ ಮುಂದುವರಿಸಿದ ಎಸಿಬಿ ಅಧಿಕಾರಿಗಳು, ಮೂವರು ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ನಡೆಸಿ ₹60 ಲಕ್ಷ ವಶಪಡಿಸಿಕೊಂಡಿದ್ದಾರೆ.

ನಾಗೇಶ್, ಸಹಾಯಕ ಪ್ರಧಾನ ವ್ಯವಸ್ಥಾಪಕಿ ಮಂಜುಳಾ ಮತ್ತು ವ್ಯವಸ್ಥಾಪಕ ಸುಬ್ಬಯ್ಯ ಎಂಬುವರ ಮನೆ ಮೇಲೆ ದಾಳಿ ನಡೆಸಲಾಗಿದೆ. ನಾಗೇಶ್ ಮನೆಯಲ್ಲಿ ₹ 32.50 ಲಕ್ಷ ಮತ್ತು ಸುಬ್ಬಯ್ಯ ಮನೆಯಲ್ಲಿ ₹27.50 ಲಕ್ಷ ಪತ್ತೆಯಾಗಿದೆ. ಗುರುವಾರ ವಶಪಡಿಸಿಕೊಂಡ ಮೊತ್ತವೂ ಸೇರಿ ₹82.65 ಲಕ್ಷ ಜಪ್ತಿ ಮಾಡಿ ಮೂವರು ಅಧಿಕಾರಿಗಳನ್ನು ಬಂಧಿಸಲಾಗಿದೆ.

ಬಡ ಪರಿಶಿಷ್ಟ ಪಂಗಡದ ಭೂಹೀನ ರೈತರಿಗೆ ಸರ್ಕಾರದಿಂದ ಭೂಮಿ ಖರೀದಿಸಿ ನೀಡುವ ಯೋಜನೆಯನ್ನು ನಿಗಮದ ಮೂಲಕ ಅನುಷ್ಠಾನ ಮಾಡಲಾಗುತ್ತಿದೆ. ಈ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಯುತ್ತಿದ್ದು, ಫಲವತ್ತಾಗಿರದ ಮತ್ತು ಕಡಿಮೆ ಬೆಲೆಯ ಭೂಮಿಯನ್ನು ಹೆಚ್ಚಿನ ಬೆಲೆಗೆ ಖಾಸಗಿ ಭೂ ಮಾಲೀಕರಿಂದ ಖರೀದಿಸಲಾಗುತ್ತದೆ.

ಈ ಮೂಲಕ ಪ್ರತಿ ಎಕರೆಗೆ ₹4 ಲಕ್ಷದಿಂದ ₹ 5 ಲಕ್ಷ ದವರೆಗೆ ಹೆಚ್ಚು ಬೆಲೆಗೆ ಖರೀದಿಸಿ ಹೆಚ್ಚುವರಿ ಹಣವನ್ನು ಮಧ್ಯವರ್ತಿಗಳು ಮತ್ತು ಅಧಿಕಾರಿಗಳು ಹಂಚಿಕೊಳ್ಳುತ್ತಾರೆ. ಇದರಿಂದ ಫಲಾನುಭವಿಗಳಿಗೆ ಹಾಗೂ ಸರ್ಕಾರಕ್ಕೆ ವಂಚನೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.

‘ರಾಯಚೂರು ಜಿಲ್ಲೆಗೆ ಭೂ ಒಡೆತನ ಯೋಜನೆಯಡಿ ₹8 ಕೋಟಿ ಬಿಡುಗಡೆಗೆ ಕಡತ ಸಿದ್ದವಾಗಿತ್ತು. ಅದರಲ್ಲಿ ಶೇ 7ರಷ್ಟು ಕಮಿಷನ್ (₹56 ಲಕ್ಷ) ರೂಪದಲ್ಲಿ ಲಂಚದ ಹಣ ಸುಬ್ಬಯ್ಯ ಅವರ ಕೈ ಸೇರಬೇಕಿದ್ದು, ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಯಿತು’ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT