ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಟ್‌ನಲ್ಲಿ ‘ಪರಿಶ್ರಮ’ದ ಸಾಧನೆ

‘ಪರಿಶ್ರಮ ಅಕಾಡೆಮಿ’ ವಿದ್ಯಾರ್ಥಿ ಸಾತ್ವಿಕ್‌ಗೆ ರಾಜ್ಯದಲ್ಲಿ ಎರಡನೇ ಸ್ಥಾನ
Last Updated 9 ಸೆಪ್ಟೆಂಬರ್ 2022, 18:22 IST
ಅಕ್ಷರ ಗಾತ್ರ

ಬೆಂಗಳೂರು: ನೀಟ್‌ ಫಲಿತಾಂಶದಲ್ಲಿ ಬೆಂಗಳೂರಿನ‘ಪರಿಶ್ರಮ ನೀಟ್‌ ಅಕಾಡೆಮಿ’ಯ ವಿದ್ಯಾರ್ಥಿ ಸಾತ್ವಿಕ್‌ ಅವರು ರಾಜ್ಯದಲ್ಲಿ ಎರಡನೇ ಹಾಗೂ ದೇಶದಲ್ಲಿ 10ನೇ ಸ್ಥಾನ ಪಡೆದಿದ್ದಾರೆ ಎಂದು ಅಕಾಡೆಮಿ ಸಂಸ್ಥಾಪಕ ಪ್ರದೀಪ್‌ ಈಶ್ವರ್‌ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಕಳೆದ ವರ್ಷಕ್ಕಿಂತ ಈ ಬಾರಿ ನಮ್ಮ ಅಕಾಡೆಮಿ ಉತ್ತಮ ಸಾಧನೆ ತೋರಿದೆ. 700 ವಿದ್ಯಾರ್ಥಿಗಳು ದೀರ್ಘಾವಧಿ ಕೋರ್ಸ್‌ಗೆ ಸೇರಿದ್ದರು. ಇದರಲ್ಲಿ 580ರಿಂದ 600 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸುಮಾರು 60 ವಿದ್ಯಾರ್ಥಿಗಳು ಏಮ್ಸ್‌ನಲ್ಲಿ ಸೀಟು ಪಡೆಯುವುದು ನಿಶ್ಚಿತ’ ಎಂದು ಹೇಳಿದರು.

‘ದಕ್ಷಿಣ ಭಾರತದ ಸಾವಿರಾರು ವಿದ್ಯಾರ್ಥಿಗಳಿಗೆ ಕಬ್ಬಿಣ ಕಡಲೆ ಯಾಗಿರುವ ನೀಟ್ ಪರೀಕ್ಷೆ, ‘ಪರಿಶ್ರಮ ವಿದ್ಯಾರ್ಥಿಗಳಿಗೆ ಸುಲಭದ್ದಾಗಿದೆ. 2019ರಲ್ಲಿ 60 ವಿದ್ಯಾರ್ಥಿಗಳಿಂದ ಆರಂಭವಾದ ಅಕಾಡೆಮಿ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಮುಂದಿನ ನೀಟ್‌ಗೆ ತಯಾರು ಮಾಡುವ ಗುರಿ ಹೊಂದಿದೆ. ವರ್ಷದಿಂದ ವರ್ಷಕ್ಕೆ ಅಕಾಡೆಮಿಯ ವಿದ್ಯಾರ್ಥಿಗಳ ಸಾಧನೆ ಹೆಚ್ಚಾಗುತ್ತಿದೆ. ಈ ಬಾರಿ ಸಾತ್ವಿಕ್‌– 700, ಪ್ರಜ್ವಲ್‌– 680, ಸಂಜನಾ– 670, ಯಶಸ್‌– 660, ವಿಕಾಸ್‌– 655 ಅಂಕ ಗಳಿಸಿ ಅಕಾಡೆಮಿಯ ಅಗ್ರ ಐದು ಸ್ಥಾನ ಪಡೆದಿದ್ದಾರೆ’ ಎಂದರು.

‘ಈ ಸಾಧನೆ ಕೇವಲ ಪರಿಶ್ರಮ ಅಕಾಡೆಮಿಯದ್ದು ಎನ್ನುವುದಕ್ಕಿಂತ, ಕನ್ನಡಿಗರದ್ದು. ಕನ್ನಡದ ಹುಡುಗನೊಬ್ಬ ಸ್ಥಾಪಿಸಿದ ಸಂಸ್ಥೆ ಇಂದು ರಾಷ್ಟ್ರಮಟ್ಟದಲ್ಲಿ ಹೆಸರಾಗುವುದಕ್ಕೆ ಕರ್ನಾಟಕದ ಜನ ನೀಡಿದ ಸಹಕಾರ ಕಾರಣ.ಪರಿಶ್ರಮ ನೀಟ್ ಅಕಾಡೆಮಿ ಬೆಂಗಳೂರಿನ ಕೆಂಗೇರಿಯಲ್ಲಿ ಮಾತ್ರವಿದೆ. ರಾಜ್ಯದ ಯಾವ ಭಾಗದಲ್ಲಿಯೂ ಶಾಖೆ ಹೊಂದಿಲ್ಲ’ ಎಂದು ಅವರು
ಸ್ಪಷ್ಟಪಡಿಸಿದರು.

‘ಇಲ್ಲಿಗೆ ಬರುವ ವಿದ್ಯಾರ್ಥಿಗಳು ಅದಾಗಲೇ ಎರಡು ವರ್ಷ ಶ್ರಮಪಟ್ಟು ಓದಿರುತ್ತಾರೆ. ಆದರೆ ವೈದ್ಯಕೀಯ ಸೀಟು ಸಿಕ್ಕಿರುವುದಿಲ್ಲ. ಅಂತಹವರು ನಮ್ಮಲ್ಲಿ 10 ತಿಂಗಳು ಶ್ರದ್ಧೆಯಿಂದ ಓದುತ್ತಾರೆ. ಹಾಸ್ಟೆಲ್‌ನಲ್ಲಿ ಸಕಲ ಸೌಲಭ್ಯವಿದೆ.

ಆದರೆ, ಮೊಬೈಲ್‌ ಮುಕ್ತವಾಗಿರುತ್ತದೆ. ಅತ್ಯುತ್ತಮ ಬೋಧಕ ಸಿಬ್ಬಂದಿ, ಶಿಸ್ತುಬದ್ಧ ಶೈಕ್ಷಣಿಕ ವ್ಯವಸ್ಥೆಯಿಂದ ಉತ್ತಮ ಫಲಿತಾಂಶ ಸಿಗುತ್ತಿದೆ. ಈ ಬಾರಿ ನಾವು ಮೊದಲ ರ‍್ಯಾಂಕ್ ಪಡೆಯುವ ವಿಶ್ವಾಸದಲ್ಲಿದ್ದೆವು. ಆದರೆ ಕೇವಲ 10 ಅಂಕಗಳಲ್ಲಿ ತಪ್ಪಿಸಿಕೊಂಡೆವು. ಮುಂದಿನ ಬಾರಿ ನಿಶ್ಚಿತವಾಗಿ ನಾವು ಮೊದಲ ರ‍್ಯಾಂಕ್ ಪಡೆಯುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಕಾಡೆಮಿ ಡೀನ್‌ ಹನುಮಂತ ರಾವ್‌, ಪ್ರೊ. ಮಾಧವರಾವ್‌, ಪ್ರೊ. ಶ್ರೀನಿಧಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT