ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಆಸ್ತಿ ಜಪ್ತಿ ತಡೆಗೆ ಕಾಯ್ದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬ್ಯಾಂಕ್‌ ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್ಚರಿಕೆ  
Last Updated 5 ನವೆಂಬರ್ 2022, 19:46 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾಲ ಮರುಪಾವತಿ ವಿಳಂಬ ಮಾಡಿರುವ ಸಂದರ್ಭಗಳಲ್ಲಿ ರೈತರ ಆಸ್ತಿ, ಚಿನ್ನಾಭರಣ ಜಪ್ತಿ ಮಾಡದಂತೆ ನಿರ್ಬಂಧ ಹೇರಲು ಕಾಯ್ದೆ ರೂಪಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಭರವಸೆ ನೀಡಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ಏರ್ಪಡಿಸಿರುವ ಕೃಷಿ ಮೇಳದಲ್ಲಿ ಪ್ರಗತಿಪರ ಕೃಷಿಕರಿಗೆ ಸಾಧಕ ಪ್ರಶಸ್ತಿಯನ್ನು ಪ್ರದಾನ ಮಾಡಿದ ಅವರು, ‘ಆಸ್ತಿ ಜಪ್ತಿ, ಹರಾಜು ಕ್ರಮಕ್ಕೆ ಮುಂದಾಗದಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ತಿಳಿಸಿದರು.

‘ಸುಸ್ತಿದಾರರಾಗಿರುವ ರೈತರಿಗೆ ಸಾಲವನ್ನು ಮರುಪಾವತಿಸಲು ಸಮಯಾವಕಾಶ ನೀಡಬೇಕು. ನಬಾರ್ಡ್‌ನ ಸಭೆಯಲ್ಲೂ ಈ ಸಂಬಂಧ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ್ದೇನೆ’ ಎಂದರು.

‘ಸಹಕಾರ ಬ್ಯಾಂಕ್‌ಗಳು ರೈತರಿಗೆ ನಿಗದಿಗಿಂತ ಕಡಿಮೆ ಮೊತ್ತದ ಸಾಲ ವಿತರಿಸುತ್ತಿವೆ. ಜಮೀನು ವಿಸ್ತೀರ್ಣ ಆಧರಿಸಿ ಸಾಲದ ಮೊತ್ತವನ್ನು ಹೆಚ್ಚಿಸಲೂ ಬ್ಯಾಂಕ್‌ ಅಧಿಕಾರಿಗಳಿಗೆ ಸೂಚನೆ ನೀಡಿರುವೆ. ರೈತರ ಆದಾಯ ಹೆಚ್ಚಿದರೆ ರಾಜ್ಯವೂ ಅಭಿವೃದ್ಧಿ ಆಗಲಿದೆ’ ಎಂದು ಆಶಿಸಿದರು.

‘ರಾಜ್ಯದ 10 ಲಕ್ಷ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯಡಿ ನೆರವು ವಿತರಿಸಲಾಗಿದೆ‌. 6 ಲಕ್ಷ ಕೃಷಿ ಕಾರ್ಮಿಕರ ಮಕ್ಕಳನ್ನು ಗುರುತಿಸಿದ್ದು, ಅವರಿಗೂ ಶೀಘ್ರವೇ ‘ವಿದ್ಯಾನಿಧಿ’ ಅಡಿ ವಿದ್ಯಾರ್ಥಿ ವೇತನ ವಿತರಿಸಲಾಗುವುದು. ನೇಕಾರರು, ಮೀನುಗಾರರು, ಟ್ಯಾಕ್ಸಿ ಹಾಗೂ ಆಟೊರಿಕ್ಷಾ ಚಾಲಕರ ಮಕ್ಕಳಿಗೂ ಈ ಯೋಜನೆ ಸೌಲಭ್ಯಗಳನ್ನು ವಿಸ್ತರಿಸಲಾಗಿದೆ. ದುಡಿಯುವ ವರ್ಗಕ್ಕೆ ಸರ್ಕಾರ ಬಲ ತುಂಬುತ್ತಿದೆ’ ಎಂದು ಹೇಳಿದರು.

ಶೇ 60ರಷ್ಟು ಜನರು ಕೃಷಿ ಅವಲಂಬಿತರಿದ್ದಾರೆ. ಕೃಷಿ ವಲಯದಲ್ಲಿ ಶೇ 1 ರಷ್ಟು ಬೆಳವಣಿಗೆಯಾದರೆ ಕೈಗಾರಿಕೆ ಹಾಗೂ ಸೇವಾ ವಲಯದಲ್ಲಿ ಹೆಚ್ಚಿನ ಬೆಳವಣಿಗೆ ಆಗಲಿದೆ ಎಂದು ಹೇಳಿದರು.

ಸಿರಿಧಾನ್ಯ ಮೇಳ: ಜನವರಿ ಮೊದಲ ವಾರ ರಾಜ್ಯಮಟ್ಟದ ಸಿರಿಧಾನ್ಯ ಮೇಳವನ್ನು ಆಯೋಜಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT