ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲಾದರೆ ಕ್ರಮ: ಅಧಿಕಾರಿಗಳಿಗೆ ನಿರಾಣಿ ಎಚ್ಚರಿಕೆ

ಅಧಿಕಾರಿಗಳಿಗೆ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಎಚ್ಚರಿಕೆ
Last Updated 28 ಜನವರಿ 2021, 17:35 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ಗಣಿಗಾರಿಕೆ ಮತ್ತು ಕಲ್ಲು ಕ್ವಾರಿಯಲ್ಲಿ ಇಲಾಖೆಯ ಅಧಿಕಾರಿಗಳು ಶಾಮೀಲಾಗಿರುವುದು ಕಂಡುಬಂದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಎಚ್ಚರಿಕೆ ನೀಡಿದರು.

ಗುರುವಾರ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ‘ನಾನು ಸಚಿವನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬಹಳಷ್ಟು ದೂರುಗಳು ಬಂದಿವೆ, ಇಲಾಖೆಯ ಅಧಿಕಾರಿಗಳು ಶಾಮೀಲಾಗಿರುವುದು ನನ್ನ ಗಮನಕ್ಕೆ ಬಂದಿದೆ. ಯಾರೇ ಇರಲಿ. ಎಷ್ಟೇ ಪ್ರಭಾವಿಗಳೇ ಆಗಿರಲಿ, ಕಾನೂನು ಉಲ್ಲಂಘಿಸಿರುವುದು ಸಾಬೀತಾದರೆ ಸುಮ್ಮನೆ ಬಿಡುವುದಿಲ್ಲ’ ಎಂದು ಎಚ್ಚರಿಸಿದರು.

‘ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿದ ವೇಳೆ ನಿಮ್ಮ ಅಧಿಕಾರಿಗಳೇ ಗಣಿಗಾರಿಕೆ ನಡೆಸುವವರು ಹಾಗೂ ಕಲ್ಲು ಕ್ವಾರಿಗಳ ಮಾಲೀಕರ ಜೊತೆ ಶಾಮೀಲಾಗಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ಕೊಟ್ಟಿದ್ದಾರೆ ಎಂಬ ದೂರುಗಳು ಬಂದಿವೆ. ಮುಂದೆ ಇಂತಹ ಪ್ರಮಾದಗಳು ಆಗದಂತೆ ಎಚ್ಚರವಹಿಸಬೇಕು ಇಲ್ಲದಿದ್ದರೆ ನಾನು ಏನೆಂಬುದನ್ನು ತೋರಿಸಬೇಕಾಗುತ್ತದೆ’ ಎಂದು ಹೇಳಿದರು.

‘ಸಭೆಯಲ್ಲಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸಚಿವರು ಶಿವಮೊಗ್ಗ ಜಿಲ್ಲೆಯಲ್ಲಿ ಇತ್ತೀಚೆಗೆ ಕಲ್ಲು ಕ್ವಾರಿಯಲ್ಲಿ ಉಂಟಾದ ಸ್ಫೋಟದ ಬಗ್ಗೆ ಏಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಿಲ್ಲ’ ಎಂದು ಪ್ರಶ್ನಿಸಿದರು.

‘ಜಿಲೆಟಿನ್ ಕಡ್ಡಿಗಳನ್ನು ಸಾಗಿಸುವಾಗ ನೀವು ಅದನ್ನು ಪರಿಶೀಲನೆ ನಡೆಸದೆ ಹೇಗೆ ಬಿಟ್ಟಿರಿ? ಇದಕ್ಕೆ ಕಾರಣಕರ್ತರು ಯಾರು? ಅಧಿಕಾರಿಗಳು ಮಾಡುವ ತಪ್ಪಿನಿಂದಾಗಿ ಇಲಾಖೆಗೆ ಕೆಟ್ಟ ಹೆಸರು ಬಂದಿದೆ. ನೀವು ಕಾಲ ಕಾಲಕ್ಕೆ ಬಿಗಿಯಾದ ಕ್ರಮಗಳನ್ನು ತೆಗೆದುಕೊಂಡಿದ್ದರೆ ಶಿವಮೊಗ್ಗದಲ್ಲಿ ಈ ಘಟನೆ ಸಂಭವಿಸುತ್ತಿತ್ತೇ’ ಎಂದೂ ಪ್ರಶ್ನಿಸಿದರು.

ಅಧಿಕಾರಿಗಳು ಕುಂಟು ನೆಪಬಿಟ್ಟು ಇನ್ನು ಮುಂದಾದರೂ ಇಲಾಖೆ ಗುರಿ ನಿಗದಿ ಮಾಡಿರುವಷ್ಟು ಆದಾಯ ಸಂಗ್ರಹ ಮಾಡಬೇಕು, ಈವರೆಗೂ ಕೋವಿಡ್ ಕಾರಣ ಹೇಳಿ ನಿರೀಕ್ಷಿತ ಮಟ್ಟದಲ್ಲಿ ವರಮಾನವನ್ನು ಸಂಗ್ರಹಿಸಿಲ್ಲ. ಇನ್ನು ಮುಂದೆ ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಸಚಿವರು ಹೇಳಿದರು.

ಪ್ರಮುಖವಾಗಿ ಮೈಸೂರು, ಕೋಲಾರ, ದಾವಣಗೆರೆ, ದಕ್ಷಿಣಕನ್ನಡ, ರಾಮನಗರ ಜಿಲ್ಲೆಗಳಲ್ಲಿ ಅತ್ಯಂತ ಕಡಿಮೆ ವರಮಾನ ಸಂಗ್ರಹವಾಗಿದೆ, ಈ ವೇಳೆ ದಾವಣಗೆರೆ ಜಿಲ್ಲೆಯ ಉಪನಿರ್ದೇಶಕರು ಹರಪನಹಳ್ಳಿ ತಾಲ್ಲೂಕು ಮತ್ತು ಬಳ್ಳಾರಿಯಲ್ಲಿ ನಿರೀಕ್ಷಿತ
ಪ್ರಮಾಣದಲ್ಲಿ ವರಮಾನ ಸಂಗ್ರಹಿಸದಿರಲು ಕೋವಿಡ್ ಕಾರಣ ಎಂದು ಹೇಳಿದರು.

ಇದಕ್ಕೆ ಸಿಡಿಮಿಡಿಗೊಂಡ ಸಚಿವರು ‘ಈವರೆಗೂ ಇಂತಹ ಕಾರಣಗಳು ಕೊಟ್ಟಿದ್ದು ಸಾಕು. ಇನ್ನು ಮುಂದೆ ನಾನು ಇದಕ್ಕೆ ಅವಕಾಶ ನೀಡುವುದಿಲ್ಲ. ಸರ್ಕಾರ ನಿಗದಿ ಮಾಡಿದ ಗುರಿ ಸಾಧನೆಯನ್ನು ಮಾಡಲೇಬೇಕು ಇಲ್ಲದಿದ್ದರೆ ಕ್ರಮ
ಜರುಗಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT