ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆ.27ರ ಭಾರತ್‌ ಬಂದ್‌ ಯಶಸ್ವಿಗೊಳಿಸಲು ಹೋರಾಟಗಾರರ ಕರೆ

ಆನ್‌ಲೈನ್‌ ಬಹಿರಂಗ ಸಭೆಯಲ್ಲಿ ಹೋರಾಟಗಾರರ ಕರೆ
Last Updated 20 ಸೆಪ್ಟೆಂಬರ್ 2021, 5:00 IST
ಅಕ್ಷರ ಗಾತ್ರ

ಬೆಂಗಳೂರು: ಸಂಯುಕ್ತ ಕಿಸಾನ್‌ ಮೋರ್ಚಾ ಕರೆ ನೀಡಿರುವ ಸೆಪ್ಟೆಂಬರ್‌ 27ರ ಭಾರತ್ ಬಂದ್‌ ಹೋರಾಟವನ್ನು ಯಶಸ್ವಿಗೊಳಿಸುವಂತೆ ರಾಜ್ಯದ ವಿವಿಧ ರೈತ, ದಲಿತ ಮತ್ತು ಜನಪರ ಸಂಘಟನೆಗಳ ನೇತಾರರು ಭಾನುವಾರ ಆನ್‌ಲೈನ್‌ ಮೂಲಕ ನಡೆದ ರಾಜ್ಯಮಟ್ಟದ ಬಹಿರಂಗ ಸಭೆಯಲ್ಲಿ ಮನವಿ ಮಾಡಿದರು.

ಸಂಯುಕ್ತ ಹೋರಾಟ ಕರ್ನಾಟಕ ಆಯೋಜಿಸಿದ್ದ ಆನ್‌ಲೈನ್‌ ಸಭೆಯಲ್ಲಿ ಪಾಲ್ಗೊಂಡಿದ್ದ ಹೋರಾಟಗಾರರು, ಭಾರತ್‌ ಬಂದ್ ಕರೆಯ ಹಿಂದಿರುವ ಕಾರಣಗಳನ್ನು ವಿವರಿಸಿದರು. ರಾಜ್ಯದಾದ್ಯಂತ ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿಕೊಂಡು ಆ ದಿನ ಚಳವಳಿ ನಡೆಸಲು ಸಿದ್ಧತೆ ಮಾಡಿಕೊಳ್ಳುವಂತೆ ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌, ‘ಅಗತ್ಯ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ, ಕೃಷಿ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿರುವುದು ಸೇರಿದಂತೆ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಈ ಹೋರಾಟ ನಡೆಸಲಾಗುತ್ತಿದೆ. ರೈತರು, ಕಾರ್ಮಿಕರು, ದಲಿತರು ಸೇರಿದಂತೆ ಎಲ್ಲ ವರ್ಗದ ಜನರ ಬೆಂಬಲವನ್ನೂ ಕಲೆಹಾಕಬೇಕು’ ಎಂದು ಹೇಳಿದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ‘ಕೇಂದ್ರ ಸರ್ಕಾರದ ಜನವಿರೋಧಿ ಕಾಯ್ದೆಗಳಿಂದಾಗಿ ಬೆಂಬಲ ಬೆಲೆ ವ್ಯವಸ್ಥೆ ಸಂಪೂರ್ಣ ಹಳಿತಪ್ಪಿದೆ. ಇನ್ನೊಂದೆಡೆ ವಿದ್ಯುತ್‌ ಸರಬರಾಜು ಕಂಪನಿಗಳ ಖಾಸಗೀಕರಣಕ್ಕೂ ಸಿದ್ಧತೆ ನಡೆದಿದೆ. ಈ ಎಲ್ಲವನ್ನೂ ಸಂಘಟಿತವಾಗಿ ವಿರೋಧಿಸುವುದೇ ಬಂದ್‌ ಕರೆಯ ಉದ್ದೇಶ’ ಎಂದರು.

ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಜಿ.ಸಿ. ಬಯ್ಯಾರೆಡ್ಡಿ, ರೈತ ಕಾರ್ಮಿಕರ ಸಂಘದ ಎಚ್‌.ವಿ. ದಿವಾಕರ್‌, ಅಖಿಲ ಭಾರತ ಕಿಸಾನ್‌ ಸಭಾ ಮುಖಂಡ ಪಿ.ವಿ. ಲೋಕೇಶ್‌, ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ಮಾವಳ್ಳಿ ಶಂಕರ್‌, ಕರ್ನಾಟಕದ ಜನಶಕ್ತಿಯ ಮಲ್ಲಿಗೆ ಸಿರಿಮನೆ ಹೋರಾಟದ ವಿವಿಧ ಆಯಾಮಗಳ ಕುರಿತು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT