ಮಂಗಳವಾರ, ಆಗಸ್ಟ್ 9, 2022
20 °C

ಸಂಚಾರಿ ವಿಜಯ್: ಸಾವಿನಲ್ಲೂ ಸಾರ್ಥಕತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಟ ಸಂಚಾರಿ ವಿಜಯ್ ಅವರು ಯಕೃತ್ತು, ಮೂತ್ರಪಿಂಡ ಸೇರಿದಂತೆ ವಿವಿಧ ಅಂಗಾಂಗಳನ್ನು ದಾನವಾಗಿ ನೀಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಕಂಡಿದ್ದಾರೆ. ಅವರಿಂದ ದಾನ ಪಡೆದ ಅಂಗಾಂಗಳನ್ನು ಗಂಭೀರ ಕಾಯಿಲೆ ಎದುರಿಸುತ್ತಿದ್ದವರಿಗೆ ಕಸಿ ಮಾಡಲಾಗಿದೆ.

ಸೋಮವಾರ ಅವರ ಮಿದುಳು ನಿಷ್ಕ್ರಿಯಗೊಂಡಿರುವುದನ್ನು ಘೋಷಿಸಿದ್ದ ಅಪೋಲೊ ಆಸ್ಪತ್ರೆ ವೈದ್ಯರು, ಕುಟುಂಬದ ಸದಸ್ಯರಿಂದ ಅಂಗಾಂಗ ದಾನದ ಪ್ರಕ್ರಿಯೆಗೆ ಸಮ್ಮತಿ ಪಡೆದಿದ್ದರು. ಬಳಿಕ ಅಂಗಾಂಗಗಳನ್ನು ಬೇರ್ಪಡಿಸಿ, ಸರ್ಕಾರದ ಜೀವಸಾರ್ಥಕತೆ ಸಂಸ್ಥೆಯಡಿ ಹೆಸರು ನೋಂದಾಯಿಸಿದವರನ್ನು ಗುರುತಿಸಿ, ಅಂಗಾಂಗ ವೈಫಲ್ಯವಾಗಿರುವವರಿಗೆ ಕಸಿ ಮಾಡಲಾಗಿದೆ. 

‘ಯಕೃತ್ತು, ಎರಡು ಮೂತ್ರಪಿಂಡ, ಹೃದಯದ ಕವಾಟ ಹಾಗೂ ಕಾರ್ನಿಯಾವನ್ನು ದಾನವಾಗಿ ಪಡೆಯಲಾಗಿದೆ. ಈಗಾಗಲೇ ಸಂಸ್ಥೆಯಲ್ಲಿ ಹೆಸರು ನೋಂದಾಯಿಸಿ, ಅಂಗಾಂಗಕ್ಕೆ ಎದುರು ನೋಡುತ್ತಿದ್ದವರಿಗೆ ಕಸಿ ಮಾಡಲು ಅಂಗಾಂಗ ಒದಗಿಸಲಾಗುತ್ತಿದೆ. ಅವರ ಯಕೃತ್ತನ್ನು 50 ವರ್ಷದ ಪುರುಷನಿಗೆ ನೀಡಲಾಗಿದೆ. ಎಡ ಮೂತ್ರಪಿಂಡವು 57 ವರ್ಷದ ಪುರುಷನಿಗೆ ನೆರವಾಗಿದ್ದು, ಈ ಎರಡೂ ಕಸಿಯನ್ನು ಅಪೋಲೊ ಆಸ್ಪತ್ರೆಯಲ್ಲಿಯೇ ನಡೆಸಲಾಗಿದೆ. ಬಲ ಮೂತ್ರಪಿಂಡವನ್ನು 34 ವರ್ಷದ ಮಹಿಳೆಗೆ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಕಸಿ ಮಾಡಲಾಗಿದೆ’ ಎಂದು ಜೀವಸಾರ್ಥಕತೆ ಸಂಸ್ಥೆ ತಿಳಿಸಿದೆ.

‌‘ಹೃದಯದ ಕವಾಟವನ್ನು ಜಯದೇವ ಹೃದ್ರೋಗ ಸಂಸ್ಥೆಗೆ ಹಾಗೂ ಕಾರ್ನಿಯಾವನ್ನು ಮಿಂಟೊ ಕಣ್ಣಿನ ಆಸ್ಪತ್ರೆಗೆ ನೀಡಲಾಗಿದೆ. ನೋಂದಾಯಿತ ವ್ಯಕ್ತಿಯನ್ನು ಗುರುತಿಸಿ, 14 ದಿನಗಳ ಒಳಗಡೆ ಕಸಿ ಮಾಡಲಾಗುತ್ತದೆ. ಈ ಎಲ್ಲ ಪ್ರಕ್ರಿಯೆಗಳು ಕಾನೂನಾತ್ಮಕವಾಗಿ ನಡೆಯುತ್ತದೆ. ಸಂಚಾರಿ ವಿಜಯ್ ಅವರ ಅಂಗಾಂಗಗಳು ಏಳು ಮಂದಿಗೆ ನೆರವಾಗಲಿದೆ. ಅವರ ರೀತಿಯಲ್ಲಿಯೇ ಎಲ್ಲರೂ ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಬೇಕು. ಇದರಿಂದ ಸಾವಿನ ಬಳಿಕವೂ ಕೆಲವರಿಗೆ ಬೆಳಕಾಗಲು ಸಾಧ್ಯವಾಗುತ್ತದೆ’ ಎಂದು ಸಂಸ್ಥೆ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು