ಶನಿವಾರ, ಮಾರ್ಚ್ 25, 2023
27 °C

ಭಾವಚಿತ್ರ ಅನಾವರಣ ರಾಜಕೀಯ -ಸಾವರ್ಕರ್ ಚಿತ್ರ ವಿರೋಧಿಸದೇ ಕಾಂಗ್ರೆಸ್‌ ಪ್ರತಿತಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ (ಸುವರ್ಣ ವಿಧಾನಸೌಧ): ವಿಧಾನಸಭೆಯ ಸಭಾಂಗಣದಲ್ಲಿ ಸೋಮವಾರ ಕಲಾಪದ ಆರಂಭಕ್ಕೂ ಮೊದಲೇ ವಿನಾಯಕ ದಾಮೋದರ ಸಾವರ್ಕರ್ ಅವರದ್ದೂ ಸೇರಿ ಏಳು ಮಹನೀಯರ ಭಾವಚಿತ್ರಗಳ ಅನಾವರಣವನ್ನು ವಿರೋಧಪಕ್ಷಗಳ ಗಮನಕ್ಕೂ ತರದೇ ಮಾಡಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.

ಇಡೀ ಸದನದ ಸ್ವತ್ತಾದ ಸಭಾಂಗಣದಲ್ಲಿ ಭಾವಚಿತ್ರ ಅಳವಡಿಸುವ ಮೊದಲು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಬೇಕಿತ್ತು. ಜತೆಗೆ, ಕಲಾಪದಲ್ಲಿ ವಿವರ ನೀಡುವ ಜತೆಗೆ ಎಲ್ಲರಿಗೂ ಅಧಿಕೃತ ಆಮಂತ್ರಣ ನೀಡಿ, ಸಂಭ್ರಮದ ಕಾರ್ಯಕ್ರಮವಾಗಿಸಬೇಕಿತ್ತು. ಅದರ ಬದಲು ಕದ್ದು ಮುಚ್ಚಿ ಮಾಡಿದ್ದು ಸರಿಯಲ್ಲ ಎಂದು ಕಾಂಗ್ರೆಸ್ ನಾಯಕರು ಆಪಾದಿಸಿದರು. ಕಲಾಪ ಮುಗಿದ ಬಳಿಕ ನಡೆದ ಕಲಾಪ ಸಲಹಾ ಸಮಿತಿ ಸಭೆಯನ್ನು ಕಾಂಗ್ರೆಸ್ ಸದಸ್ಯರು ಬಹಿಷ್ಕರಿಸಿದರು.

ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ’ನನಗೆ ಗೊತ್ತೇ ಇರಲಿಲ್ಲ’ ಎಂದಿದ್ದಾರೆ.

ಈ ಬೆಳವಣಿಗೆ ಬೆನ್ನಲ್ಲೇ, ಸಭಾಧ್ಯಕ್ಷರ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು, ಸುವರ್ಣಸೌಧದ ಎದುರು ಧರಣಿ ನಡೆಸಿದರು. 

ಕಾಂಗ್ರೆಸ್‌ ಆಕ್ಷೇಪವೇನು?

ವಿಧಾನಸಭೆಯ ಸಭಾಂಗಣದಲ್ಲಿ ಅನಾವರಣಗೊಳ್ಳುವ ಭಾವಚಿತ್ರಗಳು ಸದನದ ಆಸ್ತಿಯಾಗಿರುತ್ತದೆ. ಆಡಳಿತ ಮತ್ತು ವಿರೋಧಪಕ್ಷಗಳು ಸೇರಿ ಈ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಬೇಕು. ಇದಕ್ಕಾಗಿ ಸದನ ಕಾರ್ಯಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಬೇಕು. ಯಾವ– ಯಾವ ಭಾವಚಿತ್ರಗಳನ್ನು ಅಳವಡಿಸಲಾಗುತ್ತದೆ ಎಂಬುದನ್ನು ಮೊದಲೇ ತೀರ್ಮಾನಿಸಬೇಕು. ಕಾರ್ಯಕ್ರಮಕ್ಕೆ ದಿನಾಂಕವನ್ನು ಹಿರಿಯ ಸದಸ್ಯರು ಒಮ್ಮತದಿಂದ ನಿರ್ಧರಿಸಬೇಕು. ಆಹ್ವಾನ ಪತ್ರಿಕೆಯನ್ನು ಅಧಿಕೃತವಾಗಿ ವಿಧಾನಸಭೆ ಸಚಿವಾಲಯದಿಂದಲೇ ಹೊರಡಿಸಬೇಕು. ಸಭಾಧ್ಯಕ್ಷರು ಈ ಯಾವುದೇ ಪ್ರಕ್ರಿಯೆನ್ನು ಕೈಗೊಂಡಿಲ್ಲ. ಆದ್ದರಿಂದ ಕಲಾಪ ಸಲಹಾ ಸಮಿತಿ ಸಭೆಯನ್ನು ಬಹಿಷ್ಕರಿಸುತ್ತೇವೆ ಎಂದು ವಿಧಾನಸಭೆಯ ಉಪನಾಯಕ ಯು.ಟಿ. ಖಾದರ್ ಹೇಳಿದರು.

ಭಾವಚಿತ್ರ ಹಾಕುವ ಚಿತ್ರ ಗೊತ್ತಿರಲಿಲ್ಲ: ಬೊಮ್ಮಾಯಿ

‘ಸುವರ್ಣ ವಿಧಾನಸೌಧದ ವಿಧಾನಸಭೆ ಸಭಾಂಗಣದಲ್ಲಿ ವೀರ ಸಾವರ್ಕರ್‌ ಸೇರಿ ಏಳು ಮಹನೀಯರ ಭಾವಚಿತ್ರ ಹಾಕುವ ವಿಚಾರ ಸ್ಪೀಕರ್‌ಗೆ ಬಿಟ್ಟಿದ್ದು, ಅದು ಅವರ ನಿರ್ಧಾರ. ನನಗೆ ಗೊತ್ತಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳಲು ಸೋಮವಾರ ನಗರಕ್ಕೆ ಬಂದ ಅವರು, ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

‘ಸಾವರ್ಕರ್‌ ಭಾವಚಿತ್ರ ಹಾಕಿದ ಬಗ್ಗೆ ಕಾಂಗ್ರೆಸ್‌ ಅ‍ಪಸ್ವರ ಹಾಗೂ ಇನ್ನೂ ಹಲವು ಮಹಾತ್ಮರ ಭಾವಚಿತ್ರ ಅಳವಡಿಸುವಂತೆ ಪತ್ರ ಬರೆದ ವಿಚಾರಗಳೂ ನನಗೆ ತಿಳಿದಿಲ್ಲ. ಈ ಬಗ್ಗೆ ಸ್ಪೀಕರ್‌ ಹಾಗೂ ವಿರೋಧ ಪಕ್ಷದವರೊಂದಿಗೆ ನಾನೇ ಮಾತನಾಡುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನೆಹರೂ ಭಾವಚಿತ್ರ ಇಲ್ಲ

ವಿಧಾನಸಭೆ ಸಭಾಂಗಣದೊಳಗೆ ದೇಶದ ಮೊದಲ ಪ್ರಧಾನಮಂತ್ರಿ ಪಂಡಿತ್ ಜವಾಹರ ಲಾಲ್ ನೆಹರೂ ಅವರ ಭಾವಚಿತ್ರವನ್ನು ಹಾಕಿಲ್ಲ.

ಸಭಾಧ್ಯಕ್ಷದ ಪೀಠದ ಹಿಂದೆ ಜಗಜ್ಯೋತಿ ಬಸವೇಶ್ವರ ಭಾವಚಿತ್ರ ಹಾಕಲಾಗಿದೆ. ಎಡ ಮತ್ತು ಬಲದಲ್ಲಿ  ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ, ಸುಭಾಷ್‌ ಚಂದ್ರಬೋಸ್‌, ಸರ್ದಾರ್‌ ವಲ್ಲಭಭಾಯ್ ಪಟೇಲ್‌, ಡಾ.ಬಿ.ಆರ್.ಅಂಬೇಡ್ಕರ್‌ ಮತ್ತು ಸಾವರ್ಕರ್‌ ಭಾವಚಿತ್ರಗಳನ್ನು ಹಾಕಲಾಗಿದೆ. 

ಗಮನ ಬೇರೆಡೆ ಸೆಳೆಯಲು ಭಾವಚಿತ್ರ: ಸಿದ್ದರಾಮಯ್ಯ

‘ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ, ಭ್ರಷ್ಟಾಚಾರ ಮುಂತಾದ ವಿಷಯಗಳ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಯಾಗಬೇಕಿದೆ. ಇದು ಚರ್ಚೆಗೇ ಬರದಂತೆ ಕಲಾಪದ ಗಮನವನ್ನು ಬೇರೆಡೆಗೆ ಸೆಳೆಯಲು ಭಾವಚಿತ್ರ ವಿವಾದವನ್ನು ಮುನ್ನಲೆಗೆ ತರಲಾಗಿದೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

‘ಭಾವಚಿತ್ರ ಅನಾವರಣ ಕಾರ್ಯಕ್ರಮಕ್ಕೆ ನಮಗೆ ಆಹ್ವಾನ ಇರಲಿಲ್ಲ. ಮಾಧ್ಯಮದ ಮೂಲಕ ಗೊತ್ತಾಯಿತು. ಯಾರದೇ ಭಾವಚಿತ್ರ ಇಡಲು ವಿರೋಧವಿಲ್ಲ. ಆದರೆ, ಚರ್ಚಿಸದೆ ಇಟ್ಟಿರುವುದಕ್ಕೆ ಮಾತ್ರ  ನಮ್ಮ ವಿರೋಧ’ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು