ಶನಿವಾರ, ಜನವರಿ 16, 2021
19 °C
ವಿವಾಹಿತೆ ಶೀಲಾಗೆ ಬಿ.ಟೆಕ್‌ನಲ್ಲಿ ಚಿನ್ನದ ಪದಕ

ವ್ಯಾಸಂಗಕ್ಕೆ ಅಡ್ಡಿಯಾಗದ ಮದುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪಿ.ಯು ಓದುವಾಗಲೇ ಮದುವೆಯಾಗಿದ್ದರೂ, ಓದುವ ಹಂಬಲ ಮತ್ತು ಪತಿಯ ಪ್ರೋತ್ಸಾಹದೊಂದಿಗೆ ವ್ಯಾಸಂಗ ಮುಂದುವರಿಸಿದ ಮಂಡ್ಯದ ಶೀಲಾ ಪಿ.ಎಸ್., ಬಿ.ಟೆಕ್‌ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ 54ನೇ ಘಟಿಕೋತ್ಸವದಲ್ಲಿ ಅವರು ಶನಿವಾರ ಚಿನ್ನದ ಪದಕದೊಂದಿಗೆ ಪದವಿ ಪಡೆದರು. 

‘ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲ್ಲೂಕಿನ ಪಿಡಿಜಿ ಕೊಪ್ಪಲು ನಮ್ಮೂರು. ನಾನು ಪ್ರಥಮ ಪಿ.ಯು ತರಗತಿಯಲ್ಲಿದ್ದಾಗಲೇ ತಂದೆಯನ್ನು ಕಳೆದುಕೊಂಡೆ. ದ್ವಿತೀಯ ಪಿ.ಯುದಲ್ಲಿದ್ದಾಗ ಮದುವೆ ಮಾಡಿಸಿದರು. ಆದರೆ, ನನಗೆ ಆಹಾರ ತಂತ್ರಜ್ಞಾನದಲ್ಲಿ ವ್ಯಾಸಂಗ ಮುಂದುವರಿಸುವ ಆಸಕ್ತಿ ಇತ್ತು. ಇದನ್ನು ಗಮನಿಸಿದ ಪತಿ ಪಿ.ಎಸ್. ರೋಹಿತ್ ಓದು ಮುಂದುವರಿಸಲು ಪ್ರೋತ್ಸಾಹ ನೀಡಿದರು. ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯವನ್ನು ಹಾಸನದ ಕೃಷಿ ಕಾಲೇಜಿನಲ್ಲಿ ಮಾತ್ರ ಬೋಧಿಸುವುದರಿಂದ ಅಲ್ಲಿ ಪ್ರವೇಶ ಪಡೆದೆ’ ಎಂದು ಶೀಲಾ ಹೇಳಿದರು.

‘ಪತಿ ಟೈಲರ್‌ ಆಗಿ ಕೆ.ಆರ್. ಪೇಟೆಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಹಾಸನದಲ್ಲಿ ಹಾಸ್ಟೆಲ್‌ನಲ್ಲಿ ಇದ್ದುಕೊಂಡೆ ನಾಲ್ಕು ವರ್ಷ ಓದಿದೆ. ಆಸಕ್ತಿ ಇದ್ದುದರಿಂದ ಓದುವುದು ಕಷ್ಟವಾಗಲಿಲ್ಲ. ಸಹಪಾಠಿಗಳೊಂದಿಗೆ ಹೆಚ್ಚು ಚರ್ಚೆ ನಡೆಸುತ್ತಿದ್ದೆ’ ಎಂದು ಅವರು ಹೇಳಿದರು.

‘ಪದವಿ ಕಲಿಕೆ ವೇಳೆ ದೆಹಲಿಯ ಎಫ್‌ಎಸ್‌ಎಸ್‌ಎಐನಲ್ಲಿ ಮೂರು ತಿಂಗಳು ಇಂಟರ್ನ್‌ಶಿಪ್ ಮಾಡಿದ್ದೇನೆ. ಈಗ ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ ಆಹಾರ ವಿಜ್ಞಾನ–ತಂತ್ರಜ್ಞಾನ ವಿಷಯದಲ್ಲಿ ಎಂಎಸ್ಸಿ ಮಾಡುತ್ತಿದ್ದೇನೆ. ಇದೇ ಕ್ಷೇತ್ರದಲ್ಲಿ ಉನ್ನತ ಹುದ್ದೆಗೇರುವ ಗುರಿ ಹೊಂದಿದ್ದೇನೆ. ಜೆಆರ್‌ಎಫ್‌ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ‍್ಯಾಂಕ್‌ ಗಳಿಸಿದ್ದೇನೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು