ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೃಷಿ ಮೇಳ’ಕ್ಕೆ ಜಿಕೆವಿಕೆ ಆವರಣ ಸಜ್ಜು : ನ.3ರಿಂದ ಆರಂಭ

Last Updated 1 ನವೆಂಬರ್ 2022, 2:52 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ವರ್ಷಗಳ ಬಳಿಕ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಅದ್ದೂರಿಯಾಗಿ ‘ಕೃಷಿಯಲ್ಲಿ ನವೋದ್ಯಮ’ ಘೋಷಣೆ ಅಡಿ ‘ಕೃಷಿ ಮೇಳ’ ಆಯೋಜಿಸುತ್ತಿದ್ದು ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿ.ಕೆ.ವಿ.ಕೆ)ದ ಆವರಣವು ಸಜ್ಜಾಗುತ್ತಿದೆ. ನ.3ರಿಂದ 6ರ ತನಕ ಕೃಷಿ ಮೇಳವು ನಡೆಯಲಿದ್ದು, ಆವರಣದಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ.

ನಾಲ್ಕು ದಿನಗಳ ಮೇಳಕ್ಕೆ ಅಂದಾಜು 15 ಲಕ್ಷ ಜನರು ಸೇರುವ ನಿರೀಕ್ಷೆಯಿದೆ. ಕೃಷಿ ವಿವಿಯ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿರುವ 9 ತಳಿಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ಬೆಳೆಗಳ ಪ್ರಾತ್ಯಕ್ಷಿಕೆ ಯನ್ನು (ತಾಕು) ಕುಲಪತಿ ಡಾ.ಎಸ್‌.ವಿ.ಸುರೇಶ ಸೋಮವಾರ ಪರಿಶೀಲಿಸಿದರು.

ರಾಜ್ಯಪಾಲರಿಂದ ಉದ್ಘಾಟನೆ: ನ.3ರಂದು ಬೆಳಿಗ್ಗೆ 11ಕ್ಕೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್ ಅವರು ಕೃಷಿ ಮೇಳ ಉದ್ಘಾಟಿಸಲಿದ್ದಾರೆ. ಸಚಿವ ಬಿ.ಸಿ.ಪಾಟೀಲ, ಶಾಸಕ ಕೃಷ್ಣ ಬೈರೇಗೌಡ ಪಾಲ್ಗೊಳ್ಳಲಿದ್ದಾರೆ. ಆನ್‌ಲೈನ್‌ನಲ್ಲೂ ಕೃಷಿ ಮೇಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕುಲಪತಿ ಡಾ.ಎಸ್‌.ವಿ.ಸುರೇಶ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಒಟ್ಟು 700 ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಮಣ್ಣುರಹಿತ ಕೃಷಿ, ಕೃಷಿಯಲ್ಲಿ ಡ್ರೋನ್‌ ಬಳಕೆ, ಆಟೋಮೇಟೆಡ್‌ ಕೃಷಿ ಯಂತ್ರೋಪಕರಣ, ಕೃಷಿ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ ಈ ಬಾರಿಯ ಆಕರ್ಷಣೆ’ ಎಂದರು.

ಸಿರಿಧಾನ್ಯ ಹಾಗೂ ಅವುಗಳ ಮಹತ್ವ, ಔಷಧೀಯ ಮತ್ತು ಸುಗಂಧ ದ್ರವ್ಯ ಸಸ್ಯ, ಜಲಾನಯನ ನಿರ್ವಹಣೆ, ಸಾವಯವ ಕೃಷಿ ಪದ್ಧತಿ, ಸಮಗ್ರ ಪೋಷಕಾಂಶಗಳು, ರೋಗ ನಿರ್ವಹಣೆ, ಹನಿ ಹಾಗೂ ತುಂತುರು ನೀರಾವರಿ ಪದ್ಧತಿ, ಮಳೆ ಮತ್ತು ಚಾವಣಿ ನೀರು ಸಂಗ್ರಹ ಯೋಜನೆಯ ಬಗ್ಗೆ ಮೇಳದಲ್ಲಿ ತಜ್ಞರಿಂದ ರೈತರಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

‘ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಕೊಯ್ಲೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕರಣೆ, ಮೌಲ್ಯವರ್ಧನೆ, ಬಿತ್ತನೆ ಬೀಜ ಪರೀಕ್ಷೆ ಹಾಗೂ ಶೇಖರಣೆ, ಮೀನು ಸಾಕಾಣಿಕೆ, ಹವಾಮಾನ ಚತುರ ಕೃಷಿ, ಕೃಷಿಯಲ್ಲಿ ನೂತನ ಮಾಹಿತಿ ತಂತ್ರಜ್ಞಾನ, ಜೈವಿಕ ಹಾಗೂ ನವೀಕರಿಸಲ್ಪಡುವ ಇಂಧನದ ಪ್ರಾತ್ಯಕ್ಷಿಕೆ ಮೇಳದಲ್ಲಿ ಇರಲಿದೆ’ ಎಂದು ಹೇಳಿದರು.

ಜಾನುವಾರು ಪ್ರದರ್ಶನ ಇಲ್ಲ: ರಾಜ್ಯದಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ಈ ಬಾರಿ ಮೇಳದಲ್ಲಿ ಜಾನುವಾರು ಪ್ರದರ್ಶನ ಇರುವುದಿಲ್ಲ ಎಂದು ಕುಲಪತಿ ಹೇಳಿದರು.

ಶಿಕ್ಷಣ ನಿರ್ದೇಶಕ ಡಾ.ಕೆ.ಸಿ.ನಾರಾಯಣಸ್ವಾಮಿ, ವಿಸ್ತರಣಾ ನಿರ್ದೇಶಕ ಡಾ.ಕೆ.ನಾರಾಯಣಗೌಡ, ಸಂಶೋಧನಾ ನಿರ್ದೇಶಕ ಡಾ.ಕೆ.ಬಿ.ಉಮೇಶ, ಪ್ರಾಧ್ಯಾಪಕ ಡಾ.ಕೆ. ಶಿವರಾಮು ಹಾಜರಿದ್ದರು.

ಹಲವು ಬಗೆಯ ನಾಟಿ ಕೋಳಿ

ಮೇಳದಲ್ಲಿ ನಾಟಿ ಕೋಳಿಗಳು ಆಕರ್ಷಣೆ ಇರಲಿದೆ. ಡಿ.ಪಿ ಕ್ರಾಸ್‌, ಕಾವೇರಿ, ಅಸೀಲ್‌ ಕ್ರಾಸ್‌, ಗಿರಿರಾಜ, ಸ್ವರ್ಣಧಾರ, ಫೈಟರ್‌, ನೇಕೆಡ್‌ ನೆಕ್‌, ಗ್ರಾಮಪ್ರಿಯ, ವನರಾಜ, ಟರ್ಕಿ, ಬಾತುಕೋಳಿ, ಗಿನಿ ಫೌಲ್‌ ಮೇಳದಲ್ಲಿ ಆಕರ್ಷಣೆ ಆಗಿರಲಿವೆ.

ಮಣ್ಣುರಹಿತ ಕೃಷಿ ಆಕರ್ಷಣೆ

ಮೇಳಕ್ಕೆ ಬರುವ ರೈತರಿಗೆ ಮಣ್ಣು ರಹಿತ ಕೃಷಿಯ ಮಾಹಿತಿ ನೀಡಲಾಗುವುದು. ಅದರ ಪ್ರಾತ್ಯಕ್ಷಿಕೆ ಸಹ ಮಾಡಲಾಗಿದೆ. ಮಣ್ಣಿನ ಅವಶ್ಯಕತೆ ಇರುವುದಿಲ್ಲ. ಈ ಪದ್ಧತಿಯಲ್ಲಿ ಕಡಿಮೆ ಅವಧಿಯಲ್ಲಿ ಬೆಳೆ ಶೀಘ್ರವಾಗಿ ಬೆಳವಣಿಗೆ ಆಗಲಿದೆ. ನೀರು ಸಹ ಪೋಲಾಗುವುದಿಲ್ಲ. ಶೇ 90ಕ್ಕಿಂತ ಹೆಚ್ಚು ನೀರಿನ ಸದ್ಬಳಕೆ ಮಾಡಬಹುದಾಗಿದೆ ಎಂದು ಡಾ.ನಾಗರಾಜು ಹುಲ್ಲೂರು ತಿಳಿಸಿದರು. ಕಡಿಮೆ ಸ್ಥಳದಲ್ಲಿ ಹೆಚ್ಚು ಉತ್ಪಾದನೆ ಮಾಡಬಹುದಾಗಿದೆ. ವರ್ಷಪೂರ್ತಿ ಬೆಳೆ ಬೆಳೆಯಬಹುದಾಗಿದೆ. ಸಸ್ಯಗಳಿಗೆ ಒದಗಿಸಿದ ಪೊಷಕಾಂಶಗಳು ವ್ಯರ್ಥವಾಗದೆ ಸದ್ಬಳಕೆ ಆಗುತ್ತದೆ. ಕಳೆ ಬರುವುದಿಲ್ಲ. ಕೀಟ ಮತ್ತು ರೋಗಬಾಧೆ ಮುಕ್ತವಾದ ಬೆಳೆ ಪಡೆಯಬಹುದು ಎಂದು ತಿಳಿಸಿದರು.

ಗೋಪಾಲಗೌಡ, ನವಿಕ್ರಮ್‌ಗೆ ರಾಜ್ಯಮಟ್ಟದ ಕೃಷಿ ಪುರಸ್ಕಾರ

ಮೇಳದಲ್ಲಿ ಪ್ರಗತಿ ಪರ ರೈತರಿಗೆ ರಾಜ್ಯ ಹಾಗೂ ಜಿಲ್ಲಾಮಟ್ಟದ ಪ್ರಶಸ್ತಿ ನೀಡಲಾಗುತ್ತಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಕೂಕಿನ ಹಿತ್ತಲಹಳ್ಳಿಯ ಗ್ರಾಮ ಪ್ರಗತಿ ಪರ ಕೃಷಿಕ ಎಚ್‌.ಜಿ.ಗೋಪಾಲಗೌಡ ಅವರು ‘ಎಚ್‌.ಡಿ.ದೇವೇಗೌಡ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ’ಗೆ ಆಯ್ಕೆ ಆಗಿದ್ದಾರೆ.

ಇವರು ಸಮಗ್ರ ಕೃಷಿಗೆ ಒತ್ತು ನೀಡುತ್ತಿದ್ದು, ರಾಗಿ, ಅವರೆ, ಹುರುಳಿ, ಅಲಸಂದೆ, ಜೋಳ, ಕಡಲೆ ಹಾಗೂ ಸಿರಿಧಾನ್ಯಗಳಾದ ಸಾಮೆ, ನವಣೆಯನ್ನು ಬೆಳೆಯುತ್ತಿದ್ಧಾರೆ. ತೋಟಗಾರಿಕೆ ಬೆಳೆಗಳಾದ ಮಾವು, ತೆಂಗು, ಈರುಳ್ಳಿ, ಬೆಳ್ಳುಳ್ಳಿ, ಬೆಂಡೆ, ಟೊಮ್ಯಾಟೊ, ಗೋರಿಕಾಯಿ ಬೆಳೆ ಬೆಳೆಯುತ್ತಿದ್ದಾರೆ. ರೇಷ್ಮೆ ಜೊತೆಗೆ ಅರಣ್ಯ ಕೃಷಿಗೂ ಒತ್ತು ನೀಡುತ್ತಿದ್ದಾರೆ.

ದೊಡ್ಡಬಳ್ಳಾಪುರದ ಲಕ್ಷ್ಮೀದೇವಿಪುರದ ಸಿ. ನವಿಕ್ರಮ್‌ ಅವರಿಗೆ ‘ಡಾ.ಎಂ.ಎಚ್‌.ಮರಿಗೌಡ ರಾಜ್ಯಮಟ್ಟದ ತೋಟಗಾರಿಕೆ ಪ್ರಶಸ್ತಿ’ ಲಭಿಸಿದೆ. ಇವರು ತಮ್ಮ 24 ಎಕರೆಯಲ್ಲಿ ಮಾವು, ದ್ರಾಕ್ಷಿ, ಸೀಬೆ, ಸಪೋಟ, ನೇರಳೆ, ಹಲಸು, ಡ್ರ್ಯಾಗನ್‌ ಹಣ್ಣು, ನಿಂಬೆ, ದಾಳಿಂಬೆ, ಬಾಳೆ, ಪರಂಗಿ, ಮೂಸಂಬಿ, ಸೀತಾಫಲ, ಚಕೋತ, ಅಂಜೂರ, ನೆಲ್ಲಿ, ಕಿತ್ತಳೆ, ಅನಾನಸ್ ಬೆಳೆಯುತ್ತಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಗೂಳೂರುದೊಡ್ಡಿಯ ಸಿ.ಪಿ.ಕೃಷ್ಣ, ಹಾಸನ ಜಿಲ್ಲೆ ಹೊಳೆನರಸಿಪುರ ತಾಲ್ಲೂಕಿನ ಬಂಟರತಳಾಲು ಗ್ರಾಮದ ಎಂ.ಕವಿತಾ ಅವರಿಗೆ ಕ್ರಮವಾಗಿ ‘ಕ್ಯಾನ್‌ ಬ್ಯಾಂಕ್‌ ಅತ್ಯುತ್ತಮ ರೈತ ಹಾಗೂ ರೈತ ಮಹಿಳೆ ಪುರಸ್ಕಾರ’, ಚಿಕ್ಕಬಳ್ಳಾಪುರ ಜಿಲ್ಲೆ ಜಂಗಮಕೋಟೆಯ ಎಂ.ಮುನೇ ಗೌಡರಿಗೆ ಡಾ.ಆರ್‌. ದ್ವಾರಕೀನಾಥ್ ರೈತ ಪುರಸ್ಕಾರ, ಹಾಸನ ಜಿಲ್ಲೆ ಕಂದಲಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ರಾಜೇಗೌಡ ಅವರಿಗೆ ಡಾ.ಆರ್‌.ದ್ವಾರಕೀನಾಥ್‌ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ ಲಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT