ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಸಮ್ಮೇಳನ: ಪ್ರತಿನಿಧಿ ನೋಂದಣಿ ನೀರಸ ಪ್ರತಿಕ್ರಿಯೆ

Last Updated 20 ಡಿಸೆಂಬರ್ 2022, 22:00 IST
ಅಕ್ಷರ ಗಾತ್ರ

ಹಾವೇರಿ: ನಗರದಲ್ಲಿ ಜನವರಿ 6,7 ಮತ್ತು 8ರಂದು ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇದುವರೆಗೆ 4 ಸಾವಿರ ‘ಸಮ್ಮೇಳನ ಪ್ರತಿನಿಧಿ’ಗಳು ಮಾತ್ರ ನೋಂದಣಿ ಮಾಡಿಕೊಂಡಿದ್ದು, ಆನ್‌ಲೈನ್‌ ನೋಂದಣಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕನ್ನಡ ಸಾಹಿತ್ಯ ಪರಿಷತ್‌ ಪ್ರಥಮ ಬಾರಿಗೆಸಮ್ಮೇಳನಕ್ಕಾಗಿಯೇ ಪ್ರತ್ಯೇಕ ಆ್ಯಪ್‌ ರಚಿಸಿ, ಡಿ.1ರಿಂದ ಡಿ.18ರವ
ರೆಗೆ ಆನ್‌ಲೈನ್‌ ಮೂಲಕ ನೋಂದಣಿಗೆ ಅವಕಾಶ ಕಲ್ಪಿಸಿತ್ತು.20 ಸಾವಿರ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಿ, ₹500 ಪ್ರತಿನಿಧಿ ಶುಲ್ಕವನ್ನು ನಿಗದಿಪಡಿಸಿತ್ತು. ನಿರೀಕ್ಷಿತ ಮಟ್ಟದಲ್ಲಿ ನೋಂದಣಿಯಾಗದ ಕಾರಣ, ಡಿ.25ರವರೆಗೆ ನೋಂದಣಿ ದಿನಾಂಕವನ್ನು
ವಿಸ್ತರಿಸಲಾಗಿದೆ.

ನೋಂದಣಿಗೆ 5 ದಿನಗಳು ಮಾತ್ರ ಉಳಿದಿದ್ದರೂ, ಶೇ 20ರಷ್ಟು ಪ್ರತಿನಿಧಿಗಳು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನೂ 16 ಸಾವಿರ ಪ್ರತಿನಿಧಿಗಳು ನೋಂದಣಿಯಾಗುವುದು ಕಷ್ಟ ಎಂದು ಅರಿತ ಪರಿಷತ್‌, ಕಳೆದ ಮೂರು ದಿನಗಳಿಂದ ಆಫ್‌ಲೈನ್‌ ನೋಂದಣಿಗೂ ಅವಕಾಶ ಕಲ್ಪಿಸಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕಚೇರಿಯಲ್ಲಿ ₹500 ಶುಲ್ಕ ಕಟ್ಟಿ, ನೋಂದಾಯಿಸಿಕೊಳ್ಳಬಹುದು.

ಆರಂಭದಿಂದಲೂ ಆಕ್ಷೇಪ: ಸಮ್ಮೇಳನಕ್ಕೆ ಪ್ರತಿನಿಧಿಯಾಗಿ ಬರುವವರು ಕಡ್ಡಾಯವಾಗಿ ಕನ್ನಡ ಸಾಹಿತ್ಯ ಪರಿಷತ್‌ ಸದಸ್ಯರಾಗಿರಬೇಕು. ಆ್ಯಪ್‌ ಮೂಲಕವೇ ಮೊದಲು ಸದಸ್ಯತ್ವ ಪಡೆದು, ನಂತರ ಪ್ರತಿನಿಧಿಯಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದುಕಸಾಪ ಹೊಸದಾಗಿ ನಿಯಮ ರೂಪಿಸಿತ್ತು. ಸಾಹಿತ್ಯ ಸಮ್ಮೇಳನದ ಆ್ಯಪ್‌ ಬಳಕೆ ಮತ್ತು ಕಸಾಪ ಸದಸ್ಯತ್ವ ಕಡ್ಡಾಯ ಕುರಿತು ಆಕ್ಷೇಪಗಳು ವ್ಯಕ್ತವಾಗಿದ್ದವು.

ಪ್ರತಿ ಸಮ್ಮೇಳನದಂತೆ ಈ ಸಮ್ಮೇಳನಕ್ಕೆ ಏಕೆ ಆಫ್‌ಲೈನ್‌ ನೋಂದಣಿಗೆ ಅವಕಾಶ ನೀಡಿಲ್ಲ. ಎಲ್ಲರಿಗೂ ಆ್ಯಪ್‌ ಬಳಸಿ ನೋಂದಣಿ ಮಾಡಿಕೊಳ್ಳಲು ಬರುವುದಿಲ್ಲ ಎಂದು ಹಲವಾರು ಕಲಾವಿದರು, ಸಾಹಿತ್ಯಾಸಕ್ತರು ಧ್ವನಿಎತ್ತಿದ್ದರು. ಇದಕ್ಕೆ ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರು, ‘ಪ್ರತಿನಿಧಿಯಾಗಿ ಬರುವವರು ಪರಿಷತ್ತಿನ ಸದಸ್ಯತ್ವ ಪಡೆಯಬೇಕು ಎಂದುನಿರೀಕ್ಷಿಸುವುದರಲ್ಲಿ ತಪ್ಪೇನಿದೆ’ ಎಂದು
ಸಮರ್ಥಿಸಿಕೊಂಡಿದ್ದರು.

ನಿಯಮ ಸಡಿಲಿಕೆ: ಪ್ರತಿನಿಧಿಗಳ ನೋಂದಣಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದನ್ನು ಮನಗಂಡ ಕಸಾಪ, ಆಫ್‌ಲೈನ್‌ ನೋಂದಣಿಯಲ್ಲಿ ಕಸಾಪ ಸದಸ್ಯತ್ವ ಕಡ್ಡಾಯ ಎಂಬ ನಿಯಮವನ್ನು ಸಡಿಲಿಸಿದೆ. ಆನ್‌ಲೈನ್‌ ನೋಂದಣಿಯಲ್ಲೂ ನಿಯಮ ಸಡಿಲಿಸಬೇಕು ಎಂಬುದು ಸಾಹಿತ್ಯಾಸಕ್ತರ ಒತ್ತಾಯವಾಗಿದೆ.

‘ಪುಸ್ತಕ ಮಾರಾಟ ಮತ್ತು ವಾಣಿಜ್ಯ ಮಳಿಗೆಗೆ ಸಂಬಂಧಿಸಿದಂತೆ ಈಗಾಗಲೇ ಆ್ಯಪ್‌ ಮೂಲಕ 500 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಹೆಚ್ಚಿನ ಬೇಡಿಕೆ ಕಂಡು ಬಂದ ಕಾರಣ ಇನ್ನೂ 100 ಹೆಚ್ಚುವರಿ ಸ್ಟಾಲ್‌ಗಳಿಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ಹೇಳಿದರು.

ಸಲಹೆಯನ್ನು ಗೌರವಿಸುತ್ತೇವೆ’

‘ತಂತ್ರಜ್ಞಾನದ ನೆರವಿನಿಂದ ಮನೆಯಲ್ಲೇ ಕುಳಿತು ಪ್ರತಿನಿಧಿಗಳು ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳಲಿ ಎಂಬ ಉದ್ದೇಶದಿಂದ ಪ್ರಥಮ ಬಾರಿಗೆ ಆ್ಯಪ್‌ ರಚಿಸಿದ್ದೆವು. ಇದಕ್ಕೆ ಕೆಲವರಷ್ಟೇ ಆಕ್ಷೇಪ ವ್ಯಕ್ತಪಡಿಸಿದರು. ನಾವು ಎಲ್ಲರ ಸಲಹೆ, ಸೂಚನೆಗಳನ್ನು ಗೌರವಿಸುತ್ತೇವೆ. ನಮಗೆ ಯಾವುದೇ ಪ್ರತಿಷ್ಠೆ ಇಲ್ಲ. ಹೀಗಾಗಿ ಆಫ್‌ಲೈನ್‌ ನೋಂದಣಿಗೂ ಅವಕಾಶ ಮಾಡಿಕೊಟ್ಟಿದ್ದೇವೆ. ಜತೆಗೆ ಕಸಾಪ ಸದಸ್ಯತ್ವ ಕಡ್ಡಾಯ ಎಂಬ ನಿಯಮವನ್ನು ಸಡಿಲಿಕೆ ಮಾಡಿದ್ದೇವೆ’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ‘ಪ್ರಜಾವಾಣಿ’ಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT