ಮಂಗಳವಾರ, ಮೇ 24, 2022
24 °C
ಬಿರುಸಿನ ಪ್ರಚಾರ ನಡೆಸುತ್ತಿರುವ ಮೂವರು ಅಭ್ಯರ್ಥಿಗಳು

ರಂಗೇರಿದ ಬ್ರಾಹ್ಮಣ ಮಹಾಸಭಾ ಚುನಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ ರಂಗೇರಿದೆ. ಹಲವು ದಶಕಗಳಿಂದ ಚಾಲ್ತಿಯಲ್ಲಿರುವ ಅಧ್ಯಕ್ಷೀಯ ಮಾದರಿ ಚುನಾವಣೆಗೆ ಕೊನೆ ಹಾಡಿ ಸಮುದಾಯದ ಎಲ್ಲರನ್ನು ಒಳಗೊಂಡಂತೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಮಹಾಸಭಾವನ್ನು ಮುನ್ನಡೆಸುವುದೇ ಈ ಬಾರಿಯ ಚುನಾವಣೆಯ ಪ್ರಮುಖ ವಿಷಯವಾಗಿದೆ. 

ಈವರೆಗೆ ಅಧ್ಯಕ್ಷ ಹುದ್ದೆಗೆ ಮಾತ್ರ ಚುನಾವಣೆ ನಡೆಯುತ್ತಿತ್ತು. ಗೆದ್ದವರು ತಮ್ಮ ಆಪ್ತ ಬಳಗವನ್ನೇ ಪದಾಧಿಕಾರಿಗಳನ್ನಾಗಿ ನೇಮಕ ಮಾಡುತ್ತಿದ್ದರು. ಆದರೆ, ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗೆ ಮಹಾಸಭಾ ಹೆಚ್ಚಿನ ಕೊಡುಗೆ ನೀಡಿಲ್ಲ ಎಂಬ ದೂರು ಮತದಾರರಿಂದ ಕೇಳಿಬಂದಿದೆ. ಈ ಪರಂಪರೆಯನ್ನು ಕೊನೆಗೊಳಿಸುವುದಾಗಿ ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಶೋಕ್ ಹಾರನಹಳ್ಳಿ , ಎಸ್.ರಘುನಾಥ್‌ ಮತ್ತು ಆರ್‌.ಲಕ್ಷ್ಮೀಕಾಂತ್ ಅವರು ಹೇಳಿಕೊಂಡಿದ್ದಾರೆ.

ರಾಜ್ಯದಲ್ಲಿ ಸುಮಾರು 40 ಲಕ್ಷ ಬ್ರಾಹ್ಮಣರು ಇದ್ದಾರೆ ಎಂದು ಮಹಾಸಭಾ ಹೇಳುತ್ತಿದೆ. ಇವರ ಪೈಕಿ ಮತದಾನದ ಅರ್ಹತೆ ಪಡೆದಿರುವವರು 44 ಸಾವಿರ ಮಂದಿ. ಇದರಲ್ಲಿ 26 ಸಾವಿರ ಮತದಾರರು ಬೆಂಗಳೂರಿನಲ್ಲೇ ಇದ್ದಾರೆ. ಮೈಸೂರು, ಶಿವಮೊಗ್ಗ, ಹಾಸನ ಬಿಟ್ಟು ಉಳಿದ ಜಿಲ್ಲೆಗಳಲ್ಲಿ ಮತದಾರರ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಮಹಾಸಭಾ ತಳಮಟ್ಟವನ್ನು ತಲುಪಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಇದನ್ನು ಬದಲಿಸಬೇಕು ಎಂಬುದು ಮೂರೂ ಅಭ್ಯರ್ಥಿಗಳು ಪ್ರತಿಪಾದಿಸುತ್ತಾರೆ.

ಚುನಾವಣೆ ದಿನಾಂಕ ಕೆಲವೇ ದಿನಗಳಲ್ಲಿ ಪ್ರಕಟವಾಗಲಿದೆ. ಮೂವರು ಅಭ್ಯರ್ಥಿಗಳು ಈಗಾಗಲೇ ಬಿರುಸಿನ ಪ್ರಚಾರ ಆರಂಭಿಸಿದ್ದು, ಆರೋಪ– ಪ್ರತ್ಯಾರೋಪಗಳೂ ಆರಂಭವಾಗಿವೆ. ವಿಶೇಷವಾಗಿ ಶ್ರೀ ಗುರು ರಾಘವೇಂದ್ರ ಮತ್ತು ವಶಿಷ್ಟ ಬ್ಯಾಂಕ್‌ಗಳಲ್ಲಿ ನಡೆದಿರುವ ವಂಚನೆಯನ್ನೇ ಅಸ್ತ್ರವಾಗಿ ಬಳಸಲಾಗುತ್ತಿದೆ.

ಸಮುದಾಯದ ಅಭಿವೃದ್ಧಿಯೇ ಗುರಿ

ಮಹಾಸಭಾದ ಮಧ್ಯಂತರ ಅಧ್ಯಕ್ಷನಾಗಿ ಸಾಂಸ್ಥಿಕ ರಚನೆಯಲ್ಲಿ ಹಲವು ಲೋಪಗಳನ್ನು ಗುರುತಿಸಿದ್ದೇನೆ. ಅವುಗಳನ್ನು ಸರಿಪಡಿಸಿ ಸಮುದಾಯಕ್ಕೆ ಸೇರಿದ ಎಲ್ಲ ವ್ಯಕ್ತಿಗಳೂ ಪಾಲ್ಗೊಳ್ಳುವಂತೆ ಮಾಡುವುದು ನನ್ನ ಸ್ಪರ್ಧೆಯ ಮುಖ್ಯ ಉದ್ದೇಶ. ಮಹಾಸಭಾವು ಸಂಪನ್ಮೂಲ ಇಲ್ಲದೆ ಸೊರಗಿ ಹೋಗಿದೆ. ವಿದ್ಯಾರ್ಥಿ– ವಿದ್ಯಾರ್ಥಿನಿಯರಿಗೆ ಹಾಸ್ಟೆಲ್‌ ವ್ಯವಸ್ಥೆ, ವಿದ್ಯಾರ್ಥಿಗಳ ದತ್ತಾಂಶ ಸಂಗ್ರಹಿಸಿ ಅವರಿಗೆ ವೃತ್ತಿಪರ ಶಿಕ್ಷಣ ಮತ್ತು ವೃತ್ತಿ ಮಾರ್ಗದರ್ಶನ ನೀಡಲು ವ್ಯವಸ್ಥೆ, ವಧು–ವರರ ವೆಬ್‌ಸೈಟ್‌, ದಾಂಪತ್ಯ ಸಮಸ್ಯೆ ಬಗೆಹರಿಸಲು ಕೌನ್ಸೆಲಿಂಗ್ ವ್ಯವಸ್ಥೆ ಮಾಡಲಾಗುವುದು.

- ಅಶೋಕ್‌ ಹಾರನಹಳ್ಳಿ, ಅಭ್ಯರ್ಥಿ

₹100 ಕೋಟಿ ಕಾಪು ನಿಧಿ ಸ್ಥಾಪನೆ

ಬೈಲಾ ಬದಲಾವಣೆಯ ಜತೆಗೆ, ಮಹಾಸಭಾದ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುತ್ತೇನೆ. ಅಧ್ಯಕ್ಷ ಹುದ್ದೆಗೆ ಮಾತ್ರವಲ್ಲ, ಎಲ್ಲ ಪದಾಧಿಕಾರಿಗಳ ಹುದ್ದೆಗಳಿಗೂ ಚುನಾವಣೆ ನಡೆಸುವ ವ್ಯವಸ್ಥೆ ಜಾರಿ ಮಾಡಲಾಗುವುದು. ₹100 ಕೋಟಿಯ ಕಾಪು ನಿಧಿ ಸ್ಥಾಪಿಸಿ, ಬ್ರಾಹ್ಮಣ ಸಮುದಾಯದಲ್ಲಿನ ಅಶಕ್ತರು ಮತ್ತು ಬಡವರ ಏಳಿಗೆಗಾಗಿ ಬಳಸುತ್ತೇನೆ. ಮಹಾಸಭಾ ವತಿಯಿಂದ ಶಾಲಾ ಕಾಲೇಜುಗಳನ್ನು ಆರಂಭಿಸುವ ಉದ್ದೇಶವನ್ನೂ ಇಟ್ಟುಕೊಂಡಿದ್ದೇನೆ, 

- ಎಸ್.ರಘುನಾಥ್, ಅಭ್ಯರ್ಥಿ

ಅಶಕ್ತರ ನೆರವಿಗೆ ಕಾರ್ಯಕ್ರಮ

50 ವರ್ಷಗಳಷ್ಟು ಹಳೆಯ ಬೈಲಾ ಆಮೂಲಾಗ್ರವಾಗಿ ಬದಲಾಯಿಸಿ ಮಹಾಸಭಾಗೆ ಆರ್ಥಿಕ ಶಕ್ತಿ ತುಂಬಬೇಕಾಗಿದೆ. ವಿದ್ಯಾರ್ಥಿಗಳಿಗೆ ನೆರವಾಗಬೇಕು. ತ್ರಿಮತಸ್ಥರ ಮಧ್ಯೆ ಸಾಮರಸ್ಯ ಮೂಡಿಸಲು ಮತ್ತು ಬ್ರಾಹ್ಮಣ ಸಮುದಾಯ ಹೆಚ್ಚು ಸಂಘಟಿತವಾಗಲು ಅಗತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಮುಜರಾಯಿಯೇತರ ದೇವಸ್ಥಾನಗಳಲ್ಲಿರುವ ಆರ್ಥಿಕವಾಗಿ ಸಬಲರಲ್ಲದ ಅರ್ಚಕರ ನೆರವಿಗಾಗಿ ಕಾರ್ಯಕ್ರಮ ರೂಪಿಸಲಾಗುವುದು.

- ಆರ್‌.ಲಕ್ಷ್ಮೀಕಾಂತ್, ಅಭ್ಯರ್ಥಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು