ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ರೂಪಾಂತರ ಹಾದಿಯಲ್ಲಿ ಅಕ್ಕಮಹಾದೇವಿ ವಿವಿ?

ಸಾಮಾನ್ಯ ವಿವಿಯಾಗಿ ಮಾರ್ಪಾಡು; ವಿಜಯಪುರ, ಬಾಗಲಕೋಟೆ ಜಿ್ಲ್ಲೆಗಳಿಗೆ ಕಾರ್ಯವ್ಯಾಪ್ತಿ ಸೀಮಿತ
Last Updated 23 ಜನವರಿ 2022, 19:30 IST
ಅಕ್ಷರ ಗಾತ್ರ

ವಿಜಯಪುರ: ರಾಜ್ಯದ ಪ್ರಥಮ ಮಹಿಳಾ ವಿಶ್ವವಿದ್ಯಾಲಯ ಎಂಬ ಖ್ಯಾತಿಗೆ ಭಾಜನವಾಗಿರುವ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ತನ್ನ ಮೂಲ ಅಸ್ವಿತ್ವ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಸ್ಥಾಪನೆಯಾಗಿ ಎರಡು ದಶಕವಾದರೂ ನಿಶ್ಚಿತ ಗುರಿ ಸಾಧಿಸುವಲ್ಲಿ ವಿಫಲವಾಗಿರುವ ಈ ವಿಶ್ವವಿದ್ಯಾಲಯ ಹೆಸರಿಗಷ್ಟೇ ಮಹಿಳಾ ವಿಶ್ವವಿದ್ಯಾಲಯವಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ವಿಶ್ವವಿದ್ಯಾಲಯವನ್ನು ರದ್ದುಗೊಳಿಸಿ, ಬಾಗಲಕೋಟೆ, ವಿಜಯಪುರ ಅವಳಿ ಜಿಲ್ಲೆಗೆ ಸೀಮಿತವಾಗಿ ಸಾಮಾನ್ಯ ವಿಶ್ವವಿದ್ಯಾಲಯವಾಗಿ ಅಥವಾ ಕ್ಲಸ್ಟರ್‌ ವಿವಿ ಅಥವಾ ಕ್ಯಾಂಪಸ್‌ ಬೇಸ್‌ಡ್‌ ವಿಶ್ವವಿದ್ಯಾಲಯವಾಗಿ ರೂಪಾಂತರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.

ಅಕ್ಕಮಹಾದೇವಿ ವಿಶ್ವವಿದ್ಯಾಲಯವನ್ನು ಈಗಿರುವ ರೂಪದಲ್ಲೇ ಉಳಿಸಿಕೊಳ್ಳಬೇಕೇ ಅಥವಾ ವಿಶ್ವವಿದ್ಯಾಲಯವನ್ನು ರದ್ದುಗೊಳಿಸಿ ಸಾಮಾನ್ಯ ವಿವಿಯಾಗಿ ಪರಿವರ್ತಿಸಬೇಕೇ ಎಂಬಿತ್ಯಾದಿಸಾಧಕ, ಬಾಧಕ ತಿಳಿಯಲು ಉನ್ನತ ಶಿಕ್ಷಣ ಇಲಾಖೆಯು ಈಗಾಗಲೇ ರಾಜ್ಯದ ಶಿಕ್ಷಣ ತಜ್ಞರು, ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಉನ್ನತ ಶಿಕ್ಷಣ ಪರಿಷತ್‌ ಅನ್ನು ರಚಿಸಿದೆ. ಈ ಪರಿಷತ್‌ ನೀಡುವ ವರದಿ ಆಧರಿಸಿ ಮುಂದಿನ ಕ್ರಮಕೈಗೊಳ್ಳಲಿದೆ ಎಂದು ಇಲಾಖೆಯ ಉನ್ನತ ಮೂಲಗಳು ಖಚಿತಪಡಿಸಿವೆ.

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಹೆಸರಿನಲ್ಲಿ ಇರುವ ‘ಮಹಿಳಾ’ ಪದವನ್ನು ಕೈಬಿಟ್ಟು ಕೇವಲ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯ ಎಂದು ಹೆಸರು ಬದಲಾಯಿಸಬೇಕು ಎಂಬ ಸರ್ಕಾರದ ನಿಲುವಿಗೆ ರಾಜ್ಯದ ಪ್ರಗತಿಪರ ಮಹಿಳೆಯರು ಹಾಗೂ ವಿರೋಧ ಪಕ್ಷದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಏಕಮಾತ್ರ ಮಹಿಳಾ ವಿಶ್ವವಿದ್ಯಾಲಯವೆಂಬ ಕೀರ್ತಿಗೆ ಪಾತ್ರವಾಗಿರುವ ಅಕ್ಕಮಹಾದೇವಿ ವಿವಿಯನ್ನು ರದ್ದು ಪಡಿಸುವ ಹುನ್ನಾರ ನಡೆಯುತ್ತಿದೆ ಎಂಬ ಮಾಹಿತಿ ಬಂದಿದೆ.ರಾಜ್ಯ ಸರ್ಕಾರದ ಈ ನಡೆ ಅಕ್ಷಮ್ಯ, ಉಗ್ರ ಪದಗಳಲ್ಲಿ ಖಂಡಿಸುತ್ತೇನೆ ಎಂದು ಶಾಸಕ ಎಂ.ಬಿ.ಪಾಟೀಲ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಒಕ್ಕೂಟ ವಿರೋಧ:

ಮಹಿಳಾ ವಿವಿ ವಿಶ್ರಾಂತ ಕುಲಪತಿ ಸಬಿಹಾ ಭೂಮಿಗೌಡ, ಎಚ್‌.ಜಿ.ರಾಜಲಕ್ಷ್ಮಿ, ಅಕೈ ಪದ್ಮಶಾಲಿ, ದು.ಸರಸ್ವತಿ, ವಸುಂಧರ ಭೂಪತಿ ಅವರನ್ನೊಳಗೊಂಡ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ವಿವಿ ರಕ್ಷಣೆಗೆ ಮುಂದಾಗಬೇಕು ಎಂದುಮನವಿ ಸಲ್ಲಿಸಿದ್ದಾರೆ.

ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಡಾ.ನಂಜುಂಡಪ್ಪ ವರದಿ ಆಧರಿಸಿ ಸ್ಥಾಪಿಸಲಾಗಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವನ್ನು ಮುಚ್ಚುವ ಹುನ್ನಾರ ನಡೆಸಿರುವ ಬಿಜೆಪಿ ಸರ್ಕಾರದ ನಡೆ ಖಂಡನೀಯ. ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ರಾಜಕೀಯ ಬೇಡ:

ಅಕ್ಕಮಹಾದೇವಿ ವಿವಿಯ ಸದ್ಯದ ಸ್ಥಿತಿ ಹತ್ತರಲ್ಲಿ ಹನ್ನೊಂದು ಎಂಬಂತಾಗಿದೆ. ಈ ವಿವಿ ಸ್ವಾವಲಂಬಿಯಾಗಿ ಬೆಳೆಯಬೇಕಾದರೆ ಆತ್ಮಾವಲೋಕನದ ಅಗತ್ಯವಿದೆ. ಈ ವಿಷಯ ರಾಜಕೀಯಗೊಳಿಸುವುದು ಬೇಡ. ಚರ್ಚೆಗಳು ನಡೆಯಲಿ. ಬಳಿಕ ಸರ್ಕಾರ ಒಮ್ಮತದಿಂದ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ವಿಧಾನ ಪರಿಷತ್‌ ಬಿಜೆಪಿ ಸದಸ್ಯರೊಬ್ಬರು ಸಲಹೆ ನೀಡಿದರು.

****

ಅಕ್ಕಮಹಾದೇವಿ ವಿವಿ ರಾಜ್ಯ ಮಾತ್ರವಲ್ಲದೇ ರಾಷ್ಟ್ರದಲ್ಲೇ ತನ್ನ ಛಾಪು ಮೂಡಿಸುತ್ತಿದೆ. ಇನ್ನೂ ಹೆಚ್ಚಿನ ಸೌಲಭ್ಯ, ಅನುದಾನ ನೀಡಿ ಅದರ ಗೌರವ ಹೆಚ್ಚಿಸಬೇಕು. ಅದರ ಬದಲು ವಿವಿಯನ್ನೇ ರದ್ದು ಮಾಡುವುದು ಬಾಲಿಷ ನಿರ್ಧಾರವಾಗಲಿದೆ

ಎಂ.ಬಿ.ಪಾಟೀಲ,ಶಾಸಕ, ವಿಜಯಪುರ

****

ಅಕ್ಕಮಹಾದೇವಿ ಮಹಿಳಾ ವಿವಿ ಮುಚ್ಚುವ, ಹೆಸರು ಬದಲಿಸುವ ಕುರಿತು ರಾಜ್ಯ ಸರ್ಕಾರ ಅಥವಾ ಉನ್ನತ ಶಿಕ್ಷಣ ಇಲಾಖೆಯಿಂದ ಇದುವರೆಗೆ ಯಾವುದೇ ಮಾಹಿತಿ ಬಂದಿಲ್ಲ.ಈ ಬಗ್ಗೆ ಚರ್ಚೆಯೂ ನಡೆದಿಲ್ಲ

–ಪ್ರೊ.ಬಿ.ಕೆ.ತುಳಸಿಮಾಲಾ,ಕುಲಪತಿ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT