ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳಂದ: ಇಡೀ ದಿನ ಉದ್ವಿಗ್ನ

ಕೇಂದ್ರ ಸಚಿವ ಭಗವಂತ ಖೂಬಾ, ಮಾಜಿ ಶಾಸಕರ ಕಾರು ಜಖಂ
Last Updated 1 ಮಾರ್ಚ್ 2022, 21:45 IST
ಅಕ್ಷರ ಗಾತ್ರ

ಆಳಂದ (ಕಲಬುರಗಿ ಜಿಲ್ಲೆ): ಹಿಂದೂ–ಮುಸ್ಲಿಂ ಸಂಘಟನೆಗಳ ವಿವಾದದ ಕೇಂದ್ರವಾದ ಇಲ್ಲಿನ ಲಾಡ್ಲೆ ಮಶಾಕ ದರ್ಗಾ ಆವರಣದಲ್ಲಿ ಮಂಗಳವಾರ ಇಡೀ ದಿನ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಕೊನೆಗೆ ದರ್ಗಾ ಆವರಣದಲ್ಲಿರುವ ರಾಘವಚೈತನ್ಯ ಲಿಂಗಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡಿದ್ದರಿಂದ ಪರಿಸ್ಥಿತಿ ತಿಳಿಯಾಯಿತು.

ಕೇಂದ್ರ ಸಚಿವ ಭಗವಂತ ಖೂಬಾ, ಕಾಂಗ್ರೆಸ್‌ ಮುಖಂಡ ಬಿ.ಆರ್‌.ಪಾಟೀಲ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಹಲವು ಮುಖಂಡರ ಕಾರುಗಳ ಮೇಲೂ ಕಿಡಿಗೇಡಿಗಳು ಕಲ್ಲು ತೂರಿದ್ದರಿಂದ ಕಾರುಗಳು ಜಖಂಗೊಂಡಿವೆ.

ದರ್ಗಾ ಆವರಣದಲ್ಲಿ ಗುರು ರಾಘವಚೈತನ್ಯ ಅವರ ಸಮಾಧಿ ಮೇಲೆ ಲಿಂಗ ಪ್ರತಿಷ್ಠಾಪನೆ ಮಾಡಲಾಗಿದೆ. ಈಚೆಗೆ ಕಿಡಿಗೇಡಿಯೊಬ್ಬ ಲಿಂಗದ ಬಳಿ ಗಲೀಜು ಮಾಡಿದ್ದರಿಂದ ಶ್ರೀರಾಮ ಸೇನೆ ಹಾಗೂ ಬಿಜೆಪಿ ಮುಖಂಡರು ತೀವ್ರ ಹೋರಾಟ ನಡೆಸಿದ್ದರು. ಮಂಗಳವಾರ ಮಹಾಶಿವರಾತ್ರಿ ಅಂಗವಾಗಿ ಲಿಂಗದ ಶುದ್ಧೀಕರಣ ಮಾಡಲು ಹೊರಟಿದ್ದರು. ಇದೇ ದಿನ ದರ್ಗಾದಲ್ಲಿ ಲಾಡ್ಲೆ ಮಶಾಕ ಅವರ ಸಂದಲ್‌ ಕಾರ್ಯಕ್ರಮವನ್ನೂ ಇಟ್ಟುಕೊಂಡಿದ್ದರಿಂದ, ಹಿಂದೂಧರ್ಮದ ಯಾರಿಗೂ ಪ್ರವೇಶ ನೀಡುವುದಿಲ್ಲ ಎಂದು ದರ್ಗಾ ಸಮಿತಿಯವರು ಬಾಗಿಲು ಮುಚ್ಚಿದ್ದರು.

ಇದರಿಂದ ಆಕ್ರೋಶಗೊಂಡ ಹಿಂದೂ ಸಂಘಟನೆಗಳ ಕಾರ್ಯಕರ್ತರು ಬೃಹತ್‌ ಮೆರವಣಿಗೆ ಮೂಲಕ ದರ್ಗಾಗೆ ನುಗ್ಗಲು ಮುಂದಾದರು. ನಿಷೇಧಾಜ್ಞೆ ನಡುವೆಯೂ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಕೆಲವು ಬಿಜೆಪಿ ಶಾಸಕರ ನೇತೃತ್ವದಲ್ಲಿ ಮೆರವಣಿಗೆ ಆರಂಭಿಸಲಾಯಿತು. ಆದರೆ, ಪೊಲೀಸರು ಅದನ್ನು ಅರ್ಧಕ್ಕೇ ತಡೆದರು. ಕೊನೆಗೆ ದರ್ಗಾದ ಸುತ್ತ ನೂರಡಿ ಅಂತರದಲ್ಲಿ ಹಿಂದೂ–ಮುಸ್ಲಿಂ ಕಾರ್ಯಕರ್ತರು ಪರಸ್ಪರ ಎದುರಾಗಿ ನಿಂತರು. ಇದರಿಂದ ಇಡೀ ದಿನ ತ್ವೇಷಮಯ ವಾತಾವರಣ ನಿರ್ಮಾಣವಾಯಿತು.

ಜಿಲ್ಲಾಧಿಕಾರಿ ಯಶವಂತ್‌ ಗುರುಕರ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್‌, ಎರಡೂ ಕಡೆಯ ಮುಖಂಡರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದರು. ಕೊನೆಗೆ 12 ಜನರು ದರ್ಗಾ ಒಳಗೆ ಹೋಗಿ ಲಿಂಗದ ಶುದ್ಧೀಕರಣ ಮಾಡಲು ಒಪ್ಪಿದರು. ಇದಕ್ಕೆ ದರ್ಗಾ ಸಮಿತಿಯವರೂ ಒಪ್ಪಿಗೆ ನೀಡಿದರು.

ಮನೆಯ ಮೇಲೆ ಕಲ್ಲು ಹಾಗೂ ಬಡಿಗೆಗಳನ್ನು ಸಂಗ್ರಹಿಸಿ ಇಟ್ಟುಕೊಂಡವರನ್ನು ಪತ್ತೆ ಮಾಡಲು ಪೊಲೀಸರು ಡ್ರೋನ್‌ ಬಳಸಬೇಕಾಯಿತು.

‘ಚಲೋ ಆಳಂದ’ಗೆ ಕರೆ ಕೊಟ್ಟಿದ್ದ ಆಂದೋಲಾ ಮಠದ ಸಿದ್ಧಲಿಂಗ ಸ್ವಾಮೀಜಿ ಹಾಗೂ ಶ್ರೀರಾಮ ಸೇನೆಯ ಹಲವು ಕಾರ್ಯಕರ್ತರನ್ನು ಪೊಲೀಸರು ಕಲಬುರಗಿ ಹೊರವಲಯದಲ್ಲಿ ವಶಕ್ಕೆ ಪಡೆದರು.

ನಿಷೇಧಾಜ್ಞೆ ಇದ್ದರೂ ಎರಡೂ ಧರ್ಮಗಳ ಕಡೆಯವರು ಅಪಾರ ಸಂಖ್ಯೆಯಲ್ಲಿ ಸೇರಿ, ನಿಷೇಧಾಜ್ಞೆ ಉಲ್ಲಂಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT