ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ ಕರ್ನಾಟಕದ ಖರ್ಗೆ ಸಾಬ್‌ಗೆ ಒಲಿದ ಕಾಂಗ್ರೆಸ್ ಅಧ್ಯಕ್ಷ ಸ್ಥಾನ– ಸಾಗಿದ ಹಾದಿ

ಪಕ್ಷದಲ್ಲಿ ಉನ್ನತ ಸ್ಥಾನ ಏರಿದ 371 (ಜೆ) ಕಲಂ ರೂವಾರಿ; ಮಿತಭಾಷಿ, ಅಭಿವೃದ್ಧಿಯ ಕನಸುಗಾರ
Last Updated 19 ಅಕ್ಟೋಬರ್ 2022, 10:44 IST
ಅಕ್ಷರ ಗಾತ್ರ

ಕಲಬುರಗಿ: ಉರ್ದು ಮಿಶ್ರಿತ ಕನ್ನಡದಲ್ಲಿ ಮಾತನಾಡುವ ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್ ಹಾಗೂ ಯಾದಗಿರಿ ಸೀಮೆಯಲ್ಲಿ ಅಪಾರ ಬೆಂಬಲಿಗರನ್ನು ಹೊಂದಿರುವ, ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಂದ ‘ಖರ್ಗೆ ಸಾಬ್ (ಸಾಹೇಬ)’ ಎಂದೇ ಕರೆಸಿಕೊಳ್ಳುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷ ಕಾಂಗ್ರೆಸ್‌ನ ಅಧ್ಯಕ್ಷ ಹುದ್ದೆ ಹುಡುಕಿಕೊಂಡು ಬಂದಿದೆ.

ಸದಾ ಗಂಭೀರ ಮುಖಮುದ್ರೆಯ ಖರ್ಗೆ ಅವರು ಒಮ್ಮೊಮ್ಮೆ ಲಹರಿಯಲ್ಲಿದ್ದಾಗ ಹೇಳುವ ರಸಪ್ರಸಂಗಗಳನ್ನು ಕೇಳಿ ಪ‍ಕ್ಷದ ಮುಖಂಡರು, ಕಾರ್ಯಕರ್ತರು, ಪತ್ರಕರ್ತರು ಬಿದ್ದು ಬಿದ್ದು ನಕ್ಕಿದ್ದುಂಟು. ಅದರಲ್ಲೂ ಅವರ ಉರ್ದು ಭಾಷೆಯಲ್ಲಿ ಆಡುವ ಮಾತುಗಳನ್ನು ಕೇಳುವುದೇ ಚಂದ.

ಬುದ್ಧ, ಬಸವ, ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವಗಳಲ್ಲಿ ನಂಬಿಕೆಯಿಟ್ಟಿರುವ ಖರ್ಗೆ ಅವರು ಕಲಬುರಗಿಯಲ್ಲಿ ಬುದ್ಧ ವಿಹಾರವನ್ನು ಆರಂಭಿಸುವ ಮೂಲಕ ಬುದ್ಧನ ಚಿಂತನೆಗಳನ್ನು ಹರಡುವ ಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವುದೂ ಹೌದು. ಪ್ರತಿ ಬುದ್ಧ ಪೂರ್ಣಿಮೆಯಂದು ದೇಶದ ಯಾವುದೇ ಭಾಗದಲ್ಲಿದ್ದರೂ ಕಲಬುರಗಿಗೆ ಧಾವಿಸುವ ಅವರು ಅಂದು ವಿಹಾರದಲ್ಲಿ ನಡೆಯುವ ಪ್ರಾರ್ಥನೆಯಲ್ಲಿ ಪತ್ನಿ ರಾಧಾಬಾಯಿ ಖರ್ಗೆ ಅವರೊಂದಿಗೆ ತಪ್ಪದೇ ಭಾಗವಹಿಸುವ ಪರಿಪಾಠ ಇಟ್ಟುಕೊಂಡವರು.

ಅಪ್ಪಟ ಕಾಂಗ್ರೆಸ್ಸಿಗರಾದ ಖರ್ಗೆ ಅವರು ಜವಹರಲಾಲ್ ನೆಹರೂ, ಇಂದಿರಾಗಾಂಧಿ, ರಾಜೀವ್‌ ಗಾಂಧಿ ಅವರ ಅಭಿವೃದ್ಧಿಯ ದೃಷ್ಟಿಕೋನದಲ್ಲಿ ಹಲವು ಜನಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿದವರು. 2012ರಲ್ಲಿ ಅಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಜನರಿಗೆ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ 371 (ಜೆ) ಕಲಂ ಸಂವಿಧಾನ ತಿದ್ದುಪಡಿ ಮಾಡಿಸಲು ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ. ಅಂದು ಅವರು ಪಟ್ಟ ಶ್ರಮದ ಫಲವಾಗಿ ಇಂದು ಕಲ್ಯಾಣ ನಾಡಿನ ಸಹಸ್ರಾರು ಮಕ್ಕಳಿಗೆ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಹಲವು ಉನ್ನತ ಶಿಕ್ಷಣದಲ್ಲಿ ಸೀಟುಗಳು ಸಿಗುತ್ತಿವೆ. ಉದ್ಯೋಗಗಳಲ್ಲಿ ಮೀಸಲಾತಿ ಸಿಕ್ಕಿದ್ದರಿಂದ ಕ್ರಮೇಣ ಲಕ್ಷಾಂತರ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆಯಾದ ಪರಿಣಾಮ ಪ್ರತಿ ವರ್ಷ ₹ 3 ಸಾವಿರ ಕೋಟಿ ಅನುದಾನ ಬರುತ್ತಿದೆ.

371 (ಜೆ) ಸಂವಿಧಾನ ತಿದ್ದುಪಡಿ ಮಾಡುವ ಪ್ರಸ್ತಾವವನ್ನು ವಾಜಪೇಯಿ ಸಂಪುಟದಲ್ಲಿ ಗೃಹಸಚಿವರಾಗಿದ್ದ ಎಲ್‌.ಕೆ. ಅಡ್ವಾಣಿ ಅವರು ತಿರಸ್ಕರಿಸಿದರು. ಆದರೂ, ಅವಿಭಜಿತ ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲಿ ಹೋರಾಟ ಕಾವು ಪಡೆದುಕೊಂಡಿತು. ಅದೇ ಸಂದರ್ಭದಲ್ಲಿ ರಾಜ್ಯ ರಾಜಕಾರಣದಿಂದ ರಾಷ್ಟ್ರರಾಜಕಾರಣಕ್ಕೆ ತೆರಳಿದ ಖರ್ಗೆ ಅವರು ಯುಪಿಎ ಸರ್ಕಾರದ ಎರಡನೇ ಅವಧಿಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮನವೊಲಿಸಿ ಸದನದಲ್ಲಿ ಮಂಡನೆ ಮಾಡಲು ಒಪ್ಪಿಗೆ ಪಡೆದುಕೊಂಡರು.

ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ತಮ್ಮ ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲದೇ ಇರುವುದರಿಂದ ಪ್ರಸ್ತಾವ ಬಿದ್ದು ಹೋದರೆ ಹೇಗೆ ಎಂದು ಪ್ರಶ್ನಿಸುತ್ತಾರೆ. ಇದನ್ನು ಸವಾಲಾಗಿ ಸ್ವೀಕರಿಸಿದ ಖರ್ಗೆ ಅವರು ಎಲ್ಲ ಪಕ್ಷಗಳ ಅಧ್ಯಕ್ಷರನ್ನು ಭೇಟಿ ಮಾಡಿ ಸಂವಿಧಾನ ತಿದ್ದುಪಡಿ ಮಸೂದೆಗೆ ಒಪ್ಪಿಗೆ ನೀಡುವಂತೆ ಮನವಿ ಮಾಡುತ್ತಾರೆ. ಕಾಂಗ್ರೆಸ್‌ನ ಮಿತ್ರ ಪಕ್ಷಗಳು ಹಾಗೂ ವಿರೋಧ ಪಕ್ಷಗಳ ಎಲ್ಲ ಸಂಸದರನ್ನು ಖುದ್ದಾಗಿ ಭೇಟಿ ಮಾಡಿ ಮನವೊಲಿಸುತ್ತಾರೆ. ಹೀಗಾಗಿ, ಎಲ್ಲ ಪಕ್ಷಗಳೂ 371 (ಜೆ) ಬೆಂಬಲ ಸೂಚಿಸಿದ್ದರಿಂದ ಕಾಯ್ದೆ ತಿದ್ದುಪಡಿಯಾಗುತ್ತದೆ. ಅಂದಿನಿಂದ ಕಲ್ಯಾಣ ಕರ್ನಾಟಕದಲ್ಲಿ ಅಭಿವೃದ್ಧಿ ಶಕೆ ಆರಂಭವಾಗುತ್ತದೆ.

ಪ್ರಧಾನಿ ಇಂದಿರಾಗಾಂಧಿ ಹಾಗೂ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಡಿ. ದೇವರಾಜ ಅರಸು ಅವರೊಂದಿಗೆ ಮಲ್ಲಿಕಾರ್ಜುನ ಖರ್ಗೆ
ಪ್ರಧಾನಿ ಇಂದಿರಾಗಾಂಧಿ ಹಾಗೂ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಡಿ. ದೇವರಾಜ ಅರಸು ಅವರೊಂದಿಗೆ ಮಲ್ಲಿಕಾರ್ಜುನ ಖರ್ಗೆ

ಖರ್ಗೆ ತಂದೆ ಎಂಎಸ್‌ಕೆ ಮಿಲ್ ಕಾರ್ಮಿಕ

ಮೂಲತಃ ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕಿನ ವರವಟ್ಟಿ ಗ್ರಾಮದವರಾದ ಖರ್ಗೆ ಅವರ ತಂದೆ ಮಾಪಣ್ಣ ಅವರು ಕಲಬುರಗಿಯ ಅಂದಿನ ಪ್ರಸಿದ್ಧ ಬಟ್ಟೆ ಗಿರಣಿಯಾದ ಎಂಎಸ್‌ಕೆ ಮಿಲ್‌ನಲ್ಲಿ ಕಾರ್ಮಿಕರಾಗಿದ್ದರು. ಹಾಗಾಗಿ, ಖರ್ಗೆ ಅವರೂ ತಮ್ಮ ಶಾಲಾ, ಕಾಲೇಜು ಶಿಕ್ಷಣವನ್ನು ಕಲಬುರಗಿಯಲ್ಲಿ ಪೂರೈಸಿದರು. ಕಾರ್ಮಿಕ ನಾಯಕರಾಗಿ, ವಿದ್ಯಾರ್ಥಿ ನಾಯಕರಾಗಿ ಪ್ರವರ್ಧಮಾನಕ್ಕೆ ಬಂದರು.

21 ಜುಲೈ 1942ರಲ್ಲಿ ಜನಿಸಿದ ಖರ್ಗೆ ಅವರು ಬಿ.ಎ, ಎಲ್‌ಎಲ್‌.ಬಿ. ಪದವೀಧರರು. ಡಿ. ದೇವರಾಜ ಅರಸು, ಆರ್. ಗುಂಡೂರಾವ್, ಎಸ್. ಬಂಗಾರಪ್ಪ, ಧರ್ಮಸಿಂಗ್, ಎಸ್‌.ಎಂ. ಕೃಷ್ಣ ಸಂಪುಟದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್, ಕಂದಾಯ, ಸಹಕಾರ, ಬೃಹತ್ ಮತ್ತು ಸಣ್ಣ ಕೈಗಾರಿಕೆ, ಗೃಹ, ಮೂಲಸೌಕರ್ಯ ಅಭಿವೃದ್ಧಿ, ಸಣ್ಣ ನೀರಾವರಿ, ಸಾರಿಗೆ ಮತ್ತು ಜಲಸಂಪನ್ಮೂಲ ಸಚಿವರಾಗಿ ಕೆಲಸ ನಿರ್ವಹಿಸಿದರು.

2009ರಲ್ಲಿ ಗುಲಬರ್ಗಾ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿ ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಮೊದಲ ಅವಧಿಯಲ್ಲಿ ಕಾರ್ಮಿಕ ಸಚಿವರಾಗಿ ಕಾರ್ಯನಿರ್ವಹಿಸಿದರು. ಅದೇ ಸಂದರ್ಭದಲ್ಲಿ ಕಲಬುರಗಿಯಲ್ಲಿ ₹ 1290 ಕೋಟಿ ವೆಚ್ಚದಲ್ಲಿ ಬೃಹತ್ ಇಎಸ್‌ಐ ಆಸ್ಪತ್ರೆಯನ್ನು ನಿರ್ಮಿಸಿದರು. ರಾಜ್ಯದ ಹಲವು ಇಎಸ್‌ಐ ಡಿಸ್ಪೆನ್ಸರಿಗಳನ್ನು ಆಸ್ಪ‍ತ್ರೆಗಳನ್ನಾಗಿ ಮೇಲ್ದರ್ಜೆಗೇರಿಸಿದರು. 2013ರಲ್ಲಿ ಮತ್ತೆ ಎರಡನೇ ಬಾರಿ ಚುನಾಯಿತರಾಗಿ ಯುಪಿಎ–2 ಸರ್ಕಾರದಲ್ಲಿ ರೈಲ್ವೆ ಸಚಿವರಾದರು. ಕರ್ನಾಟಕಕ್ಕೆ ಹಲವು ಎಕ್ಸ್‌ಪ್ರೆಸ್ ರೈಲುಗಳು, ರೈಲು ಮಾರ್ಗ ವಿದ್ಯುದೀಕರಣದಂತಹ ಮಹತ್ವದ ಕಾರ್ಯಗಳನ್ನು ನಿರ್ವಹಿಸಿದರು.

ಕಲಬುರಗಿ ವಿಮಾನ ನಿಲ್ದಾಣಕ್ಕೆ ಹಣ ನೀಡಲು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಮೀನ ಮೇಷ ಎಣಿಸಿದಾಗ ರಾಜ್ಯ ಲೋಕೋಪಯೋಗಿ ಇಲಾಖೆಯಿಂದ ಹಣ ಹೊಂದಿಸಿ ನಿಲ್ದಾಣ ಪೂರ್ಣಗೊಳ್ಳುವಂತೆ ನೋಡಿಕೊಂಡರು.

ಅಪಾರ ಓದು, ವಿದ್ವತ್ತಿನ ಮಿತಭಾಷಿ

ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಬಿಡುವಿಲ್ಲದ ಕೆಲಸಗಳ ಮಧ್ಯೆಯೂ ನಿತ್ಯ ಹಲವು ದಿನಪತ್ರಿಕೆಗಳು, ನಿಯತಕಾಲಿಕೆಗಳನ್ನು ತಿರುವಿ ಹಾಕುತ್ತಾರೆ. ರೈಲು, ವಿಮಾನದಲ್ಲಿ ಸಂಚರಿಸುವಾಗಲೂ ಓದಬೇಕಾದ ಪುಸ್ತಕಗಳನ್ನು ತಮ್ಮ ಜೊತೆಗೆ ಇರಿಸಿಕೊಂಡಿರುತ್ತಾರೆ. ಇಂಗ್ಲಿಷ್ ಸಾಹಿತಿಗಳ ಹೇಳಿಕೆಗಳನ್ನು ಭಾಷಣದ ಮಧ್ಯೆ ಉದ್ಧರಿಸುವ ಖರ್ಗೆ ಅವರು ತಮ್ಮ ಆಪ್ತಮಿತ್ರ ಧರ್ಮಸಿಂಗ್ ಅವರಂತೆ ಉರ್ದು ಭಾಷೆಯನ್ನು ನಿರರ್ಗಳವಾಗಿ ಮಾತನಾಡಬಲ್ಲವರು.

ತಮ್ಮ ರಾಜಕೀಯ ವಿರೋಧಿಗಳ ಬಗ್ಗೆ ಎಂದಿಗೂ ಬಿರುನುಡಿಗಳನ್ನಾಡದ ಖರ್ಗೆ ಅವರು ತಾವು ಗೌರವಿಸುವ ರಾಜಕೀಯ ಮೌಲ್ಯಗಳು ಹಾಗೂ ಸಾರ್ವಜನಿಕ ಜೀವನದಲ್ಲಿನ ಸಭ್ಯತೆಯನ್ನು ಉಳಿಸಿಕೊಂಡು ಬಂದವರು.

ಜನಪ್ರತಿನಿಧಿಯಾಗಿ 50 ವರ್ಷಗಳನ್ನು ಪೂರೈಸಿರುವ ಅವರು 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಡಾ. ಉಮೇಶ ಜಾಧವ ಅವರ ಎದುರು ಪರಾಭವಗೊಳ್ಳುವ ಮೂಲಕ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ಸೋಲು ಅನುಭವಿಸಿದರು. ಆ ಘಟನೆಯಿಂದ ಕೆಲಕಾಲ ಮಾನಸಿಕವಾಗಿ ನೊಂದುಕೊಂಡಿದ್ದ ಅವರು, ‘371 (ಜೆ)ಕಲಂ ಜಾರಿಯಂತಹ ಮಹತ್ವದ ಕಾರ್ಯ ಮಾಡಿದರೂ ಜನರು ತಮ್ಮ ಕೈಹಿಡಿಯಲಿಲ್ಲ ಎಂದು ಬೇಸರಿಸಿಕೊಂಡಿದ್ದರು. ಅದಾದ ಕೆಲ ತಿಂಗಳಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಿತು. ನಂತರ ರಾಜ್ಯಸಭೆ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದರು. ಚುನಾವಣೆಗೆ ಸ್ಪರ್ಧಿಸುವ ಸಂದರ್ಭ ಬಂದಾಗ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಪಕ್ಷದ ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮವನ್ನು ಚಾಚೂತಪ್ಪದೇ ಪಾಲಿಸಿ ಇನ್ನೊಬ್ಬರಿಗೆ ಮಾದರಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT