ನ್ಯಾಯಮೂರ್ತಿಗಳ ವಿರುದ್ಧ ಆರೋಪ ಅರ್ಜಿದಾರನಿಗೆ ₹1 ಲಕ್ಷ ದಂಡ

ಬೆಂಗಳೂರು: ಮೈಸೂರಿನ ಸೋಸಲೆ ಮಠದ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧವೇ ಆರೋಪಗಳನ್ನು ಮಾಡಿದ್ದ ಅರ್ಜಿದಾರ ವಿ. ಗುರುರಾಜ್ ಎಂಬುವವರಿಗೆ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ನೇತೃತ್ವದ ವಿಭಾಗೀಯ ಪೀಠ ₹ 1 ಲಕ್ಷ ದಂಡ ವಿಧಿಸಿದೆ.
ಮಠದ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಗುರುರಾಜ್ ಕೂಡ ಒಬ್ಬ ಅರ್ಜಿದಾರ. ತಮ್ಮ ಅರ್ಜಿಯನ್ನು ಕರ್ನಾಟಕದ ಹೊರಗೆ ವಕೀಲಿ ವೃತ್ತಿ ನಡೆಸಿರುವ ನ್ಯಾಯಮೂರ್ತಿಗಳೇ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದ್ದರು. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯೂ ಆಗಿದ್ದ ಸುಪ್ರೀಂಕೋರ್ಟ್‌ನ ಒಬ್ಬ ನಿವೃತ್ತ ನ್ಯಾಯಮೂರ್ತಿ ಕರ್ನಾಟಕ ಮೂಲದ ನ್ಯಾಯಮೂರ್ತಿಗಳ ಮೇಲೆ ಪ್ರಭಾವ ಬೀರುತ್ತಾರೆ ಎಂಬ ಆರೋಪವನ್ನೂ ಮಾಡಿದ್ದರು.
ನ್ಯಾಯಮೂರ್ತಿಗಳ ವಿರುದ್ಧ ಆರೋಪ ಮಾಡಿದ್ದ ಅರ್ಜಿಯನ್ನು ಹಿಂಪಡೆಯಲು ಅರ್ಜಿದಾರರ ಪರ ವಕೀಲರಿಗೆ ಮಂಗಳವಾರ ಅನುಮತಿ ನೀಡಿದ ವಿಭಾಗೀಯ ಪೀಠ, ₹ 1 ಲಕ್ಷ ದಂಡ ವಿಧಿಸಿತು. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ದಂಡ ಪಾವತಿಸುವಂತೆ ಸೂಚಿಸಿತು. ನಗರದ ಬೀದಿಗಳಲ್ಲಿ ಆಟಿಕೆ ಮತ್ತಿತರ ವಸ್ತುಗಳನ್ನು ಮಾರುತ್ತಿರುವ ಮಕ್ಕಳಿಗೆ ನೆರವು ನೀಡುವುದಕ್ಕೆ ಈ ಮೊತ್ತವನ್ನು ಬಳಸುವಂತೆಯೂ ನಿರ್ದೇಶನ ನೀಡಿತು.
’ಇದು ನ್ಯಾಯಾಲಯವನ್ನೂ ಆರೋಪದ ಸುಳಿಗೆ ಸಿಲುಕಿಸುವ ಪ್ರಯತ್ನ. ಅರ್ಜಿದಾರರ ವಿರುದ್ಧ ಸ್ವಯಂಪ್ರೇರಿತವಾಗಿ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅವಕಾಶವಿದೆ’ ಎಂದು ನ್ಯಾಯಪೀಠ ಎಚ್ಚರಿಕೆ ನೀಡಿತು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.