ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಕಾವತಿ ರೀಡೂ ಬಯಲಿಗೆ ಬಂದರೆ ಸಿದ್ದರಾಮಯ್ಯ ಜೈಲಿಗೆ: ನಳಿನ್‌ ಕುಮಾರ್‌ ಕಟೀಲ್

ನಳಿನ್‌ ಕುಮಾರ್‌ ಕಟೀಲ್ ವಾಗ್ದಾಳಿ * ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಉದ್ಘಾಟನೆ
Last Updated 8 ಮೇ 2022, 13:20 IST
ಅಕ್ಷರ ಗಾತ್ರ

ಬೆಂಗಳೂರು: ‘ಅರ್ಕಾವತಿ ಡಿನೋಟಿಫಿಕೇಷನ್‌ ಮತ್ತು ರೀಡೂ ಕುರಿತ ಕೆಂಪಣ್ಣ ಆಯೋಗದ ವರದಿ ಹೊರಬಂದರೆ ಸಿದ್ದರಾಮಯ್ಯ ಶಾಶ್ವತವಾಗಿ ಜೈಲಿನಲ್ಲಿ ಇರಬೇಕಾಗುತ್ತದೆ. ಅದನ್ನು ಹೊರ ಹಾಕುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ ಹೇಳಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಯುವ ಮೋರ್ಚಾ ಕಾರ್ಯಕಾರಿಣಿ ಸಭೆಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದರಾಮಯ್ಯಅವರಷ್ಟು ಭ್ರಷ್ಟಾಚಾರಿ ಈ ರಾಜ್ಯದಲ್ಲಿ ಬೇರೆ ಯಾರೂ ಇರಲಿಲ್ಲ ಎಂದು ಕಿಡಿಕಾರಿದರು.

ಇವರ ಅವಧಿಯಲ್ಲಿ ಅರ್ಕಾವತಿ ಬಡಾವಣೆ ಡಿನೋಟಿಫಿಕೇಷ್‌ ಮತ್ತು ರೀಡೂ ಅಲ್ಲದೆ, ಹಾಸಿಗೆ ಹಗರಣ, ದಿಂಬಿನ ಹಗರಣ, ಹಾಸ್ಟೆಲ್‌ ಹಗರಣ, ಪಿಡಬ್ಲ್ಯುಡಿ ಹಗರಣ, ಬೋರ್‌ವೆಲ್‌ ಹಗರಣ, ಮೆಡಿಕಲ್‌ ಹಗರಣ ಹೀಗೆ ಹಗರಣಗಳ ಸರಮಾಲೆಯೇ ನಡೆದಿತ್ತು. ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಆಗಿ ಏಳು ತಿಂಗಳ ಬಳಿಕ ಮತ್ತು ನ್ಯಾಯಾಲಯ ಸೂಚಿಸಿದ್ದರಿಂದ ಸಚಿವ ಜಾರ್ಜ್‌ ರಾಜೀನಾಮೆ ಕೊಟ್ಟರು. ಹಗರಣಗಳ ತನಿಖೆಗೆ ಸಿದ್ದರಾಮಯ್ಯ ಸರ್ಕಾರ ಮುಂದಾಗಲಿಲ್ಲ ಎಂದು ನಳಿನ್‌ ದೂರಿದರು.

ಪಿಎಸ್‌ಐ ಪರೀಕ್ಷೆ ಅಕ್ರಮದ ಬಯಲಿಗೆ ಬರುತ್ತಿದ್ದಂತೆ ಸಿಐಡಿ ತನಿಖೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದರು. ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ. ಈ ವಿಚಾರವಾಗಿ ಕಾಂಗ್ರೆಸ್‌ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.

‘ಈ ಹಿಂದೆ ಸಿದ್ದರಾಮಯ್ಯ ಡ್ರಗ್ಸ್‌ ಹಣದಲ್ಲೇ ಸರ್ಕಾರ ನಡೆಸಿದ್ದರು. ನಮ್ಮ ಸರ್ಕಾರ ಬಂದ ಬಳಿಕ ಡ್ರಗ್ಸ್‌ ಮುಕ್ತ ರಾಜ್ಯವನ್ನಾಗಿ ಮಾಡಿ ಸರ್ಕಾರವನ್ನು ಮುನ್ನಡೆಸುತ್ತಿದ್ದೇವೆ’ ಎಂದು ಅವರು ಹೇಳಿದರು.

ಶಾಸಕ ಪ್ರಿಯಾಂಕ್‌ ಖರ್ಗೆ ಕುಟುಂಬ ಸಾವಿರಾರು ಕೋಟಿಯ ಧನಿಕರಾದುದು ಹೇಗೆ? ಅಷ್ಟು ಹಣ ಎಲ್ಲಿಂದ ಬಂದಿತು ಎಂಬುದನ್ನು ಹೇಳಬೇಕು. ಪ್ರಿಯಾಂಕ್‌ ಪದೇ ಪದೇ ಸುಳ್ಳುಗಳನ್ನು ಹೇಳುವುದನ್ನು ಬಿಟ್ಟು ಅದಕ್ಕೆ ದಾಖಲೆಗಳನ್ನು ಕೊಡಬೇಕು. ಪಿಎಸ್‌ಐ ಪರೀಕ್ಷೆ ಹಗರಣದ ತನಿಖೆ ಪೂರ್ಣಗೊಂಡಾಗ ಕಾಂಗ್ರೆಸ್‌ನ ಶೇ 80 ರಷ್ಟು ಜನ ಜೈಲಿನಲ್ಲಿರುತ್ತಾರೆ ಎಂದು ನಳಿನ್‌ ತಿಳಿಸಿದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಅತಿ ಹೆಚ್ಚು ಶಾಸಕರು ಬಿಜೆಪಿ ಬಾಗಿಲು ತಟ್ಟುತ್ತಿದ್ದಾರೆ. ಯಾರನ್ನು ಸೇರಿಸಿಕೊಳ್ಳಬೇಕು ಎಂದು ಪಟ್ಟಿ ಮಾಡಲು ಪುರುಸೊತ್ತಿಲ್ಲದಷ್ಟು ಮುಖಂಡರು ನಮ್ಮ ಪಕ್ಷ ಸೇರಲು ಮುಂದಾಗಿದ್ದಾರೆ’ ಎಂದರು.

ಕಾರ್ಯಕ್ರ‌ಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್‌ ಟೆಂಗಿನಕಾಯಿ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷ ರಾಮ್‌ ಸಾತ್ಪುತೆ ಹಾಗೂ ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಡಾ.ಸಂದೀಪ್‌ ಕುಮಾರ್‌ ಕೆ.ಸಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT