ಮಂಗಳವಾರ, ಜನವರಿ 19, 2021
19 °C
‘ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌’ನಲ್ಲಿ ಯುಜಿಸಿ ಬದಲು ಐಜಿಐಡಿಆರ್‌ ವೇತನ ಶ್ರೇಣಿ

ಪ್ರಾಧ್ಯಾಪಕರ ಸೆಳೆಯಲು ಆಕರ್ಷಕ ವೇತನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಾಧ್ಯಾಪಕರಿಗೆ ₹ 3,05,376, ಸಹ ಪ್ರಾಧ್ಯಾಪಕರಿಗೆ ₹ 1,90,456, ಹೊಸದಾಗಿ ನೇಮಕಗೊಳ್ಳುವ ಸಹಾಯಕ ಪ್ರಾಧ್ಯಾಪಕರುಗಳಿಗೆ ₹ 1,38,640 ಮಾಸಿಕ ವೇತನ!

ಪ್ರತಿಷ್ಠಿತ ‘ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್’ ಸಂಸ್ಥೆಯಲ್ಲಿ ಜಾಗತಿಕ ಗುಣಮಟ್ಟದ ಬೋಧನೆಗೆ ಪೂರಕವಾಗಿ ಅತ್ಯುತ್ತಮ ಬೋಧಕರನ್ನು ಆಕರ್ಷಿಸುವ ಉದ್ದೇಶದಿಂದ ಸಂಸ್ಥೆಯ ಆಡಳಿತ ಮಂಡಳಿ ಮುಂದಿಟ್ಟ ಅಫರ್‌ ಇದು.

ಯುಜಿಸಿ (ವಿಶ್ವವಿದ್ಯಾಲಯ ಧನ ಸಹಾಯ ಆಯೋಗ) ನಿಗದಿಪಡಿಸಿದ ವೇತನ ಶ್ರೇಣಿಯಲ್ಲಿ ಪ್ರಾಧ್ಯಾಪಕರಿಗೆ ₹ 2,97,352, ಸಹ ಪ್ರಾಧ್ಯಾಪಕರಿಗೆ 1,79,304, ಹೊಸದಾಗಿ ನೇಮಕಗೊಳ್ಳುವ ಸಹಾಯಕ ಪ್ರಾಧ್ಯಾಪಕರುಗಳಿಗೆ ₹ 1,09,128 ಮಾಸಿಕ ವೇತನವಿದೆ. ಯುಜಿಸಿ ವೇತನ ಶ್ರೇಣಿಗೆ ಬದಲಾಗಿ ಇಂದಿರಾಗಾಂಧಿ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಗೆ (ಐಜಿಐಡಿಆರ್‌) ವಿಸ್ತರಿಸಲಾದ ವೇತನ ಮತ್ತು ಭತ್ಯೆಗಳನ್ನು ನೀಡಿ, ಅಧ್ಯಾಪಕರನ್ನು ಸೆಳೆಯಲು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಅಂಬೇಡ್ಕರ್‌ ಪ್ರತಿಮೆಯನ್ನು ಸಂಸ್ಥೆಯ ಆಡಳಿತ ವಿಭಾಗದ ಎದುರು ಸ್ಥಾಪಿಸಲು ಉದ್ದೇಶಿಸಲಾಗಿದೆ. ಅಲ್ಲದೆ, ಸಂಸ್ಥೆಯಲ್ಲಿ ಅನಿವಾಸಿ ಭಾರತೀಯರು (ಎನ್‌ಆರ್‌ಐ) ಹಾಗೂ ಭಾರತೀಯ ಮೂಲದ (ಪಿಐಒ) ವಿದ್ಯಾರ್ಥಿಗಳಿಗೆ ಕೆಲವು ಸೀಟುಗಳನ್ನು ಕಾಯ್ದಿರಿಸಲು ಮತ್ತು ಜರ್ಮನ್‌, ಫ್ರೆಂಚ್‌ ಸೇರಿದಂತೆ ಕೆಲವು ವಿದೇಶಿ ಭಾಷೆಗಳನ್ನು ಬೋಧನೆ ಮಾಡಲು ತೀರ್ಮಾನಿಸಲಾಗಿದೆ.

ಸಂಸ್ಥೆಗೆ ಬೋಧಕರ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರ ಆರಂಭಿಸಲು ಮತ್ತು ಯುಜಿಸಿಯಿಂದ ನೆರವು ಪಡೆಯಲು ಕ್ರಮ ತೆಗೆದುಕೊಳ್ಳಬೇಕು. ಅಂಬೇಡ್ಕರ್‌ ಅವರ ಆಲೋಚನೆಗಳನ್ನು, ಅರ್ಥಶಾಸ್ತ್ರ ಮತ್ತು ಸಾಮಾಜಿಕ ಚಿಂತನೆಗಳನ್ನು ಪಠ್ಯದ ಭಾಗವಾಗಿ ಈಗಾಗಲೇ ಮಾಡಲಾಗಿದೆ. ಅಂಬೇಡ್ಕರ್‌ ಅವರ ಇನ್ನು ಹೆಚ್ಚಿನ ವಿಚಾರಗಳನ್ನು ಪಠ್ಯದಲ್ಲಿ ಸೇರಿಸಲು ಕೂಡಾ ನಿರ್ಧರಿಸಲಾಗಿದೆ.

ಸಂಸ್ಥೆಯಲ್ಲಿರುವ ಕೋರ್ಸ್‌ಗಳಲ್ಲಿ ಸೀಟುಗಳನ್ನು ಕಾಯ್ದಿರಿಸಲು ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನೇಮಕ ಕುರಿತು ನೀತಿ ರೂಪಿಸಲು, ಸಂಶೋಧನಾ ಕಾರ್ಯಕ್ರಮಗಳಿಗೆ ಧನಸಹಾಯಕ್ಕಾಗಿ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳು ಹಾಗೂ ನಗರಗಳ ಸ್ಥಳೀಯ ಸಂಸ್ಥೆಗಳ ನೆರವು ಪಡೆಯಲು ಮತ್ತು ಬಹುಮುಖಿ ಕೋರ್ಸುಗಳನ್ನು ಆರಂಭಿಸುವುದು ಮತ್ತು ಎ ಜಾಗತಿಕ ಮಟ್ಟದ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಕೂಡಾ ನಿರ್ಧರಿಸಲಾಗಿದೆ.

ಕ್ಯಾಂಪಸ್‌ ನಿರ್ಮಾಣದ ಮೊದಲ ಮತ್ತು ಎರಡನೇ ಹಂತದ ಕಾಮಗಾರಿಗಳು ಮತ್ತು ಒಳಾಂಗಣಗಳನ್ನು ಪೂರ್ಣಗೊಳಿಸಲು ಅಗತ್ಯವಾದ ಹಣ ಬಿಡುಗಡೆ ಮಾಡಲು ಮತ್ತು ಕ್ಯಾಂಪಸ್ಸಿನಲ್ಲಿ ಲಭ್ಯ ಮೂಲಸೌಕರ್ಯಗಳನ್ನು ಸಂಪೂರ್ಣ ಬಳಸಿಕೊಳ್ಳಲು ಹಾಗೂ ಸಂಸ್ಥೆಯ ಎಲ್ಲ ಪ್ರಾಧಿಕಾರಗಳು, ಸಮಿತಿಗಳು ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನ 2018ರ ಕಾಯ್ದೆಯಂತೆ ಕೆಲಸ ಮಾಡಬೇಕು ಎಂದೂ ಸಭೆಯಲ್ಲಿ ನಿರ್ಣಯಿಸಲಾಗಿದೆ.

**

ಸಂಸ್ಥೆಗೆ ಜಾಗತಿಕ ಸ್ಥಾನಮಾನ ದೊರಕಿಸಿಕೊಡಲು ಉದ್ದೇಶಿಸಲಾಗಿದ್ದು, ನಾಗರಬಾವಿಯಲ್ಲಿ ಹೊಸ ಕ್ಯಾಂಪಸ್‌ನ್ನು ಅಂಬೇಡ್ಕರ್‌ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
-ಡಾ.ಸಿ.ಎನ್‌. ಅಶ್ವತ್ಥನಾರಾಯಣ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು