ಶನಿವಾರ, ಜುಲೈ 24, 2021
28 °C

ಆನ್‌ಲೈನ್‌ ಶಿಕ್ಷಣಕ್ಕೆ ನಿರ್ದಿಷ್ಟ ರೂಪುರೇಷೆ ಅಗತ್ಯ: ಪ್ರೊ.ಕೆ.ಕೆ.ಅಗರವಾಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಲ್ಯಾಪ್‌ಟ್ಯಾಪ್‌ ಎದುರು ಕುಳಿತು ಬೋಧಿಸುವುದು, ಕೈಯಲ್ಲಿ ಮೊಬೈಲ್‌ ಹಿಡಿದು ಮನೆಯಲ್ಲೆಲ್ಲಾ ಅಡ್ಡಾಡುತ್ತಾ ಪಾಠ ಆಲಿಸುವುದು ಆನ್‌ಲೈನ್‌ ಶಿಕ್ಷಣದ ಕ್ರಮವಲ್ಲ. ಈಗ ಈ ಪದ್ಧತಿ ಅನಿವಾರ್ಯ. ಕೋವಿಡ್‌ ನಂತರವೂ ಇದು ಮುಂದುವರಿಯಬೇಕು. ಇದಕ್ಕೆ ನಿರ್ದಿಷ್ಟ ರೂಪುರೇಷೆ ಅಗತ್ಯ’ ಎಂದು ರಾಷ್ಟ್ರೀಯ ಮಾನ್ಯತಾ ಮಂಡಳಿಯ ಮುಖ್ಯಸ್ಥ ಪ್ರೊ.ಕೆ.ಕೆ.ಅಗರವಾಲ್‌ ತಿಳಿಸಿದರು.

ಡಾ.ಅಂಬೇಡ್ಕರ್‌ ತಾಂತ್ರಿಕ ಮಹಾವಿದ್ಯಾಲಯವು ಕೆರಿಯರ್‌ ಲ್ಯಾಬ್ಸ್‌ ಸಹಯೋಗದಲ್ಲಿ ‘ಕೋವಿಡ್‌ ನಂತರದ ಉನ್ನತ ಶಿಕ್ಷಣದಲ್ಲಿನ ಸವಾಲುಗಳು ಹಾಗೂ ಅವಕಾಶಗಳು’ ವಿಷಯದ ಕುರಿತು ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

‘ಕೋವಿಡ್‌ ಸಮಯದಲ್ಲಿ ಮಕ್ಕಳು ಭೌತಿಕ ತರಗತಿಗಳಿಂದ ದೂರ ಉಳಿಯಬೇಕಾಗಿದೆ. ಹೀಗಾಗಿ ಆನ್‌ಲೈನ್‌ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಇದು ಪರ್ಯಾಯ ವ್ಯವಸ್ಥೆಯಷ್ಟೆ. ಆನ್‌ಲೈನ್‌ ಶಿಕ್ಷಣ ಬಹಳ ಒಳ್ಳೆಯದ್ದು, ಇದರಿಂದ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಭಾವಿಸುವುದು ತಪ್ಪು’ ಎಂದರು.

‘ಕೋವಿಡ್‌ಗೂ ಮುನ್ನ ಮಕ್ಕಳು ಮೊಬೈಲ್‌ ಬಳಸುವುದನ್ನು ಎಲ್ಲರೂ ವಿರೋಧಿಸುತ್ತಿದ್ದರು. ಆನ್‌ಲೈನ್‌ ತರಗತಿಗಳು ಶುರುವಾದ ಮೇಲೆ ಅವುಗಳ ಬಳಕೆ ಅನಿವಾರ್ಯವಾಗಿದೆ. ಮಕ್ಕಳಿಂದ ಮೊಬೈಲ್‌ ಅನ್ನು ಅರ್ಧ ಗಂಟೆ ದೂರವಿಟ್ಟರೂ ಅವರು ಖಿನ್ನತೆಗೆ ಒಳಗಾಗಿಬಿಡುತ್ತಾರೆ. ಒಂದು ದಿನ ಮೊಬೈಲ್‌ ಬಳಸಲೇಬಾರದು ಎಂದು ತಾಕೀತು ಮಾಡಿದ್ದೇ ಆದರೆ ಶೇ 25ರಷ್ಟು ಮಕ್ಕಳನ್ನು ಆಸ್ಪತ್ರೆಗಳಿಗೆ ದಾಖಲಿಸಬೇಕಾಗುತ್ತದೆ. ಅಷ್ಟರ ಮಟ್ಟಿಗೆ ಅವರು ಮೊಬೈಲ್‌ ಗೀಳು ಬೆಳೆಸಿಕೊಂಡಿದ್ದಾರೆ. ಎಂಜಿನಿಯರಿಂಗ್‌ ಹಾಗೂ ದೂರ ಶಿಕ್ಷಣವನ್ನು ಆನ್‌ಲೈನ್‌ನಲ್ಲಿ ನೀಡಲು ಸಾಧ್ಯವೇ ಇಲ್ಲ ಎಂದು ಕೆಲ ವರ್ಷಗಳ ಹಿಂದೆ ಶಿಕ್ಷಣ ತಜ್ಞರು ಸುಪ್ರೀಂಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ್ದರು. ಆದರೆ ಈಗ ಇದೊಂದು ಅತ್ಯುತ್ತಮ ವೇದಿಕೆ ಎಂದು ನಾವೆಲ್ಲಾ ಪ್ರತಿಪಾದಿಸುತ್ತಿದ್ದೇವೆ’ ಎಂದು ತಿಳಿಸಿದರು. 

ಡಿಆರ್‌ಡಿಒ ಮಾಜಿ ಮುಖ್ಯಸ್ಥ ಡಿ.ಎನ್‌.ರೆಡ್ಡಿ, ವರ್ಕಿ ಡೇಟಾ ಸರ್ವಿಸಸ್‌ನ ಸಿಇಒ ಖಾಸಿಂ ಕಿರ್ಮಾನಿ, ಆರ್‌ಲೇ ಸಮೂಹದ ನಿರ್ದೇಶಕ ಟಿಂಚೌಲ್ಸ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು