ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಮನದ ಕೊರೊನಾಕ್ಕೆ ಅಂಬೇಡ್ಕರ್ ಮದ್ದು!

Last Updated 18 ಅಕ್ಟೋಬರ್ 2020, 2:52 IST
ಅಕ್ಷರ ಗಾತ್ರ

ಒಂದಿಷ್ಟು ಮಂದಿ ದೋಣಿಯಲ್ಲಿ ಪ್ರಯಾಣ ನಡೆಸಿದ್ದರು. ಒಬ್ಬ ವ್ಯಕ್ತಿ ಒಂದು ನಾಯಿಯನ್ನು ಕರೆ ತಂದಿದ್ದ. ಆ ನಾಯಿ ವಿಪರೀತ ಗಲಾಟೆ ಮಾಡುತ್ತಿತ್ತು. ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುತ್ತಿತ್ತು. ನಿರಂತರವಾಗಿ ಬೊಗಳುತ್ತಿತ್ತು. ಇದರಿಂದ ದೋಣಿಯಲ್ಲಿ ಇರುವ ಪ್ರತಿಯೊಬ್ಬರಿಗೂ ಕಿರಿಕಿರಿಯಾಗುತ್ತಿತ್ತು. ಅದರ ಬಾಯಿ ಮುಚ್ಚಿಸಲು ಎಲ್ಲರೂ ಪ್ರಯತ್ನಿಸುತ್ತಿದ್ದರು. ಆದರೂ ಅದು ಬೊಗಳುವುದನ್ನು ಬಿಡಲಿಲ್ಲ. ದೋಣಿಯಲ್ಲಿ ಅತ್ತಿಂದಿತ್ತ ತಿರುಗುವುದನ್ನೂ ನಿಲ್ಲಿಸಲಿಲ್ಲ.

ಒಬ್ಬರು ಸಂತರೂ ಆ ದೋಣಿಯಲ್ಲಿ ಇದ್ದರು. ಅವರು ಮಾತ್ರ ಸುಮ್ಮನೆ ಕುಳಿತಿದ್ದರು. ನಾಯಿಯ ಕಾಟದಿಂದ ಎಲ್ಲರೂ ಬೇಸರಗೊಂಡಾಗ ಆ ಸಂತ ‘ನಿಮ್ಮದೆಲ್ಲ ಒಪ್ಪಿಗೆ ಇದ್ದರೆ ನಾನು ನಾಯಿಯನ್ನು ಸುಮ್ಮನಿರಿಸುತ್ತೇನೆ’ ಎಂದರು. ಆ ನಾಯಿಯ ಕಾಟದಿಂದ ಬೇಸತ್ತಿದ್ದ ಎಲ್ಲರೂ ‘ಆಯ್ತು, ಸುಮ್ಮನಿರಿಸಿ’ ಎಂದರು. ತಕ್ಷಣವೇ ಆ ಸಂತ ನಾಯಿಯನ್ನು ಹಿಡಿದು ಎತ್ತಿ ನೀರಿಗೆ ಎಸೆದುಬಿಟ್ಟರು. ನಾಯಿ ನೀರಿನಲ್ಲಿ ಈಜತೊಡಗಿತು. ಮುಳುಗತೊಡಗಿತು. ಸ್ವಲ್ಪ ಕಾಲ ಅದು ನೀರಿನಲ್ಲಿ ಒದ್ದಾಡುವುದನ್ನು ನೋಡಿದ ಸಂತರು ಅದನ್ನು ಮತ್ತೆ ಮೇಲೆಕ್ಕೆ ಎತ್ತಿ ದೋಣಿಯಲ್ಲಿ ಬಿಟ್ಟರು. ಆಗ ಅದು ಬಾಲ ಮುದುರಿಕೊಂಡು ಒಂದು ಕಡೆ ಸುಮ್ಮನೆ ಕುಳಿತುಬಿಟ್ಟಿತು. ಎಲ್ಲರಿಗೂ ಆಶ್ಚರ್ಯ.

‘ಇದು ಹೇಗೆ ಸಾಧ್ಯವಾಯಿತು?’ ಎಂದು ಎಲ್ಲರೂ ಸಂತರನ್ನು ಕೇಳಿದರು. ‘ನಾಯಿಗೆ ದೋಣಿಯ ವಾತಾವರಣ ಸರಿ ಕಾಣುತ್ತಿರಲಿಲ್ಲ. ಭಯವೂ ಇತ್ತು. ಅದಕ್ಕೇ ಅದು ಕೂಗುತ್ತಿತ್ತು. ಅತ್ತಿಂದಿತ್ತ ತಿರುಗುತ್ತಾ ತನ್ನ ಅಸಮಾಧಾನವನ್ನು ವ್ಯಕ್ತಪಡಿಸುತ್ತಿತ್ತು. ಆದರೆ ನೀರಿಗೆ ಬಿದ್ದಾಗ ಅದಕ್ಕೆ ಗೊತ್ತಾಯಿತು ತಾನು ದೋಣಿಯಲ್ಲಿ ಎಷ್ಟು ಸುರಕ್ಷಿತವಾಗಿದ್ದೆ ಎನ್ನುವುದು. ಅದಕ್ಕೆ ಅದು ನೀರಿನಿಂದ ದೋಣಿಗೆ ಮತ್ತೆ ಬಂದ ನಂತರ ಸುಮ್ಮನೆ ಕುಳಿತಿದೆ’ ಎಂದು ಸಂತರು ಹೇಳಿದರು.

ಈಗ ನಮ್ಮ ಸ್ಥಿತಿಯೂ ಅದೇ ಆಗಿದೆ. ಕೊರೊನಾ ವೈರಸ್ ಹರಡಿದ ಈ ಕಾಲ ಎಂದರೆ ನಮ್ಮನ್ನೆಲ್ಲಾ ನೀರಿಗೆ ಹಠಾತ್ತನೆ ದೂಡಿ ಬಿಟ್ಟಂತೆ ಆಗಿದೆ. ಈಗಲೂ ನಾವು ಪಾಠ ಕಲಿಯದಿದ್ದರೆ ನಾವು ಕಾಯಂ ಆಗಿ ನೀರಿನಲ್ಲಿ ಮುಳುಗಿ ಹೋಗಬೇಕಾಗುತ್ತದೆ.

ಮೊನ್ನೆಯಷ್ಟೇ ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್ ದೂರವಾಣಿ ಕರೆ ಮಾಡಿದ್ದರು. ಕೋವಿಡ್–19 ರೋಗದಿಂದ ಅವರು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ. ಕಳೆದ 21 ದಿನಗಳಿಂದ ಅವರು ಏಕಾಂತ ವಾಸದಲ್ಲಿ ಇದ್ದಾರೆ. ‘ಛೇ ಎಂತಹ ರೋಗ ಸರ್ ಇದು. ಮನೆಯಲ್ಲಿಯೇ ಇದ್ದೇನೆ. ಆದರೂ ನನ್ನ ಹೆಂಡತಿ ಮುಖ ನೋಡಲು ಆಗಲ್ಲ. ನನ್ನ ಮಕ್ಕಳು ನನ್ನ ಬಳಿ ಬರಲ್ಲ. ಈ ರೋಗದ ಅತ್ಯಂತ ಅಪಾಯಕಾರಿ ಅಂಶ ಕೆಮ್ಮು, ಜ್ವರ, ಮೈಕೈ ನೋವು ಯಾವುದೂ ಅಲ್ಲ ಸರ್. ಏಕಾಂತ ಸೃಷ್ಟಿಸುವ ಅನಾಥ ಭಾವವೇ ಅತ್ಯಂತ ಅಪಾಯಕಾರಿ ಸಾರ್’ ಎಂದರು.

‘ಬೇರೆ ಯಾವುದೇ ರೋಗದಿಂದ ನರಳುತ್ತಿದ್ದರೆ ನಮ್ಮ ಕುಟುಂಬದವರು, ನಮ್ಮ ಬಂಧುಗಳು, ಸ್ನೇಹಿತರು ಬಂದು ಸಂತೈಸುತ್ತಾರೆ. ಆತ್ಮೀಯರೊಬ್ಬರು ರೋಗಿಯೊಬ್ಬನ ಕೈಹಿಡಿದು ಅಥವಾ ಬೆನ್ನು ಸವರಿ ಸಾಂತ್ವನ ಹೇಳಿದರೆ ಅದು ಕೊಡುವ ಧೈರ್ಯ ಬಹಳ ದೊಡ್ಡದು ಸಾರ್. ಆದರೆ ಈ ಕೊರೊನಾ ಅದು ಯಾವುದಕ್ಕೂ ಅವಕಾಶವನ್ನೇ ನೀಡುವುದಿಲ್ಲ. ನಮ್ಮನ್ನು ಸಂಪೂರ್ಣ ಒಬ್ಬಂಟಿ ಮಾಡಿ ಬಿಡುತ್ತದೆ. ಇದೊಂದು ತರಹ ಹೊಸ ಅಸ್ಪೃಶ್ಯತೆಯನ್ನು ಸೃಷ್ಟಿ ಮಾಡಿಬಿಟ್ಟಿದೆ ಸರ್’ ಎಂದರು.

ಹೌದಲ್ವಾ, ಕೊರೊನಾ ಹೊಸ ಅಸ್ಪೃಶ್ಯತೆಯನ್ನು ಸೃಷ್ಟಿಸಿದೆ. ಕೋವಿಡ್–19 ರೋಗಿಯೊಬ್ಬ 14 ದಿನವೋ, ಒಂದು ತಿಂಗಳೋ ಏಕಾಂತದಲ್ಲಿರಬೇಕಾಗುತ್ತದೆ. ಯಾರೂ ಅವರನ್ನು ಮುಟ್ಟುವಂತೆ ಇಲ್ಲ. ಅಕಸ್ಮಾತ್ ಅವರು ನಿಧನ ಹೊಂದಿದರೆ ಶವ ಸಂಸ್ಕಾರಕ್ಕೆ ಯಾರೂ ಬರುವುದೂ ಇಲ್ಲ. ಇಷ್ಟಕ್ಕೇ ನಾವು ಇದೊಂದು ಮಹಾಮಾರಿ ಎಂದು ಬೈದು ಸುಖಪಡುತ್ತಿದ್ದೇವೆ. ಆದರೆ ಶತಮಾನಗಳಿಂದ ಅಸ್ಪೃಶ್ಯತೆಯ ಕೂಪದಲ್ಲಿ ಸಿಲುಕಿ ಒದ್ದಾಡುತ್ತಿರುವ ಜನಾಂಗದ ಬಗ್ಗೆ ತಿಳಿವಳಿಕೆ ಪಡೆಯಲು ಇದೊಂದು ಅವಕಾಶ ಎಂದು ನಮಗೆ ಅನ್ನಿಸುವುದೇ ಇಲ್ಲ.

ಈ ದೇಶದಲ್ಲಿ ಅಸ್ಪೃಶ್ಯತೆಯ ಶಾಪಕ್ಕೆ ಸಿಲುಕಿ ಶತ ಶತಮಾನಗಳಿಂದ ಯಾರಿಂದಲೂ ಮುಟ್ಟಿಸಿಕೊಳ್ಳದೇ ನರಳುತ್ತಿರುವವರ ಬಗ್ಗೆ ಆಲೋಚಿಸಲು ಮತ್ತು ಅವರನ್ನು ಸ್ವಾಗತಿಸಿ ಅಪ್ಪಿಕೊಳ್ಳಲು ಇದು ಸದವಕಾಶ ಎಂದು ನಾವು ಯಾಕೆ ಭಾವಿಸುವುದಿಲ್ಲ. ಕೋವಿಡ್–19 ರೋಗದಿಂದ ಏಕಾಂತ ವಾಸದಲ್ಲಿ ಇರುವಾಗ ನಮಗೆ ಅಸ್ಪೃಶ್ಯ ಜನಾಂಗದವನರು ಅಷ್ಟೊಂದು ದೀರ್ಘ ಕಾಲದಿಂದ ಏಕಾಂತದಲ್ಲಿ ಇರುವ ಬಗ್ಗೆ ಯಾಕೆ ಜ್ಞಾನೋದಯ ಆಗುವುದಿಲ್ಲ. ಅವರ ಕಷ್ಟಗಳೂ, ನೋವುಗಳು, ಹತಾಶೆ, ಅವಮಾನ ಯಾಕೆ ಇನ್ನೂ ಅರ್ಥವಾಗುವುದಿಲ್ಲ. ಕೋವಿಡ್–19 ರೋಗಕ್ಕೆ ತುತ್ತಾಗಿ ಏಕಾಂತ ಅನುಭವಿಸಿ ಬಂದವರಾದರೂ ಸ್ಪರ್ಶದ ಮಹತ್ವವನ್ನು ಅರಿಯಬೇಕಲ್ಲ. ಯಾಕೆ ಅದು ಸಾಧ್ಯವಾಗುತ್ತಿಲ್ಲ.

ಕೊರೊನಾಕ್ಕೆ ಇನ್ನೂ ಲಸಿಕೆ ಬಂದಿಲ್ಲ ನಿಜ. ಆದರೆ ಅಸ್ಪೃಶ್ಯತೆ ಎಂಬ ಮಹಾಮಾರಿಯನ್ನು ಹೋಗಲಾಡಿಸಲು ಅಂಬೇಡ್ಕರ್ ಚಿಂತನೆಗಳ ಲಸಿಕೆ ಬಂದು ಬಹಳ ದಿನಗಳೇ ಆಗಿವೆ. ಆದರೂ ನಾವು ಈ ಲಸಿಕೆ ತೆಗೆದುಕೊಳ್ಳುವುದಕ್ಕೆ ಸಿದ್ಧರಾಗಿಲ್ಲ. ಅಂಬೇಡ್ಕರ್ ಲಸಿಕೆ ತೆಗೆದುಕೊಂಡವರಿಗೆ ಅಸ್ಪೃಶ್ಯತೆಯ ರೋಗ ಇರುವುದಿಲ್ಲ. ಕೊರೊನಾ ಸೃಷ್ಟಿಸಿದ ಈ ಕಾಲದಲ್ಲಿಯಾದರೂ ನಾವು ಅಂಬೇಡ್ಕರ್ ಲಸಿಕೆಯನ್ನು ತೆಗೆದುಕೊಂಡು ಸಮ ಸಮಾಜವನ್ನು ಸೃಷ್ಟಿ ಮಾಡಬೇಕಿದೆ. ಇಲ್ಲದೇ ಇದ್ದರೆ ನೀರಿಗೆ ಬಿದ್ದ ನಾಯಿಯನ್ನು ಸಂತನೊಬ್ಬ ಮೇಲಕ್ಕೆ ಎತ್ತಿದ ಹಾಗೆ ನಮ್ಮನ್ನು ಯಾರೂ ಮೇಲಕ್ಕೆ ಎತ್ತಲಾರರು. ನಾವು ನೀರಿನಲ್ಲಿ ಮುಳುಗಬೇಕಾಗುತ್ತದೆ. ಅಲ್ಲಿಯೇ ಹೂತು ಹೋಗುತ್ತೇವೆ.

ಕೊರೊನಾ ಕಲಿಸಿದ ಪಾಠವನ್ನು ನಾವು ಮನದಟ್ಟು ಮಾಡಿಕೊಳ್ಳೋಣ. ಕೊರೊನಾ ನಂತರದ ಸಮಾಜ ಸಮ ಸಮಾಜವಾಗಿರಲಿ. ನಾಯಿ ಬಾಲ ಡೊಂಕು ಎಂಬ ಮಾತು ನಮಗೆ ಅನ್ವಯವಾಗದಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT