ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ– ಇಬ್ರಾಹಿಂ ‘ರಾಜಕೀಯ’ ಚರ್ಚೆ

Last Updated 5 ಮಾರ್ಚ್ 2021, 20:50 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ, ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ ಅವರು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಶುಕ್ರವಾರ ಭೇಟಿ ಮಾಡಿ ಮಾತುಕತೆ ನಡೆಸಿದರು.

ಜೆಡಿಎಸ್‌ನತ್ತ ಇಬ್ರಾಹಿಂ ಒಲವು ಹೊಂದಿದ್ದಾರೆ ಎಂಬ ಸುದ್ದಿಯ ಮಧ್ಯೆ ಇಬ್ಬರ ‘ರಾಜಕೀಯ’ ಚರ್ಚೆ ಕುತೂಹಲ ಮೂಡಿಸಿದೆ.

ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ ಇಬ್ರಾಹಿಂ, ಪಕ್ಷಕ್ಕೆ ಸಂಬಂಧಿಸಿದ ಕೆಲವು ಮಹತ್ವದ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಶುಭ ಶುಕ್ರವಾರ, ಎಲ್ಲವೂ ಒಳ್ಳೆಯದಾಗುತ್ತದೆ. ರಾಜಕೀಯ ವಿಚಾರವಾಗಿ ಚರ್ಚೆ ನಡೆಸಿದ್ದೇವೆ’ ಎಂದರು.

‘ರಾಜ್ಯದಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕು, ಏನು ಮಾಡಬೇಕು, ಇದರಲ್ಲಿ ನನ್ನ ಪಾತ್ರ ಏನು, ಯಾವ ಯಾವ ಸಮಾಜದವರನ್ನು ಹೇಗೆ ಕರೆದೊಯ್ಯಬೇಕು. ಅಲ್ಪಸಂಖ್ಯಾತರ ಪಾತ್ರವೇನು, ಬಹುಸಂಖ್ಯಾತರ ಪಾತ್ರವೇನು ಎಂಬ ವಿಚಾರವಾಗಿ ಚರ್ಚಿಸಿದ್ದೇವೆ’ ಎಂದರು.

‘ಜೆಡಿಎಸ್‌ಗೆ ಸೇರುವ ವಿಚಾರ ಇಲ್ಲಿ ತೀರ್ಮಾನ ಆಗಿಲ್ಲ. ದೆಹಲಿಯಲ್ಲಿ ತೀರ್ಮಾನ ಆಗುತ್ತದೆ. ಸಮಯ ಸಿಕ್ಕಾಗ ದೆಹಲಿಗೆ ಹೋಗಿ ಬರುತ್ತೇನೆ’ ಎಂದ ಅವರು, ‘ಮೈಸೂರು ಮೇಯರ್ ಆಯ್ಕೆ ವಿಚಾರದಲ್ಲಿ ಉಂಟಾದ ಗೊಂದಲ ಪರಿಹಾರ ಆಗಲಿದೆ’ ಎಂದರು.

‘ಕಾಂಗ್ರೆಸ್ ಪಕ್ಷದಲ್ಲಿ ನಿರ್ಧಾರ ಕೈಗೊಳ್ಳುವ ನಾಯಕರ ಪಟ್ಟಿಯಲ್ಲಿ ನಾನಿದ್ದೇನೆಯೇ, ಇಲ್ಲವೇ ಎಂಬುವುದನ್ನು ತಿಳಿದುಕೊಳ್ಳಬೇಕಲ್ಲವೇ. ನಾವು ಬಂಡವಾಳ ಇಲ್ಲದೆ ರಾಜಕೀಯಕ್ಕೆ ಬಂದವರಲ್ಲ. ನಮಗೆ ಇರುವುದನ್ನು ನಮಗೆ ಕೊಟ್ಟರೆ ಸಾಕು. ನಾನು ಒಂದು ರೂಪಾಯಿ ನೀಡಿ 50 ಪೈಸೆ ವಾಪಸ್‌ ಕೇಳುತ್ತಿದ್ದೇನೆ. ಇಲ್ಲಿ ಒಂದು ರೂಪಾಯಿನೂ ಹಾಕದೇ ಎರಡು ರೂಪಾಯಿ ತೆಗೆದುಕೊಂಡು ಹೋಗುವವರಿದ್ದಾರೆ. ನಾವೇನು ಪುಗಸಟ್ಟೆ ಕೇಳುತ್ತಿದ್ದೇವಾ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT