ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಿತ್ ಶಾ 31ರಂದು ರಾಜ್ಯಕ್ಕೆ: ಮುಖ್ಯಮಂತ್ರಿ ಬೊಮ್ಮಾಯಿ

ನಂದಿನಿ ಕ್ಷೀರಾಭಿವೃದ್ದಿ ಬ್ಯಾಂಕ್, ಯಶಸ್ವಿನಿ ಯೋಜನೆಗೆ ಚಾಲನೆ
Last Updated 30 ಮಾರ್ಚ್ 2022, 6:40 IST
ಅಕ್ಷರ ಗಾತ್ರ

ಬೆಂಗಳೂರು: 'ಕೇಂದ್ರ ಗೃಹ ಸಚಿವ ಅಮಿತ್ ಶಾ ಇದೇ 31ಕ್ಕೆರಾತ್ರಿ 10.30ಕ್ಕೆ ಬೆಂಗಳೂರಿಗೆ ಬರಲಿದ್ದಾರೆ. ಮರುದಿನ ಬೆಳಿಗ್ಗೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು,'ಮಧ್ಯಾಹ್ನ 2.10 ಕ್ಕೆ ಮುದ್ದೇನಹಳ್ಳಿಯಲ್ಲಿ ವೈದ್ಯಕೀಯ ಕಾಲೇಜಿನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ ನಾಲ್ಕು ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಹಕಾರ ಇಲಾಖೆಯ ಸಹಕಾರ ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ನಂದಿನಿ ಕ್ಷೀರಾಭಿವೃದ್ದಿ ಬ್ಯಾಂಕ್ ಲೋಗೊ ಬಿಡುಗಡೆ ಮಾಡಲಿದ್ದಾರೆ‌' ಎಂದರು.

'ಸಂಜೆ 6 ಗಂಟೆಗೆ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಗೆ ಭೇಟಿ ನೀಡಲಿದ್ದು, ಪಕ್ಷದ ಪ್ರಮುಖರ ಸಭೆಯಲ್ಲಿ ಭಾಗವಹಿಸಲಿದ್ದಾರೆ' ಎಂದು ಬೊಮ್ಮಾಯಿ ತಿಳಿಸಿದರು.

'ಹಾಲು ಉತ್ಪಾದನೆ ಮತ್ತು ಇತರ ಚಟುವಟಿಕೆಗೆ ಆರ್ಥಿಕ ಸಂಸ್ಥೆ ಇರಬೇಕೆಂದು ಮನಗೊಂಡು ನಂದಿನಿ ಕ್ಷೀರಾಭಿವೃದ್ದಿ ಬ್ಯಾಂಕ್‌ ಸ್ಥಾಪನೆಯನ್ನು ಬಜೆಟ್‌ನಲ್ಲಿ ಘೋಷಿಸದ್ದೇವೆ. ರಾಜ್ಯ ಸರ್ಕಾರ ₹ 100 ಕೋಟಿ ಕೊಡಲಿದೆ. ಹಾಲು ಮಂಡಳಗಳು ₹ 250 ಕೋಟಿ ಷೇರು ಹಾಕಿ ಬ್ಯಾಂಕ್ ಆರಂಭವಾಗಲಿದೆ. ದೇಶದಲ್ಲಿ ಮೊದಲ ಬಾರಿಗೆ ಹಾಲು ಉತ್ಪಾದಕರ ಬ್ಯಾಂಕ್ ತೆರೆಯಲಾಗುತ್ತಿದೆ. ಇದರಿಂದ ಹಾಲು ಉತ್ಪಾದಕರಿಗೆ ಉಪಯೋಗವಾಗಲಿದೆ' ಎಂದರು.

'ಒಟ್ಟು 26ಲಕ್ಷ ಹಾಲು ಉತ್ಪಾದಕರಿದ್ದಾರೆ. 14,900 ಹಾಲು ಸಹಕಾರಿ ಸಂಘಗಳಿವೆ. ಒಟ್ಟು 15 ಹಾಲು ಒಕ್ಕೂಟಗಳಿದೆ. ನಮ್ಮ ಉದ್ದೇಶ ಹಾಲು ಉತ್ಪಾದಕರ ಆದಾಯ ದ್ವಿಗುಣಗೊಳಿಸುವುದು. ಮುಂದಿನ ದಿನಗಳಲ್ಲಿ ರೈತರ ಆರ್ಥಿಕ ಸ್ಥಿತಿ ಬದಲಾಯಿಸಲು ಈ ಯೋಜನೆ ಸಹಕಾರಿಯಾಗಲಿದೆ' ಎಂದರು.

'ಯಶಸ್ವಿನಿ ಯೋಜನೆ ಮತ್ತೆ ಆರಂಭಿಸುವಂತೆ ಬೇಡಿಕೆ ಇತ್ತು. ರಾಜ್ಯ ಸರ್ಕಾರ ಯಶಸ್ವಿನಿ ಯೋಜನೆಗೆ ₹ 300 ಕೋಟಿ ಮೀಸಲಿಟ್ಟಿದೆ. ಅದಕ್ಕೂ ಕೂಡ ಅಮಿತ್ ಶಾ ಅವರು ಚಾಲನೆ ನೀಡಲಿದ್ದಾರೆ' ಎಂದರು.

'ಯಶಸ್ವಿನಿ ಯೋಜನೆಯಲ್ಲಿ ಕೆಲವು ಬದಲಾವಣೆ ಮಾಡುತ್ತೇವೆ. ಎರಡು - ಮೂರು ವಾರಗಳಲ್ಲಿ ಈ ಯೋಜನೆ ಜಾರಿ ಮಾಡುತ್ತೇವೆ. ರೈತರ ಆರೋಗ್ಯ ದೃಷ್ಟಿಯಿಂದ ಈ ಯೋಜನೆ ಮತ್ತೆ ತರುತ್ತಿದ್ದೇವೆ‌' ಎಂದರು.

ಪ್ರಗತಿಪರರು ಸರ್ಕಾರಕ್ಕೆಪತ್ರ ಬರೆದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಸಾಹಿತಿಗಳು ಪತ್ರ ಬರೆದಿರುವ ವಿಚಾರ ಅಧ್ಯಯನ ಮಾಡಿ, ಅವರುಏನು ಹೇಳಿದ್ದಾರೆಂದುದು ತಿಳಿದು ವಾಸ್ತವಾಂಶ ಅರಿತು, ಮುಂದಿನ ದಿನಗಳಲ್ಲಿ ಯಾವೆಲ್ಲ ನಿರ್ಧಾರ ತೆಗೆದುಕೊಳ್ಳಬೇಕೆಂದು ಯೋಚನೆ ಮಾಡುತ್ತೇವೆ' ಎಂದರು.

ರಾಜ್ಯದಲ್ಲಿ ಸಂಘರ್ಷಮಯ ವಾತಾವರಣದ ಬಗ್ಗೆ ಕೇಳಿದಾಗ, 'ಇದುವರೆಗೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಿಲ್ಲ. ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಂಡಿದ್ದೇವೆ.‌ಮುಂದೆಯೂ ಕಾನೂನು ಸುವ್ಯವಸ್ಥೆ ಕಾಪಾಡುತ್ತೇವೆ' ಎಂದರು.

ಹಲಾಲ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, 'ಇಂಥ ಸನ್ನಿವೇಶ ಈಗಷ್ಟೇ ಆರಂಭವಾಗಿದೆ. ಇದರ ಸಮಗ್ರತೆಯನ್ನು ಗಮನಿಸಬೇಕಾಗುತ್ತದೆ. ಕೆಲವು ನಿಯಮಗಳು, ಆಚರಣೆಗಳು ಮೊದಲಿನಿಂದಲೂ ಇವೆ. ಅದರಂತೆ ನಡೆದುಕೊಂಡು ಹೋಗುತ್ತಿದೆ. ಧಾರ್ಮಿಕ ದತ್ತಿ ಕಾಯ್ದೆಯ ನಿಯಮದ ಬಗ್ಗೆ ಗಂಭೀರ ಆಕ್ಷೇಪಗಳು ಎದ್ದಿವೆ. ಅದರ ಬಗ್ಗೆ ಅವಲೋಕನ ಮಾಡುತ್ತೇವೆ' ಎಂದರು.

ಬಲಪಂಥೀಯ ಸಂಘಟನೆಗಳ ಪ್ರಚೋದನೆ ಬಗ್ಗೆ ಕೇಳಿದ ಪ್ರಶ್ನೆಗೆ, 'ನಮ್ಮ ಸರ್ಕಾರ ಅಭಿವೃದ್ಧಿಯತ್ತ ಮಾತ್ರ ಗಮನ ಕೊಡುತ್ತದೆ. ಬಲಪಂಥೀಯ ಎಡಪಂಥೀಯ ಅನ್ನೋದು ಇಲ್ಲ. ನಾವು ಶಾಂತಿ, ಸಾಮಾನ್ಯ ಜನರ ಭದ್ರತೆ, ಅಭಿವೃದ್ಧಿಗಳಂಥ ಸಿದ್ಧಾಂತಗಳನ್ನು‌ ನಂಬುತ್ತೇವೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT