ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ಕೆ.ಹುಬ್ಬಳ್ಳಿ: ‘ಜಿಲ್ಲೆಯ 16 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಿ’:ಅಮಿತ್ ಶಾ

ಜನ ಸಂಕಲ್ಪ ಯಾತ್ರೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕರ್ತರಿಗೆ ಕರೆ
Last Updated 29 ಜನವರಿ 2023, 6:36 IST
ಅಕ್ಷರ ಗಾತ್ರ

ಎಂ.ಕೆ.ಹುಬ್ಬಳ್ಳಿ (ಕಿತ್ತೂರು ತಾ): ‘ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ 16ರಲ್ಲಿ ಬಿಜೆಪಿ ಗೆಲ್ಲಿಸಬೇಕು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕರ್ತರಿಗೆ ಕರೆ ನೀಡಿದರು.

ಎಂ.ಕೆ.ಹುಬ್ಬಳ್ಳಿಯಲ್ಲಿ ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕ ಶನಿವಾರ ಆಯೋಜಿಸಿದ್ದ ‘ಜನ ಸಂಕಲ್ಪ ಯಾತ್ರೆ’ ಉದ್ಘಾಟಿಸಿ ಮಾತನಾಡಿದ ಅವರು, ‘ಈ ಬಾರಿಯೂ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸಿ. ಮುಂದಿನ ಐದು ವರ್ಷದ ನಿಮ್ಮ ಸೇವೆಯನ್ನು ಯಾರ ಕೈಯಲ್ಲಿ ಕೊಡಬೇಕು ಎಂದು ನೀವೇ ನಿರ್ಧರಿಸಿ’ ಎಂದೂ ಮನವಿ ಮಾಡಿದರು.

‘ಬೆಳಗಾವಿ–ಧಾರವಾಡ ರೈಲು ಮಾರ್ಗ, ಕಿತ್ತೂರಿನಲ್ಲಿ 1000 ಎಕರೆಯಲ್ಲಿ ಉದ್ಯೋಗ ಟೌನ್‌ಶಿಪ್‌, ಬೈಲಹೊಂಗಲದಲ್ಲಿ ರಾಯಣ್ಣ ಸೈನಿಕ ಶಾಲೆ, ಚನ್ನಬಸವೇಶ್ವರ ಏತನೀರಾವರಿ ಸೇರಿದಂತೆ ಕಿತ್ತೂರು ಕರ್ನಾಟಕ ಭಾಗದ ಅಭಿವೃದ್ಧಿಗೆ ಬೊಮ್ಮಾಯಿ ಸರ್ಕಾರ ಆದ್ಯತೆ ನೀಡಿದೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ ಆಡಳಿತದ ಪರಿಣಾಮ ಭಾರತವು ಪ್ರಪಂಚದ ಐದನೇ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಜಿ–20 ರಾಷ್ಟ್ರಗಳ ನಾಯಕತ್ವ ಪಡೆದಿದೆ. ಇದು ಬಿಜೆಪಿ ಅಥವಾ ಪ್ರಧಾನಿ ಒಬ್ಬರಿಗೆ ಸಿಕ್ಕ ಗೌರವವಲ್ಲ. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಲ್ಲಬೇಕಾದ ಗೌರವ’ ಎಂದೂ ಹೇಳಿದರು.

‘ನಾವು ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ 3 ಕೋಟಿ ಮನೆ, 10 ಕೋಟಿ ಶೌಚಾಲಯ ಕಟ್ಟಿಸಿದ್ದೇವೆ. 13 ಕೋಟಿ ತಾಯಂದಿರರಿಗೆ ರಿಯಾಯಿತಿಯಲ್ಲಿ ಅಡುಗೆ ಅನಿಲ ನೀಡಿದ್ದೇವೆ. ಆಯುಷ್ಮಾನ್‌ ಭಾರತ್‌ ಯೋಜನೆ ಅಡಿ 60 ಕೋಟಿ ಜನರಿಗೆ ₹5 ಲಕ್ಷದವರೆಗೆ ವೆಚ್ಚ ಭರಿಸಿದ್ದೇವೆ’ ಎಂದರು.

‘ದಲಿತರ ಪುತ್ರ ರಮಾನಾಥ ಕೋವಿಂದ್‌ ಅವರನ್ನು ಕಳೆದ ಬಾರಿ ರಾಷ್ಟ್ರಪತಿ ಮಾಡಿದ್ದೇವೆ. ಈ ಬಾರಿ ದ್ರೌ‍ಪದಿ ಮುರ್ಮು ಅವರನ್ನು ದೇಶದ ಪ್ರಥಮ ಪ್ರಜೆ ಮಾಡಿದ್ದೇವೆ. ದಲಿತರು, ಆದಿವಾಸಿಗಳು, ಬಡವರಿಗೆ ಬಿಜೆಪಿ ಪ್ರಾಧಾನ್ಯತೆ ನೀಡಿದೆ’ ಎಂದೂ ಹೇಳಿದರು.

‘ಜಮ್ಮು–ಕಾಶ್ಮೀರಕ್ಕೆ ಇದ್ದ ಕಲಂ–370 ಕಿತ್ತು ಹಾಕಿ ಆ ಪ್ರದೇಶವನ್ನು ಭಾರತದ ಅವಿಭಾಜ್ಯ ಅಂಗ ಮಾಡಿದ್ದೇವೆ. ದಶಕಗಳಿಂದಲೂ ಕಾಂಗ್ರೆಸ್‌ ಮಡಿಲಲ್ಲಿ ಇಟ್ಟುಕೊಂಡು ಇದನ್ನು ಸಾಕುತ್ತಿತ್ತು. ಈಗ ಭಾರತ್‌ ಜೋಡೊ ಯಾತ್ರೆ ಮಾಡುತ್ತಿರುವ ರಾಹುಲ್‌ ಬಾಬಾ ‘ಜಮ್ಮು– ಕಾಶ್ಮೀರದಲ್ಲಿ ರಕ್ತದ ಹೊಳೆ ಹರಿಯುತ್ತದೆ’ ಎಂದಿದ್ದರು. ಕನಿಷ್ಠ ಒಂದು ಕಲ್ಲು ಎಸೆದ ಘಟನೆಯೂ ಆಗದಂತೆ ಮಾಡಿದ್ದೇವೆ’ ಎಂದರು.

ಶಾಸಕ ಮಹಾಂತೇಶ ದೊಡ್ಡಗೌಡ್ರ ಸ್ವಾಗತಿಸಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಸಂಸದರಾದ ಮಂಗಲಾ ಅಂಗಡಿ, ಈರಣ್ಣ ಕಡಾಡಿ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಮಹಾದೇವಪ್ಪ ಯಾದವಾಡ, ಪಿ.ರಾಜೀವ, ವಿಧಾನ ಪರಿಷತ್‌ ಸದಸ್ಯರಾದ ಲಕ್ಷ್ಮಣ ಸವದಿ, ಹಣಮಂತ ನಿರಾಣಿ ಮಾತನಾಡಿದರು.

*

ಇಳಿಸಂಜೆಗೆ ಯಾರ್‍ಯಾರ ನೆನೆಯಲಿ?

ಅಮಿತ್‌ ಶಾ ಮಾತಿಗೂ ಮುನ್ನ ಸವದತ್ತಿಯ ಯಲ್ಲಮ್ಮನ ಪಾದಗಳಿಗೆ ಪ್ರಣಾಮ ಸಲ್ಲಿಸಿದರು. ಕ್ರಾಂತಿಯ ಕಿಡಿ ಕಿತ್ತೂರು ಚನ್ನಮ್ಮನಿಗೆ ಶರಣು ಹೇಳಿದರು. ಜಗಜ್ಯೋತಿ ಬಸವೇಶ್ವರ, ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ, ಶಿವಯೋಗೀಶ್ವರ ಸಾಧು ಸಂಸ್ಥಾನ ಮಠ, ಕಲ್ಮಠ, ಸಿದ್ಧರಾಮೇಶ್ವರ ಮಠ, ಸಿದ್ಧಾರೂಢ ಮಠಗಳನ್ನೂ ಅವರು ನೆನೆದರು.

ಗೈರು: ಶಾಸಕರಾದ ರಮೇಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಕಾರ್ಯಕ್ರಮದಿಂದ ದೂರ ಉಳಿದರು. ಸಂಜೆ ಯುಕೆ27 ಹೋಟೆಲ್‌ನಲ್ಲಿ ನಡೆದ ಗೌಪ್ಯ ಸಭೆಯಲ್ಲಿ ರಮೇಶ ಜಾರಕಿಹೊಳಿ ಕೂಡ ಪಾಲ್ಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

*

‘ಬಿಜೆಪಿ ಕೈಯಲ್ಲಿ ದೇಶ ಸುರಕ್ಷಿತ’

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಅಮಿತ್‌ ಶಾ ಅವರ ಪ್ರಬಲ ಅಸ್ತ್ರಗಳಿಂದಾಗಿ ದೇಶದಲ್ಲಿ ಭಯೋತ್ಪಾದನೆ ನಿಂತಿದೆ. ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸುವ ಮೂಲಕ ರಾಜ್ಯದಲ್ಲೂ ಇದಕ್ಕೆ ಕುಮ್ಮಕ್ಕು ನೀಡುವುದನ್ನು ತಡೆದಿದ್ದೇವೆ’ ಎಂದರು.

‘ಯುಪಿಎ ಸರ್ಕಾರ ಇದ್ದಾಗ ಪ್ರತಿ ದಿನವೂ ಭಯೋತ್ಪಾದನಾ ಕೃತ್ಯಗಳು ನಡೆಯುತ್ತಿದ್ದವು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಕೈಯಲ್ಲಿ ಇಡೀ ದೇಶ ಸುರಕ್ಷಿತವಾಗಿದೆ’ ಎಂದೂ ಅವರು ಹೇಳಿದರು.

ಶಾಸಕ ಬಿ.ಎಸ್‌. ಮಾತನಾಡಿ, ‘ಬಿಜೆಪಿ ಸರ್ಕಾರ ಬಂದ ಮೇಲೆ ಕೃಷಿ ಸಮ್ಮಾನ್‌, ಆಯುಷ್ಮಾನ್‌ ಭಾರತ್‌– ಆರೋಗ್ಯ ಕರ್ನಾಟಕ, ಆತ್ಮನಿರ್ಭರ, ಜಲಜೀವನ ಮಿಷನ್‌ನಂಥ ಹಲವು ಯೋಜನೆಗಳನ್ನು ತಂದಿದೆ. ಎರಡು ವರ್ಷಗಳ ಕೊರೊನಾ ಉ‍ಪಟಳದ ಮಧ್ಯೆಯೂ ರಾಜ್ಯವನ್ನು ಸುಭಿಕ್ಷೆಯಿಂದ ಮುನ್ನಡೆಸಿದ್ದೇವೆ’ ಎಂದರು.

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಮಾತನಾಡಿ, ‘ಅಧಿಕಾರಕ್ಕೆ ಬಂದರೆ 200 ಯೂನಿಟ್‌ ವಿದ್ಯುತ್‌ ಉಚಿತ ಕೊಡುವುದಾಗಿ ಕಾಂಗ್ರೆಸ್ಸಿಗರು ಹೇಳಿದ್ದು ನಗೆಪಾಟಲು. ಸಿದ್ದರಾಮಯ್ಯ ಸರ್ಕಾರ ಇದ್ದಾಗ 14 ತಾಸು ವಿದ್ಯುತ್‌ ನೀಡಲೂ ಆಗಲಿಲ್ಲ. ವಿದ್ಯುತ್‌ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದು ಮೋದಿ ಸರ್ಕಾರ. ಈಗ ವಿದೇಶಗಳಿಗೂ ರಪ್ತು ಮಾಡುವ ಹಂತಕ್ಕೆ ನಾವು ಬೆಳೆಸಿದ್ದೇವೆ’ ಎಂದರು.

*

ಚುನಾವಣಾ ಕಹಳೆ ಮೊಳಗಿಸಿದ ಶಾ

ಚನ್ನಮ್ಮನ ಕಿತ್ತೂರು, ಬೈಲಹೊಂಗಲ, ಖಾನಾಪುರ ಹಾಗೂ ಬೆಳಗಾವಿ ಗ್ರಾಮೀಣ ವಿಧಾಸಭಾ ಮತಕ್ಷೇತ್ರಗಳ ಜನರೂ ಎಂ.ಕೆ.ಹುಬ್ಬಳ್ಳಿ ಜನ ಸಂಕಲ್ಪ ಯಾತ್ರೆಯಲ್ಲಿ ಸೇರಿದರು. ಕಿತ್ತೂರು ರಾಣಿ ಮೆಟ್ಟಿದ ನೆಲದಿಂದಲೇ ಶಾ ಚುನಾವಣಾ ಕಹಳೆ ಮೊಳಗಿಸಿದರು. ನೆಚ್ಚಿನ ನಾಯಕ ವೇದಿಕೆ ಮೇಲೆ ಬರುತ್ತಿದ್ದಂತೆಯೇ ಸಿಳ್ಳೆ, ಚಪ್ಪಾಳೆ ಹಾಕಿ ಬೆಂಬಲಿಸಿದರು.

ವೇದಿಕೆಯಲ್ಲಿ ಹಾಕಿದ್ದ 50 ಸಾವಿರ ಕುರ್ಚಿಗಳೂ ಭರ್ತಿಯಾದವು. ಶಾ ಆಗಮನದಿಂದ ಜಿಲ್ಲೆಯ ನಾಯಕರನ್ನು ಹೊಸ ಹುಮ್ಮಸ್ಸು ಪುಟಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT