ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ರಿತ್ ಪೌಲ್ ತಂದೆ ಹೆಸರಿನಲ್ಲಿ ನಲ್ಲಪ್ಪನಹಳ್ಳಿ ಬಳಿಯೂ ಜಮೀನು

Last Updated 16 ಜುಲೈ 2022, 4:09 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ನಮ್ಮದು ವಿಜಯಪುರ ಜಿಲ್ಲೆಯ ಬಬಲೇಶ್ವರ. ಒಂದು ತಿಂಗಳಿನಿಂದ ಇಲ್ಲಿ ಕೆಲಸಕ್ಕೆ ಇದ್ದೇವೆ. ಮಾಸಿಕ ₹ 18 ಸಾವಿರ ಕೊಡುತ್ತೇವೆ ಎಂದಿದ್ದಾರೆ. ನಮ್ಮ ಪರಿಚಿತರೊಬ್ಬರು ಇಲ್ಲಿಗೆ ಕರೆತಂದು ಕೆಲಸಕ್ಕೆ ಸೇರಿಸಿದ್ದಾರೆ. ಈ ಜಮೀನು ಯಾರದ್ದು ಎನ್ನುವುದು ನಮಗೆ ಗೊತ್ತಿಲ್ಲ’–ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿತರಾಗಿರುವ ಎಡಿಜಿಪಿ ಅಮ್ರಿತ್ ಪೌಲ್ ಅವರಿಗೆ ಸೇರಿದ ತಾಲ್ಲೂಕಿನಹೊಸಹುಡ್ಯ ಗ್ರಾಮದ ಬಳಿಯಿರುವ ಫಾರ್ಮ್‌ಹೌಸ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಮಾತು ಇದು.

ಪಿಎಸ್‌ಐ ನೇಮಕದ ಅಕ್ರಮಗಳು ಬಯಲಾಗುತ್ತಿದ್ದಂತೆ ಇತ್ತ ಹೊಸಹುಡ್ಯದ ಫಾರ್ಮ್‌ಹೌಸ್‌ನಲ್ಲಿ ಸಿಬ್ಬಂದಿಯೂ ಬದಲಾವಣೆ ಆಗಿದ್ದಾರೆ. ಸಿಐಡಿ ಅಧಿಕಾರಿಗಳ ತಂಡ ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಿ ಮಾಹಿತಿಗಳನ್ನು ಕಲೆಹಾಕಿತ್ತು.ಮರುದಿನ ಜಮೀನು ಕೊಡಿಸಿದ್ದರು ಎನ್ನಲಾದ ಜಾತವಾರ ಗ್ರಾಮದ ಜಗದೀಶ್ ಅವರ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದರು. ಪೌಲ್ ಬಂಧನದ ತರುವಾಯ ಈ ಫಾರ್ಮ್‌ಹೌಸ್ ಸ್ಥಳೀಯರಲ್ಲಿ ಕುತೂಹಲದ ಕೇಂದ್ರವಾಗಿದೆ.

ಚಿಕ್ಕಬಳ್ಳಾಪುರ–ಶಿಡ್ಲಘಟ್ಟ ರಸ್ತೆಯಲ್ಲಿರುವ ಹೊಸಹುಡ್ಯ ಗ್ರಾಮದ ಮುಖ್ಯರಸ್ತೆಯಿಂದತೀರಾ ಕಚ್ಚಾ ರಸ್ತೆಯಲ್ಲಿ ಒಂದೂವರೆ ಕಿ.ಮೀ ದೂರ ಸಾಗಿದರೆ ನೇತರಾಮ್ ಬನ್ಸಾಲ್ ಅವರ ಹೆಸರಿನಲ್ಲಿ ನಾಲ್ಕು ಎಕರೆ ಜಮೀನಿದೆ. ನೇತರಾಮ್ ಬನ್ಸಾಲ್,ಅಮ್ರಿತ್ ಪೌಲ್ ಅವರ ತಂದೆ.

ಜಮೀನನ್ನು ಫಾರ್ಮ್‌ಹೌಸ್ ಆಗಿ ಅಭಿವೃದ್ಧಿಗೊಳಿಸಲಾಗಿದೆ. ಸುತ್ತದೊಡ್ಡ ಬೇಲಿ ಅಳವಡಿಸಲಾಗಿದೆ. ಹೊರಗಿನವರು ಯಾರೂ ಫಾರ್ಮ್‌ಹೌಸ್ ಪ್ರವೇಶಿದಂತೆ ಗೇಟ್‌ಗೆ ಬೀಗ ಹಾಕಲಾಗಿದೆ.ಫಾರ್ಮ್‌ಹೌಸ್ ಆರಂಭದಲ್ಲಿಯೇ ನೀರು ಸಂಗ್ರಹಕ್ಕೆ ಕೃಷಿ ಹೊಂಡವಿದೆ. ನಡುವೆ ಕೆಂಪು ಹೆಂಚಿನ ಚೆಂದವಾದ ಮನೆ ನಿರ್ಮಿಸಲಾಗಿದೆ. ಹೊರಭಾಗದಿಂದ ನೋಡಿದರೆ ಈ ಮನೆ ಮಲೆನಾಡು ಭಾಗದ ತೊಟ್ಟಿಮನೆಯಂತಿದೆ.

ಹೊಸಹುಡ್ಯ ಅಲ್ಲದೆ ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ನಲ್ಲಪ್ಪನಹಳ್ಳಿಯಲ್ಲಿಯೂ ನೇತರಾಮ್ ಬನ್ಸಾಲ್ ಅವರ ಹೆಸರಿನಲ್ಲಿ 8.29 ಎಕರೆ ಜಮೀನು ಇದೆ. ಪೌಲ್ ಜಿಲ್ಲೆಯಲ್ಲಿ ಮತ್ತಷ್ಟು ಜಮೀನು ಖರೀದಿಸಿರುವುದು ಬೆಳಕಿಗೆ ಬಂದಿದೆ.ಕೇಂದ್ರ ವಲಯ ಐಜಿ ಆಗಿದ್ದ ವೇಳೆ ಅಮ್ರಿತ್ ಪೌಲ್ ಜಮೀನು ಖರೀದಿಸಿದ್ದರು ಎನ್ನಲಾಗುತ್ತಿದೆ.

‘ನಮ್ಮೂರಿನ ಕೆಲವರಿಗೆ ಮಾತ್ರ ಇದು ಪೊಲೀಸ್ ಅಧಿಕಾರಿಗೆ ಸೇರಿದ ಮನೆ, ಜಮೀನು ಎನ್ನುವುದು ಗೊತ್ತು. ಇಲ್ಲಿಗೆ ಸಿಐಡಿ ಅಧಿಕಾರಿಗಳು ಬಂದ ನಂತರವೇ ಹೆಚ್ಚಿನ ಜನರಿಗೆ ತಿಳಿಯಿತು’ ಎಂದು ಫಾರ್ಮ್ ಹೌಸ್ ಬಳಿಯ ಜಮೀನಿನಲ್ಲಿದ್ದ ವ್ಯಕ್ತಿಯೊಬ್ಬರು ಹೇಳಿದರು.

ಫಾರ್ಮ್‌ಹೌಸ್ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರನ್ನು ‘ಇಲ್ಲಿಗೆ ಅಮ್ರಿತ್ ಪೌಲ್ ಯಾವಾಗ ಬರುತ್ತಿದ್ದರು’ ಎಂದು ಪ್ರಶ್ನಿಸಿದರೆ, ‘ಗೊತ್ತಿಲ್ಲ’
ಎಂದರು.

‘ನಾವು ಯಾರೂ ಆ ಜಮೀನಿನ ಒಳಗೆ ಹೋಗಿಲ್ಲ. ಯಾವಾಗಲೂ ಗೇಟ್‌ಗೆ ಬೀಗ ಹಾಕಿರುತ್ತಿದ್ದರು. ಮಂಗಳೂರು ಕಡೆಯವರು ಆ ಜಮೀನಿನಲ್ಲಿ ಮನೆ ಕಟ್ಟಲು ಬಂದಿದ್ದರು. ಆಗಾಗ್ಗೆ ಇಲ್ಲಿಗೆ ಪೊಲೀಸ್ ಅಧಿಕಾರಿ ಬರುತ್ತಿದ್ದರು’ ಎಂದು ಮಾಹಿತಿ ನೀಡುತ್ತಲೇ, ‘ನಮ್ಮ ಹೆಸರು ಮಾತ್ರ ಬರೆಯಬೇಡಿ’ ಎಂದು ಮತ್ತೊಂದು ಜಮೀನಿನಲ್ಲಿದ್ದ ಇಬ್ಬರು
ಕೈಮುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT