ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರ| ಮನೆಯಲ್ಲಿ ಖೋಟಾ ನೋಟು ಮುದ್ರಣ: ಮಹಿಳೆ ಸೇರಿ ನಾಲ್ವರು ಆರೋಪಿಗಳ ಬಂಧನ

ಬೆಂಗಳೂರು ಪೊಲೀಸರ ದಾಳಿ l ಮಹಿಳೆ ಸೇರಿ ನಾಲ್ವರು ಆರೋಪಿಗಳ ಬಂಧನ
Last Updated 25 ಜನವರಿ 2023, 21:46 IST
ಅಕ್ಷರ ಗಾತ್ರ

ಬೆಂಗಳೂರು: ಆಂಧ್ರಪ್ರದೇಶದ ಮನೆಯೊಂದರ ಮೇಲೆ ನಗರದ ಸುಬ್ರಮಣ್ಯಪುರ ಪೊಲೀಸರು ಇತ್ತೀಚೆಗೆ ದಾಳಿ ಮಾಡಿದ್ದು, ಖೋಟಾ ನೋಟು ಮುದ್ರಣ ಜಾಲ ಭೇದಿಸಿದ್ದಾರೆ.

ಖೋಟಾ ನೋಟು ಜಾಲದ ಆರೋಪಿಗಳಾದ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಚರಣ್ ಸಿಂಗ್ (40), ಅವರ ಸಂಬಂಧಿ ರಜನಿ (36), ಗೋಪಿನಾಥ್ (36) ಹಾಗೂ ರಾಜು (32) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

‘ಅನಂತಪುರ ನಗರದ ಬಾಡಿಗೆ ಮನೆಯೊಂದರಲ್ಲಿ ಖೋಟಾ ನೋಟು ಮುದ್ರಿಸುತ್ತಿದ್ದ ಆರೋಪಿಗಳು, ಹಲವು ರಾಜ್ಯಗಳಲ್ಲಿ ಚಲಾವಣೆ ಮಾಡುತ್ತಿದ್ದರು. ಆರೋಪಿಗಳಿಂದ ₹ 500 ಮುಖ ಬೆಲೆಯ ₹ 10.34 ಲಕ್ಷ ಮೊತ್ತದ ಖೋಟಾ ನೋಟುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ಕಾರು ತಪಾಸಣೆ ವೇಳೆ ಪತ್ತೆ: ‘ಆರೋಪಿ ಗಳಾದ ಚರಣ್‌ಸಿಂಗ್ ಹಾಗೂ ರಜಿನಿ, ಜನವರಿ 19ರಂದು ಉತ್ತರಹಳ್ಳಿ–ಕೆಂಗೇರಿ ರಸ್ತೆಯಲ್ಲಿ ಕಾರಿನಲ್ಲಿ ಹೊರಟಿದ್ದರು. ಅವರು ಖೋಟಾ ನೋಟು ಸಾಗಿಸುತ್ತಿದ್ದ ಮಾಹಿತಿ ಬಂದಿತ್ತು. ಕಾರು ತಡೆದು ತಪಾಸಣೆ ನಡೆಸಿದಾಗ, ₹ 500 ಮುಖಬೆಲೆಯ ಖೋಟಾ ನೋಟುಗಳು ಪತ್ತೆಯಾಗಿದ್ದವು’ ಎಂದು ಪೊಲೀಸರು ತಿಳಿಸಿದರು.

‘ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಅನಂತಪುರದ ಮನೆಯೊಂದರಲ್ಲಿ ನೋಟು ಮುದ್ರಣ ಮಾಡುತ್ತಿದ್ದ ಸಂಗತಿ ಗೊತ್ತಾಯಿತು. ಅನಂತಪುರಕ್ಕೆ ಹೋದ ವಿಶೇಷ
ತಂಡ, ಮನೆ ಮೇಲೆ ದಾಳಿ ಮಾಡಿತು’ ಎಂದು ಹೇಳಿದರು.

‘ಪ್ರತಿ ತಿಂಗಳು ₹ 3,500 ಕೊಟ್ಟು ಮನೆ ಬಾಡಿಗೆ ಪಡೆಯಲಾಗಿತ್ತು. ಮಾಲೀಕರಿಗೆ ಗೊತ್ತಾಗದ ರೀತಿಯಲ್ಲಿ ನೋಟುಗಳನ್ನು ಮುದ್ರಣ ಮಾಡಿ, ಮಧ್ಯವರ್ತಿಗಳ ಮೂಲಕ ಚಲಾವಣೆ ಮಾಡಲಾಗುತ್ತಿತ್ತು’ ಎಂದು ಪೊಲೀಸರು ತಿಳಿಸಿದರು.

‘ಖೋಟಾ ನೋಟು ಮುದ್ರಣ ಮಾಡಿರುವ ಹಾಳೆಗಳು, ಲ್ಯಾಪ್‌ಟಾಪ್, ಎರಡು ಪ್ರೀಂಟರ್, ನೋಟು ಮುದ್ರಣಕ್ಕೆ ಬಳಸುತ್ತಿದ್ದ ಶಾಯಿ, ಸ್ಕ್ರೀನ್ ಪ್ರಿಂಟಿಂಗ್ ಬಾಕ್ಸ್, 2 ಮೊಬೈಲ್ ಹಾಗೂ ಇತರೆ ಉಪಕರಣಗಳು ಮನೆಯಲ್ಲಿ ಸಿಕ್ಕಿವೆ. ಆರೋಪಿಗಳು ಹಲವು ತಿಂಗಳಿನಿಂದ ನೋಟು ಮುದ್ರಣ ಮಾಡುತ್ತಿದ್ದ ಮಾಹಿತಿ ಇದೆ’ ಎಂದು ಹೇಳಿದರು.

‘ಕೃತ್ಯದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿರುವ ಮಾಹಿತಿ ಇದೆ. ಆರೋಪಿಗಳು ಯಾರಿಗೆಲ್ಲ ಖೋಟಾ ನೋಟು ಕೊಟ್ಟಿದ್ದಾರೆ, ಯಾವ ನಗರಗಳಲ್ಲಿ ನೋಟುಗಳು ಚಲಾವಣೆಯಾಗಿವೆ? ಎಂಬುದನ್ನು ತಿಳಿಯಲು ತನಿಖೆ ಮುಂದುವರಿಸಲಾಗಿದೆ’ ಎಂದೂ‌ ಪೊಲೀಸರು
ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT