ಗುರುವಾರ , ಜುಲೈ 7, 2022
23 °C
ಪಿಎಸ್ಐ ಮರು ಪರೀಕ್ಷೆ ವಿರುದ್ಧ ಬೀದಿಗಿಳಿದ ಅಭ್ಯರ್ಥಿಗಳು

ದಯಾಮರಣಕ್ಕೆ ಅವಕಾಶ ಕೊಡಿ: ಅಭ್ಯರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘545 ಪಿಎಸ್‌ಐ ಹುದ್ದೆ ಗಳ ನೇಮಕಾತಿಗೆ ಮರುಪರೀಕ್ಷೆ ನಡೆಸಬಾರದು’ ಎಂದು ಒತ್ತಾಯಿಸಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಹೆಸರಿರುವ ಅಭ್ಯರ್ಥಿಗಳು ಇಲ್ಲಿನ ಸ್ವಾತಂತ್ರ್ಯ ಉದ್ಯಾನ ದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಅಭ್ಯರ್ಥಿಗಳು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 'ಪ್ರಾಣ ಕೊಟ್ಟೆವು ವಿನಃ ನೇಮಕಾತಿ ಆದೇಶ ಪಡೆಯದೆ ಬಿಡೆವು’, ‘ಕನಸಿಗೆ ಕೊಳ್ಳಿ ಇಡದಿರಿ, ಬದುಕನ್ನು ಮಸಣಕ್ಕೆ ದೂಡದಿರಿ’, ‘ನ್ಯಾಯಯುತವಾಗಿ ಆಯ್ಕೆಯಾದವರು ಬಲಿಪಶು ಏಕೆ’ ಎಂಬ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು.

‘ನಾವೆಲ್ಲರೂ ಬಡವರು. ಪಿಎಸ್ಐ ಆಗಬೇಕೆಂಬ ಕನಸು ಇಟ್ಟುಕೊಂಡು ಹಲವು ವರ್ಷಗಳಿಂದ ಓದಿ, ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿದ್ದೇವೆ. ಕೆಲವರು ಅಕ್ರಮ ಮಾಡಿದ ಮಾತ್ರಕ್ಕೆ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯ ಮಾಡುವುದು ಸರಿಯಲ್ಲ’ ಎಂದು ಅಭ್ಯರ್ಥಿಗಳು ಪ್ರತಿಪಾದಿಸಿದರು.

‘ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಅಭ್ಯರ್ಥಿಗಳನ್ನು ಶಾಶ್ವತವಾಗಿ ಡಿಬಾರ್ ಮಾಡಿ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ಆದರೆ, ಮರು ಪರೀಕ್ಷೆ ನಡೆಸುವ ಮೂಲಕ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಬೇಡಿ. ಅಕ್ರಮ ನಡೆದ ಸುದ್ದಿ ತಿಳಿದ ದಿನದಿಂದಲೂ ಕಣ್ಣೀರು ಹಾಕುತ್ತಿದ್ದೇವೆ. ಸಿಐಡಿ ತನಿಖೆಯಿಂದ ನ್ಯಾಯ ಸಿಗುವ ಭರವಸೆಯಿಂದ ಬದುಕುತ್ತಿದ್ದೇವೆ. ಇಂಥ ಸ್ಥಿತಿಯಲ್ಲಿ ದಿಢೀರ್ ಮರು ಪರೀಕ್ಷೆ ನಡೆಸಿ, ನಮ್ಮ ಬದುಕು ಹಾಳು ಮಾಡಬೇಡಿ’ ಎಂದು ಅಭ್ಯರ್ಥಿಗಳು ಅಳಲು ತೋಡಿಕೊಂಡರು.

‘ಒಂದು ಬೆರಳಿಗೆ ಗಾಯವಾದರೆ ಕೈಯನ್ನೇ ಕತ್ತರಿಸುವುದಿಲ್ಲ. ಕೆಲವರು ಮಾಡಿದ ತಪ್ಪಿಗೆ ನಮಗೆಲ್ಲ ಶಿಕ್ಷೆ ಕೊಡಬೇಡಿ. ನಮಗೆ ನೇಮಕಾತಿ ಆದೇಶ ಪ್ರತಿ ಕೊಡಿ. ಇಲ್ಲವೇ ಸಾಮೂಹಿಕ ದಯಾಮರಣಕ್ಕೆ ಅವಕಾಶ ನೀಡಿ’ ಎಂದು ಅಭ್ಯರ್ಥಿಗಳು ಕೋರಿದರು.

ಎಫ್‌ಐಆರ್ ದಾಖಲಿಸುವ ಬೆದರಿಕೆ: ಕೆಪಿಸಿಸಿ ಅಧ್ಯಕ್ಷರ ಭೇಟಿ

ಪಿಎಸ್‌ಐ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಹೆಸರಿರುವ ಕೆಲ ಅಭ್ಯರ್ಥಿಗಳು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಶನಿವಾರ ಭೇಟಿಯಾದರು.

‘ಐದಾರು ವರ್ಷಗಳಿಂದ ತಯಾರಿ ನಡೆಸಿ ಪರೀಕ್ಷೆ ಬರೆದು ಪಿಎಸ್‌ಐ ಹುದ್ದೆಗೆ ಆಯ್ಕೆ ಆಗಿದ್ದೇವೆ. ಈಗ ಮರು ಪರೀಕ್ಷೆ ನಡೆಸಲು ಸರ್ಕಾರ ಮುಂದಾಗಿದ್ದು, ಇದರ ವಿರುದ್ಧ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಸಂಜೆ 5 ಗಂಟೆಯೊಳಗೆ ಪ್ರತಿಭಟನೆ ಅಂತ್ಯಗೊಳಿಸದಿದ್ದರೆ, ಎಫ್‌ಐಆರ್ ದಾಖಲಿಸುವುದಾಗಿ ಪೊಲೀಸರು ಬೆದರಿಕೆ ಹಾಕುತ್ತಿದ್ದಾರೆ. ಒಮ್ಮೆ ಪ್ರಕರಣ ದಾಖಲಾದರೆ, ನಮ್ಮ ಭವಿಷ್ಯವೂ ಹಾಳಾಗುತ್ತದೆ’ ಎಂದು ಅಭ್ಯರ್ಥಿಗಳು ಅಳಲು ತೋಡಿಕೊಂಡರು.

ಡಿ.ಕೆ. ಶಿವಕುಮಾರ್, ‘ಪಕ್ಷದ ಹಿರಿಯ ನಾಯಕರ ಜೊತೆ ಚರ್ಚಿಸಿ ಅಗತ್ಯ ಸಹಕಾರ ನೀಡುತ್ತೇನೆ’ ಎಂದು ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು