ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಲ್‌ ಎಸ್ಟೇಟ್ ಯೋಜನೆ ಪೂರ್ಣಗೊಳಿಸುವ ಅವಧಿ 6 ತಿಂಗಳು ವಿಸ್ತರಣೆ: ಆಕ್ಷೇಪ

ರಿಯಲ್‌ ಎಸ್ಟೇಟ್ ಯೋಜನೆಗಳ ಪೂರ್ಣಗೊಳಿಸುವಿಕೆ ಅವಧಿ 6 ತಿಂಗಳು ವಿಸ್ತರಣೆ
Last Updated 29 ಆಗಸ್ಟ್ 2021, 3:56 IST
ಅಕ್ಷರ ಗಾತ್ರ

ಬೆಂಗಳೂರು: ರಿಯಲ್‌ ಎಸ್ಟೇಟ್‌ ಯೋಜನೆಗಳನ್ನು ಪೂರ್ಣಗೊಳಿಸುವ ಅವಧಿಯನ್ನು 2021ರ ಅಕ್ಟೋಬರ್‌ವರೆಗೆ ವಿಸ್ತರಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಅಸಮಾಧಾನ ವ್ಯಕ್ತವಾಗಿದೆ.

ಕೋವಿಡ್‌ನಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿನ ಕಾರಣ ಯೋಜನೆಗಳ‍ಪೂರ್ಣಗೊಳಿಸುವ ಅವಧಿಯನ್ನು ಅ.1ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ. 2021ರ ಏ.1 ಮತ್ತು ಆನಂತರ ಕೊನೆಗೊಳ್ಳುವಂತಹ ಪ್ರಕರಣಗಳಿಗೆ ಮಾತ್ರ ಈ ವಿಸ್ತರಣೆ ಅನ್ವಯವಾಗಲಿದೆ ಎಂದು ಸರ್ಕಾರ ಹೇಳಿದೆ.

‘ಸರ್ಕಾರದ ಸುತ್ತೋಲೆಯಲ್ಲಿ ಯಾವುದೇ ಸ್ಪಷ್ಟತೆಯಿಲ್ಲ. ಎಲ್ಲ ಯೋಜನೆ ಗಳ ಅವಧಿಯನ್ನೂ ವಿಸ್ತರಿಸಿದರೆ ಮನೆ ಖರೀದಿದಾರರಿಗೆ ಅಥವಾ ಗ್ರಾಹಕರಿಗೆ ತೊಂದರೆಯಾಗಲಿದೆ’ ಎಂದು ಫೋರಂ ಫಾರ್ ಕಲೆಕ್ಟಿವ್‌ ಎಫರ್ಟ್ಸ್‌ (ಎಫ್‌ಪಿಸಿಇ) ಹೇಳಿದೆ.

‘ಯೋಜನೆಗಳ ಅವಧಿ ವಿಸ್ತರಣೆಗೆ ಯಾವ ಮಾನದಂಡಗಳನ್ನು ಅನುಸರಿಸಲಾಗುತ್ತದೆಯೇ ಮತ್ತು ಅದರಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಯಾವ ವ್ಯವಸ್ಥೆ ಮಾಡಲಾಗಿದೆ ಎಂಬ ಸ್ಪಷ್ಟತೆ ಯೂ ಅಧಿಸೂಚನೆಯಲ್ಲಿ ಇಲ್ಲ’ ಎಂದು ಎಫ್‌ಪಿಸಿಇ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಶಂಕರ್‌ ಹೇಳಿದರು.

‘ಅಧಿಸೂಚನೆಯಲ್ಲಿ ಸ್ಪಷ್ಟತೆ ಇದ್ದರೆ, ಮನೆ ಖರೀದಿದಾರರಿಗೂ ಅನುಕೂಲವಾಗುತ್ತದೆ. ಯಾವುದೇ ಅವಶ್ಯಕತೆ ಇಲ್ಲದೆ, ಸ್ಪಷ್ಟ ಕಾರಣವೂ ಇಲ್ಲದೆ ಎಲ್ಲ ಯೋಜನೆಗಳ ಅವಧಿ ವಿಸ್ತರಿಸಿದರೆ, ಸಾಲ ಮಾಡಿ ನಿವೇಶನ ಅಥವಾ ಮನೆ ಖರೀದಿಸಿದ ಗ್ರಾಹಕರಿಗೆ ತೊಂದರೆಯಾಗಲಿದೆ. ಸಾಲದ ಬಡ್ಡಿ, ಮಾಸಿಕ ಕಂತು (ಇಎಂಐ), ಇರುವ ಮನೆಗೆ ಬಾಡಿಗೆ ಕಟ್ಟುವ ಹೊರೆಯೂ ಗ್ರಾಹಕರ ಮೇಲೆ ಬೀಳಲಿದೆ’ ಎಂದು ಹೇಳಿದರು.

‘ಕಳೆದ ವರ್ಷ ಕೋವಿಡ್‌ ಬಿಕ್ಕಟ್ಟು ನೆಪದಲ್ಲಿಯೇ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ (ರೇರಾ) ಅಧಿಕಾರಿಗಳು ವಿವಿಧ ಯೋಜನೆಗಳ ಅವಧಿಯನ್ನು ಅಕ್ರಮವಾಗಿ ವಿಸ್ತರಿಸಿದ್ದರು. ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಮಾರ್ಗಸೂಚಿಗಳನ್ನೂ ಪಾಲಿಸಿರಲಿಲ್ಲ. ಒಂದೇ ಯೋಜನೆಗೆ ಎರಡೆರಡು ಬಾರಿ ಅವಧಿ ವಿಸ್ತರಿಸಿದ ಉದಾಹರಣೆಗಳೂ ಇವೆ. ಈಗ ಮತ್ತೆ ಅವಧಿ ವಿಸ್ತರಣೆ ಮಾಡಿರುವುದರಿಂದ, ಅವಶ್ಯಕತೆ ಇಲ್ಲದಿದ್ದರೂ ಕೆಲವು ಬಿಲ್ಡರ್‌ ಗಳು ಕಾಲಾವಕಾಶ ಪಡೆಯುವ ಸಾಧ್ಯತೆ ಇದೆ’ ಎಂದೂ ಕಳವಳ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT