ಭಾನುವಾರ, ಏಪ್ರಿಲ್ 18, 2021
32 °C

ಚೀನಾ ಆ್ಯಪ್ ಮೂಲಕ ಸಾಲ ನೀಡಿ ಕಿರುಕುಳ ನೀಡುತ್ತಿದ್ದ ಮೂವರನ್ನು ಬಂಧಿಸಿದ ಸಿಸಿಬಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮೊಬೈಲ್ ಆ್ಯಪ್‌ಗಳ ಮೂಲಕ ಸಾರ್ವಜನಿಕರಿಗೆ ಸಾಲ ನೀಡಿ, ಮೀಟರ್‌ ಬಡ್ಡಿ ಲೆಕ್ಕದಲ್ಲಿ ಹಣ ವಸೂಲಿ ಮಾಡಿ ಕಿರುಕುಳ ನೀಡುತ್ತಿದ್ದ ಆರೋಪದಡಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಹೊಸಗುಡ್ಡದಹಳ್ಳಿ ಶ್ಯಾಮಣ್ಣ ಗಾರ್ಡನ್‌ನ ಸೈಯದ್ ಅಹಮ್ಮದ್ (33), ಬಿಟಿಎಂ 2ನೇ ಹಂತದ ಇಡಬ್ಲ್ಯುಎಸ್ ಕಾಲೊನಿಯ ಸೈಯದ್ ಇರ್ಫಾನ್ (26) ಹಾಗೂ ರಾಮಗೊಂಡನಹಳ್ಳಿಯ ಆದಿತ್ಯಾ ಸೇನಾಪತಿ (25) ಬಂಧಿತರು. ಅವರಿಂದ 35 ಲ್ಯಾಪ್‌ಟಾಪ್, 200 ಬೇಸಿಕ್ ಮೊಬೈಲ್, 18 ಸ್ಮಾರ್ಟ್‌ಫೋನ್, 30 ಸಿಮ್‌ಕಾರ್ಡ್ ಹಾಗೂ ವಿವಿಧ ಬ್ಯಾಂಕ್‌ನ 10 ಚೆಕ್‌ ಪುಸ್ತಕಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಹೇಳಿದರು.

‘ಚೀನಾ ಕಂಪನಿಗಳು ಅಭಿವೃದ್ಧಿಪಡಿಸಿದ್ದ ಮನಿ ಡೇ, ಪೈಸೆ ಪೇ, ಲೋನ್ ಟೈಂ, ರೂಪಿ ಡೇ, ರೂಪಿ ಕಾರ್ಟ್ ಹಾಗೂ ಇನ್‌ಕ್ಯಾಶ್ ಸೇರಿದಂತೆ ಹಲವು ಆ್ಯಪ್‌ಗಳ ಮೂಲಕ ಆರೋಪಿಗಳು ಸಾಲ ನೀಡುತ್ತಿದ್ದರು. ಸಾಲ ವಸೂಲಿ ಗುತ್ತಿಗೆಯನ್ನು ಕೆಲ ಕಾಲ್‌ಸೆಂಟರ್‌ಗಳಿಗೆ ಕೊಟ್ಟಿದ್ದರೆಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ’ ಎಂದೂ ತಿಳಿಸಿದರು.

‘ಚೀನಾ ಕಂಪನಿಗಳ ನಿರ್ದೇಶಕರೆಂದು ಹೇಳಿಕೊಳ್ಳುತ್ತಿದ್ದ ಆರೋಪಿಗಳು, ಅದರ ಮೂಲಕವೇ ವ್ಯವಹಾರ ನಡೆಸುತ್ತಿದ್ದರು. ಇವರ ಕೃತ್ಯಕ್ಕೆ ಚೀನಾದ ಕೆಲ ವ್ಯಕ್ತಿಗಳು ಸಹಕಾರ ನೀಡುತ್ತಿದ್ದರು. ಅವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದ್ದು, ಬಂಧನಕ್ಕೂ ಕ್ರಮ ಕೈಗೊಳ್ಳಲಾಗಿದೆ’ ಎಂದೂ ಹೇಳಿದರು.

ಅಶ್ಲೀಲವಾಗಿ ಬೈದು ಕಿರುಕುಳ: ‘ನಗರದ ನಿವಾಸಿಯೊಬ್ಬರು, ಹಣದ ಅವಶ್ಯಕತೆ ಇದ್ದಿದ್ದರಿಂದ ಸಾಲ ನೀಡುವವರಿಗಾಗಿ ಹುಡುಕಾಡುತ್ತಿದ್ದರು. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡು, ಸಾಲ ಪಡೆದಿದ್ದರು. ನಿಗದಿತ ಬಡ್ಡಿ ಅನ್ವಯ ಕಂತಿನಲ್ಲಿ ಸಾಲ ಮರುಪಾವತಿಯನ್ನೂ ಮಾಡಿದ್ದರು. ಆದರೆ, ಆರೋಪಿಗಳು ಮೀಟರ್ ಬಡ್ಡಿಗಾಗಿ ಒತ್ತಾಯಿಸುತ್ತಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಮೀಟರ್ ಬಡ್ಡಿ ನೀಡದಿದ್ದಕ್ಕೆ ಪದೇ ಪದೇ ಕರೆ ಮಾಡುತ್ತಿದ್ದ ಆರೋಪಿಗಳು, ಅಶ್ಲೀಲವಾಗಿ ಬೈಯುತ್ತಿದ್ದರು. ಮಾನಸಿಕವಾಗಿ ನೊಂದಿದ್ದ ನಿವಾಸಿ, ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ಕೋರಮಂಗಲದಲ್ಲಿದ್ದ ಏಸಿಪೀಯರಲ್, ಹ್ಯಾಗಿಕಿ, ಎಕ್ಸಿಡ್‌ವೇಲ್, ಮಸ್ಕತ್‌ಸ್ಟಾರ್, ಅಕ್ಯೂ ಸ್ಟೆಲ್ಲರ್ ಕಂಪನಿಗಳ ಕಚೇರಿ ಮೇಲೆ ದಾಳಿ ಮಾಡಿ ಆರೋಪಿಗಳನ್ನು ಸೆರೆ ಹಿಡಿಯಲಾಯಿತು’ ಎಂದೂ ಮೂಲಗಳು ಹೇಳಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು