ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಾದೇಶಿಕ ಕೇಂದ್ರ ಬೆಳಗಾವಿ ಕೈತಪ್ಪುವ ಭೀತಿ

ಕೇಂದ್ರ ಲಲಿತಕಲಾ ಅಕಾಡೆಮಿಗೆ ಧಾರವಾಡದಿಂದಲೂ ಪೈಪೋಟಿ
Last Updated 31 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಬೆಳಗಾವಿ: ಕೇಂದ್ರ ಲಲಿತಕಲಾ ಅಕಾಡೆಮಿಯ ಉದ್ದೇಶಿತ ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ ಅಕಾಡೆಮಿಯ ಸದಸ್ಯರೂ ಆಗಿರುವ ಇಲ್ಲಿನ ವೈದ್ಯೆ ಡಾ.ಸೋನಾಲಿ ಸರ್ನೋಬತ್‌ ಪ್ರಸ್ತಾವ ಸಲ್ಲಿಸಿದ್ದಾರೆ. ಈ ನಡುವೆ ಧಾರವಾಡದಿಂದಲೂ ಪ್ರಯತ್ನ ನಡೆದಿದೆ. ಸೂಕ್ತ ಜಾಗ ದೊರೆಯದಿದ್ದಲ್ಲಿ ಉದ್ದೇಶಿತ ಯೋಜನೆಯು ಕುಂದಾನಗರಿಯ ಕೈತಪ್ಪುವ ಭೀತಿ ಎದುರಾಗಿದೆ.

ಡಾ.ಸೋನಾಲಿ ಸರ್ನೋಬತ್‌

ನಗರದಲ್ಲಿ ಸುಸಜ್ಜಿತವಾಗಿ ಕಲಾ ಗ್ಯಾಲರಿ ಇಲ್ಲ. ಇದರಿಂದಾಗಿ ಲಲಿತಕಲೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಇದನ್ನು ಮನಗಂಡು ಡಾ.ಸೋನಾಲಿ ಅವರು ಯೋಜನೆ ತಯಾರಿಸಿ ಅಕಾಡೆಮಿಗೆ ಸಲ್ಲಿಸಿದ್ದಾರೆ. ಕೇಂದ್ರವನ್ನು ಬೆಳಗಾವಿಯಲ್ಲೇ ಸ್ಥಾಪಿಸುವಂತೆ ಆಗ್ರಹಪಡಿಸಿದ್ದಾರೆ. ಕನಿಷ್ಠ ಎರಡು ಎಕರೆ ಜಾಗ ನೀಡುವಂತೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತವನ್ನು ಕೋರಿದ್ದಾರೆ.

‘ಕೇಂದ್ರಕ್ಕಾಗಿ ಧಾರವಾಡ ಜಿಲ್ಲೆಯಿಂದಲೂ ತೀವ್ರ ಪೈಪೋಟಿ ಆರಂಭವಾಗಿದೆ. ಕೇಂದ್ರದ ಸಂಬಂಧಿಸಿದ ಸಚಿವಾಲಯದ ಮೂಲಕ ಒತ್ತಡ ಹೇರಲಾಗುತ್ತಿದೆ’ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿದೆ.

ಏನಿದರ ಮಹತ್ವ?:

‘ದೆಹಲಿ, ಮುಂಬೈ, ಚೆನ್ನೈ, ಭುವನೇಶ್ವರ್, ಲಕ್ನೋ, ಕೋಲ್ಕತ್ತಾ ಹಾಗೂ ಶಿಮ್ಲಾದಲ್ಲಿ ಮಾತ್ರವೇ ಅಕಾಡೆಮಿಯ ಪ್ರಾದೇಶಿಕ ಕೇಂದ್ರಗಳಿವೆ. ಹೊಸದಾಗಿ ಸುಸಜ್ಜಿತ ಕೇಂದ್ರವನ್ನು ಬೆಳಗಾವಿಯಲ್ಲಿ ಸ್ಥಾಪಿಸಿದರೆ, ರಾಜ್ಯದ ಚಿತ್ರ ಕಲಾವಿದರಿಗೆ ಅನುಕೂಲವಾಗುತ್ತದೆ. ಸಾಂಸ್ಕೃತಿಕ, ಕಲೆ ಹಾಗೂ ಸಾಹಿತ್ಯಿಕವಾಗಿ ಶ್ರೀಮಂತಿಕೆ ಹೊಂದಿರುವ ನಗರವು ರಾಜ್ಯದ 2ನೇ ರಾಜಧಾನಿಯಾಗಿ ರೂಪಗೊಳ್ಳುವ ಎಲ್ಲ ಸಾಧ್ಯತೆಗಳೂ ಇವೆ. ಹೀಗಾಗಿ, ಇಲ್ಲಿಗೆ ಆದ್ಯತೆ ನೀಡಬೇಕು ಮತ್ತು ಈ ಭಾಗದಲ್ಲಿ ಲಲಿತಕಲೆಗಳಿಗೆ ಉತ್ತೇಜನ ಹಾಗೂ ಕಲಾವಿದರಿಗೆ ಪ್ರೋತ್ಸಾಹ ಸಿಗುವಂತೆ ಮಾಡಬೇಕು’ ಎಂದು ಸೋನಾಲಿ ಪ್ರಸ್ತಾವದಲ್ಲಿ ಉಲ್ಲೇಖಿಸಿದ್ದಾರೆ.

‘ಕೇಂದ್ರದಲ್ಲಿ ಏಕಕಾಲದಲ್ಲಿ ಗ್ರಾಫಿಕ್‌, ಸೆರಾಮಿಕ್‌ ಹಾಗೂ ಶಿಲ್ಪಕಲೆ ಕಾರ್ಯಾಗಾರದಲ್ಲಿ ಏಕಕಾಲದಲ್ಲಿ ತಲಾ 8 ಮಂದಿ ಕಾರ್ಯನಿರ್ವಹಿಸಲು ಬೇಕಾದ ವ್ಯವಸ್ಥೆ, 10–12 ಮಂದಿ ಕಲಾವಿದರು ಕಲಾಕೃತಿ ರಚನೆಯಲ್ಲಿ ತೊಡಗಬಹುದಾದ ಪೇಂಟಿಂಗ ಸ್ಟುಡಿಯೊ, ಲಲಿತಕಲೆಗಳಿಗೆ ಸಂಬಂಧಿಸಿದ ಗ್ರಂಥಾಲಯ, ಕಲಾ ಗ್ಯಾಲರಿ, ಕಲಾಕೃತಿಗಳನ್ನು ‌ಪ್ರದರ್ಶಿಸಬಹುದಾದ ಆವರಣ, ಅತಿಥಿ ಗೃಹ ಮೊದಲಾದವುಗಳು ಇರಬೇಕು ಎಂದು ಯೋಜನೆ ರೂಪಿಸಲಾಗಿದೆ. ವರ್ಷವಿಡೀ ಒಂದಿಲ್ಲೊಂದು ಪ್ರದರ್ಶನ, ಕಾರ್ಯಾಗಾರ, ವಿಚಾರ ಸಂಕಿರಣ, ಕಲಾವಿದರೊಂದಿಗೆ ಸಂವಾದ, ಉಪನ್ಯಾಸ, ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳು ನಡೆಯುವಂತೆ ನೋಡಿಕೊಳ್ಳಬೇಕು. ಇದರಿಂದ ಇಲ್ಲಿನ ಕಲಾವಿದರು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವುದಕ್ಕೆ ಅವಕಾಶ ಆಗಲಿದೆ’ ಎಂದು ಪ್ರಸ್ತಾವದಲ್ಲಿ ಆಶಿಸಲಾಗಿದೆ.

ಬೇಗ ಸಿಕ್ಕರೆ ಅನುಕೂಲ

ಈ ಕುರಿತು ಪ್ರತಿಕ್ರಿಯಿಸಿದ ಸೋನಾಲಿ, ‘ಸುಸಜ್ಜಿತ ಕೇಂದ್ರ ಸ್ಥಾಪನೆಗೆ ಅಕಾಡೆಮಿಯಿಂದ ಅನುದಾನ ದೊರೆಯಲಿದೆ. ರಾಜ್ಯ ಸರ್ಕಾರದಿಂದ ಎರಡು ಎಕರೆ ಜಾಗ ನೀಡಬೇಕು ಎಂದು ಕೋರಿದ್ದೇನೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಅವರಿಗೂ ಪತ್ರ ಬರೆದಿದ್ದೇನೆ. ಅವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ನಾನೂ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಿದ್ದೇನೆ. ಜಾಗ ಲಭ್ಯವಿರುವ ಸ್ಥಳಕ್ಕೆ ಆದ್ಯತೆ ದೊರೆಯುತ್ತದೆ. ಹೀಗಾಗಿ, ಸಾಧ್ಯವಾದಷ್ಟು ಬೇಗ ಮಂಜೂರಾದರೆ ಕೇಂದ್ರವು ಬೇರೆ ಜಿಲ್ಲೆ ಪಾಲಾಗುವುದು ತಪ್ಪುತ್ತದೆ. ಇಲ್ಲಿನ ಜನಪ್ರತಿನಿಧಿಗಳು ಗಮನಹರಿಸಬೇಕು’ ಎಂದು ಒತ್ತಾಯಿಸಿದರು.

‘ಲಭ್ಯ ಜಾಗ ಗುರುತಿಸಿ ಹಾಗೂ ದಾಖಲೆಗಳನ್ನು ಸಲ್ಲಿಸುವಂತೆ ತಹಶೀಲ್ದಾರ್‌ಗೆ ಸೂಚಿಸಿದ್ದೇನೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT