ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಸುಧಾರಣಾ ಮಸೂದೆಗೆ ಅಂಗೀಕಾರ, ಮಸೂದೆಗೆ ತಿದ್ದುಪಡಿ ಸೂಚಿಸಿದ ಎಚ್‌.ಕೆ. ಪಾಟೀಲ

Last Updated 9 ಡಿಸೆಂಬರ್ 2020, 22:04 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ ಸದಸ್ಯರ ಸಭಾತ್ಯಾಗದ ನಡುವೆಯೇ ಭೂ ಸುಧಾರಣಾ ಕಾಯ್ದೆ (ಎರಡನೇ ತಿದ್ದುಪಡಿ)–2020 ಮಸೂದೆಗೆ ವಿಧಾನಸಭೆಯಲ್ಲಿ ಬುಧವಾರ ಒಪ್ಪಿಗೆ ಸೂಚಿಸಲಾಯಿತು.

ವಿಧಾನ ಪರಿಷತ್‌ನಲ್ಲಿ ತಿದ್ದುಪಡಿಗೊಂಡ ಮಸೂದೆಯನ್ನು ಕಂದಾಯ ಸಚಿವ ಆರ್.ಅಶೋಕ ಮಂಡಿಸಿದರು.

ಕಾಂಗ್ರೆಸ್‌ನ ಎಚ್‌.ಕೆ.ಪಾಟೀಲ ಅವರು ಮಸೂದೆಗೆ ತಿದ್ದುಪಡಿ ಸೂಚಿಸಿ, ‘ಕಾಯ್ಸೆಯ 81 ಎ ಗೆ ತಿದ್ದುಪಡಿ ತರಬೇಕು. ರಾಜ್ಯದ ಸಾಮಾನ್ಯ ನಿವಾಸಿಗಳಲ್ಲದೇ ಬೇರೆ ಯಾರೂ ಕರ್ನಾಟಕದಲ್ಲಿ ಕೃಷಿ ಭೂಮಿಯನ್ನು ಖರೀದಿಸಲು
ಅವಕಾಶ ನೀಡಬಾರದು. ಈಗಾಗಲೇ ನಿರೀಕ್ಷಿತ ನೀರಾವರಿ ಪ್ರದೇಶ ಅಥವಾ ನಿರೀಕ್ಷಿತ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಇಂಥ ಖರೀದಿ ಪ್ರಕ್ರಿಯೆಗೆ ಈಗಾಗಲೇ ವಿಧಿಸಲಾಗಿರುವ ನಿಯಂತ್ರಣ ಕಾನೂನುಗಳನ್ವಯ ಕ್ರಮ
ಕೈಗೊಳ್ಳುವುದನ್ನು ಈ ತಿದ್ದುಪಡಿಯಿಂದ ತಡೆಯತಕ್ಕದ್ದಲ್ಲ. ಈ ತಿದ್ದುಪಡಿ ಪರಿಣಾಮವಾಗಿ ಈಗಾಗಲೇ ಜಾರಿಯಲ್ಲಿರುವ ಯಾವುದೇ ನಿಯಂತ್ರಣ ರದ್ದಾಗತಕ್ಕದ್ದಲ್ಲ‘ ಎಂದರು.

ಈ ತಿದ್ದುಪಡಿ ಕಾಯ್ದೆಯಡಿಯಲ್ಲಿ ಖರೀದಿಸಿರುವ ಜಮೀನನ್ನು ಯಾವುದೇ ಕಾರಣಕ್ಕೆ ಕೃಷಿಯೇತರ ಉದ್ದೇಶ
ಗಳಿಗೆ ಬಳಕೆ ಮಾಡಲು ಅವಕಾಶವನ್ನು ನಿರಾಕರಿಸುವುದು. ಮೂಲ ಭೂಸುಧಾರಣಾ ಕಾಯ್ದೆಯ ಆಶಯದಂತೆ ಕೃಷಿಯೇತರ ಉದ್ದೇಶದ ಭೂ ಪರಿವರ್ತನೆಯನ್ನು ಪರಿಗಣಿಸುವ ಮುನ್ನ ಮಾರಾಟ ಪ್ರಕ್ರಿಯೆ ಯಾವಾಗ ಕೈಗೊಳ್ಳಲಾಗಿದೆ ಎಂಬುದನ್ನು ಪರಿಗಣಿಸಬೇಕು ಎಂದರು.

ಇದಕ್ಕೆ ಕ್ರಿಯಾಲೋಪ ಎತ್ತಿದ ಬಿಜೆಪಿಯ ಕೆ.ಜಿ.ಬೋಪಯ್ಯ, ‘ವಿಧಾನ ಪರಿಷತ್‌ನಲ್ಲಿ ಅಂಗೀಕಾರವಾಗಿರುವ
ಮಸೂದೆಗೆ ಸದಸ್ಯರು ತಿದ್ದುಪಡಿ ಸೂಚಿಸಲು ಸಾಧ್ಯವೇ’ ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ, ‘ಇದು ಸದಸ್ಯರ ಪರಮಾಧಿಕಾರ‘ ಎಂದು ಪ್ರತಿಪಾದಿಸಿದರು.

ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ’ಸದಸ್ಯರ ತಿದ್ದುಪಡಿ ಸಂವಿಧಾನ ವಿರೋಧಿ. ಬೇರೆ ರಾಜ್ಯದವರು ಜಾಗ ಖರೀದಿ ಮಾಡಬಾರದು ಎಂದರೆ ಏನರ್ಥ‘ ಎಂದು ಪ್ರಶ್ನಿಸಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಲು ಎದ್ದು ನಿಂತರು. ‘ಕಾಯ್ದೆಯ ಸೆಕ್ಷನ್‌ 109ಕ್ಕೆ ತಿದ್ದುಪಡಿ ತಂದವರೇ ನೀವು. ನೀವು ಈಗ ಮಾತನಾಡುವುದು ಸರಿಯಲ್ಲ’ ಎಂದು ಮಾಧುಸ್ವಾಮಿ ಛೇಡಿಸಿದರು. ‘ನೀವು ಕಾರ್ಪೊರೇಟ್‌ ಲಾಬಿಗೆ ಮಣಿದಿದ್ದೀರಿ. ಅದಾನಿ, ಅಂಬಾನಿಗೆ ಜಾಗ ನೀಡಲು ಹೊರಟಿದ್ದೀರಿ‘ ಎಂದು ಸಿದ್ದರಾಮಯ್ಯ ಆರೋಪಿಸಿದರು. ಈ ವೇಳೆ ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ನಡೆಯಿತು. ಮಸೂದೆ ವಿರೋಧಿಸಿ ಕಾಂಗ್ರೆಸ್‌ ಸದಸ್ಯರು ಸಭಾತ್ಯಾಗ ಮಾಡಿದರು. ‘ಈಗ ತಿದ್ದುಪಡಿ ಸೂಚಿಸಲು ಅವಕಾಶ ಇಲ್ಲ’ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ರೂಲಿಂಗ್‌ ನೀಡಿದರು.

ಮುದ್ರಾಂಕ ಶುಲ್ಕ ಇಳಿಕೆ: ₹ 35 ಲಕ್ಷಕ್ಕಿಂತ ಕಡಿಮೆ ಮೊತ್ತದ ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ನೋಂದಣಿ ಮುದ್ರಾಂಕ ಶುಲ್ಕವನ್ನು ಶೇ 3ಕ್ಕೆ ಇಳಿಸುವ ಕರ್ನಾಟಕ ಸ್ಟ್ಯಾಂಪು (ಎರಡನೇ ತಿದ್ದುಪಡಿ) ಮಸೂದೆಗೆ ಅಂಗೀಕಾರ ನೀಡಲಾಯಿತು.

‘ಈ ವಿನಾಯಿತಿಯನ್ನು ₹70 ಲಕ್ಷದ ವರೆಗಿನ ಅಪಾರ್ಟ್‌ಮೆಂಟ್‌ಗಳಿಗೂ ನೀಡಬೇಕು’ ಎಂದು ಪಕ್ಷೇತರ ಸದಸ್ಯ ಶರತ್‌ ಬಚ್ಚೇಗೌಡ ಸಲಹೆ ನೀಡಿದರು. ನಿವೇಶನಗಳ ಖರೀದಿಗೂ ಈ ವಿನಾಯಿತಿ ನೀಡಬೇಕು ಎಂದು ಬಿಜೆಪಿಯ ಅರವಿಂದ ಲಿಂಬಾವಳಿ, ಸತೀಶ್‌ ರೆಡ್ಡಿ ಹೇಳಿದರು.

ಸಂಸದೀಯ ಕಾರ್ಯದರ್ಶಿ ಹುದ್ದೆ ರದ್ದು

ರಾಜ್ಯದಲ್ಲಿ ಸಂಸದೀಯ ಕಾರ್ಯದರ್ಶಿಗಳ ನೇಮಕ ರದ್ದುಪಡಿಸುವ ಕರ್ನಾಟಕ ಸಂಸದೀಯ ಕಾರ್ಯದರ್ಶಿಗಳ ವೇತನ, ಭತ್ಯೆಗಳು ಹಾಗೂ ಸಂಕೀರ್ಣ ಉಪಬಂಧಗಳ (ನಿರಸನಗೊಳಿಸುವ) ಮಸೂದೆ– 2020ಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಯಿತು.
ಮಸೂದೆಗೆ ಅಂಗೀಕಾರ ಕೋರಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ’ಸಂಸದೀಯ ಕಾರ್ಯದರ್ಶಿ ಹುದ್ದೆಗಳನ್ನು ರದ್ದುಪಡಿಸುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ಹೀಗಾಗಿ, ಈ ಮಸೂದೆ ತರಲಾಗಿದೆ‘ ಎಂದರು.

‘ಕಾಯ್ದೆ ಅಂಗೀಕಾರ ದುರದೃಷ್ಟಕರ’

‘ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆ ರಾಜ್ಯ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿರುವುದು ಅತ್ಯಂತ ದುರದೃಷ್ಟಕರ’ ಎಂದು ರಾಜ್ಯಸಭೆಯ ಕಾಂಗ್ರೆಸ್‌ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.

ಟ್ವೀಟ್‌ ಮಾಡಿರುವ ಅವರು, ‘ರಾಜ್ಯದ ಭೂ ಸುಧಾರಣಾ ಕಾಯ್ದೆಗೆ ತನ್ನದೇ ಇತಿಹಾಸವಿದೆ. ರೈತ ಪರವಾದ ಈ ಕಾಯ್ದೆಗಾಗಿ ಲಕ್ಷಾಂತರರ ಜನರು ಹೋರಾಟ ಮಾಡಿದ್ದರು. ಕಾಯ್ದೆಗೆ ತಂದಿರುವ ತಿದ್ದುಪಡಿ ರೈತರ ಮೇಲಿರುವ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ’ ಎಂದಿದ್ದಾರೆ.

‘ಈ ಹಿಂದೆ ಜಾರಿಯಲ್ಲಿದ್ದ ಕಾಯ್ದೆಯಿಂದ ಕೈಗಾರಿಕೆಗಳ ರಾಜ್ಯ ಎಂದು ಕರ್ನಾಟಕ ಗುರುತಿಸಿಕೊಂಡಿರಲಿಲ್ಲವೇ’ ಎಂದು ಪ್ರಶ್ನಿಸಿರುವ ಖರ್ಗೆ, ‘ಸರ್ಕಾರದ ಈ ನಡೆಯಿಂದ ರೈತರ ಭವಿಷ್ಯವನ್ನು ಕಾರ್ಪೊರೇಟ್‌ಗಳಿಗೆ ಮಾರಿದಂತಾಗಿದೆ. ನೆಲದ ಮಕ್ಕಳು ಎಂದು ಹೇಳಿಕೊಳ್ಳುವ ಜೆಡಿಎಸ್‌ ಕೂಡಾ ಈ ಮಸೂದೆಗೆ ಬೆಂಬಲ ವ್ಯಕ್ತಪಡಿಸಿರುವುದು ನನಗೆ ಅತೀವ ನೋವು ತಂದಿದೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT