ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲ್ಕೊರೆತ ಕುರಿತು ಒಳನೋಟ: ಕೊರೆತ ತಡೆಯುವುದೇ ಹಸಿರು ಕವಚ?

ಕಡಲತೀರಗಳಲ್ಲಿ ಬೆಳೆಯುವ ಸ್ಥಳೀಯ ಸಸ್ಯಗಳ ಅಭಿವೃದ್ಧಿಗೆ ವಿಜ್ಞಾನಿಗಳ ಸಲಹೆ
Last Updated 23 ಜುಲೈ 2022, 19:20 IST
ಅಕ್ಷರ ಗಾತ್ರ

ಕಾರವಾರ: ಸಮುದ್ರ ತೀರದ ಅನೇಕ ಪ್ರದೇಶಗಳನ್ನು ಭಾರಿ ಗಾತ್ರದ ಅಲೆಗಳು ಆಪೋಶನ ಪಡೆಯುತ್ತಲೇ ಇವೆ. ಇದನ್ನು ತಡೆಯಲು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದರೂ ಪ್ರಯೋಜನವಾಗಿಲ್ಲ ಎಂಬ ಅಸಮಾಧಾನದ ಅಲೆಗಳೂ ಏಳುತ್ತಿರುತ್ತವೆ. ಇದಕ್ಕೆ ಕಡಲತೀರಗಳಲ್ಲಿ ‘ಹಸಿರು ಕವಚ’ವನ್ನು ಬೆಳೆಸುವುದೇ ಸೂಕ್ತ ಎಂಬ ಅಭಿಪ್ರಾಯ ವಿಜ್ಞಾನಿಗಳದ್ದು.

‘13 ವರ್ಷಗಳ ಹಿಂದೆ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕರಾವಳಿಯಲ್ಲಿ ‘ಹಸಿರು ಕವಚ’ ಯೋಜನೆಯನ್ನು ಜಾರಿ ಮಾಡಲಾಗಿತ್ತು. ಸಂಪೂರ್ಣ ವೈಜ್ಞಾನಿಕವಾಗಿದ್ದ ಈ ಯೋಜನೆಯಿಂದ ಕಡಲ್ಕೊರೆತವನ್ನು ಪರಿಣಾಮಕಾರಿಯಾಗಿ ತಡೆಯಬಹುದಾಗಿದೆ’ ಎ‌ನ್ನುವ ಅಭಿಪ್ರಾಯ ವಿಜ್ಞಾನಿ ಡಾ.ವಿ.ಎನ್.ನಾಯಕ ಅವರದು.

‘ವಿಶ್ವದಾದ್ಯಂತ ಕಡಲತೀರಗಳ ಸಂರಕ್ಷಣೆಗೆ ಇಂಥದ್ದೇ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಕಡಲಿನ ಮರಳಿನ ದಿಬ್ಬಗಳ ಮೇಲೆ ಮೊದಲು ಇದ್ದ ಸ್ಥಳೀಯ ಸಸ್ಯಗಳನ್ನು ನೆಟ್ಟು ಬೆಳೆಸುವುದು ಯೋಜನೆಯ ಪ್ರಮುಖ ಹಂತ. ಅವು ಗಾಳಿಯ ವೇಗವನ್ನು ಕಡಿಮೆ ಮಾಡುತ್ತವೆ. ಆಗ ತೆರೆಗಳ ಅಬ್ಬರವೂ ಕಡಿಮೆಯಾಗುತ್ತದೆ. ಇದರಿಂದ ಕಡಲ್ಕೊರೆತ ಕಡಿಮೆಯಾಗುತ್ತದೆ’ ಎಂದು ಅವರು ವಿವರಿಸುತ್ತಾರೆ.

‘ಹಸಿರು ಕವಚ ಯೋಜನೆಯನ್ನು ರಾಜ್ಯದ ಎಲ್ಲ ಭಾಗಗಳಲ್ಲಿ ಆರಂಭಿಸಲಾಗಿತ್ತು. ಕಾರವಾರದ ವಿಜ್ಞಾನ ಕೇಂದ್ರ ಹಾಗೂ ಕೋಡಿಬಾಗದ ಭಾಗದಲ್ಲಿ ಈ ಯೋಜನೆಯಡಿ ಸ್ಥಳೀಯ ಬಳ್ಳಿ (ಬಾಂಗ್ಡೆ ಬಳ್ಳಿ) ನೆಡಲಾಗಿತ್ತು. ಅವು ಈಗಲೂ ಇವೆ, ಕೊರೆತ ಕಡಿಮೆಯಾಗಿದೆ’ ಎಂದು ಅವರು ನಿದರ್ಶನಗಳನ್ನು ನೀಡುತ್ತಾರೆ.

‘ಹಸಿರು ಕವಚ ಜಾರಿಗೂ ಮೊದಲು ಕಾರವಾರದ ವಿಜ್ಞಾನ ಕೇಂದ್ರದ ಹಿಂದೆ ಕಲ್ಲುಬಂಡೆಗಳನ್ನು ಹಾಕಲಾಗಿತ್ತು. ಈಗ ಬಳ್ಳಿಗಳಿಂದಾಗಿ 500 ಮೀಟರ್‌ವರೆಗೂ ಉಸುಕು ಶೇಖರಣೆಯಾಗಿದೆ. ಇದನ್ನೇ ಉದಾಹರಣೆಯಾಗಿ ಪರಿಗಣಿಸಿ ಜಿಲ್ಲಾಡಳಿತ, ಅರಣ್ಯ ಇಲಾಖೆ ಕೂಡಲೇ ಹಸಿರೀಕರಣ ಮಾಡಬೇಕು’ ಎಂದು ಡಾ.ನಾಯಕ ಅವರು ಒತ್ತಾಯಿಸುತ್ತಾರೆ.

‘ಮೀನುಗಾರರೇ ಸಮುದ್ರ ದಂಡೆಯ ಮೊದಲ ಬಳಕೆದಾರರು. ಇಲ್ಲಿ ಇತರ ಮೂಲಸೌಕರ್ಯಗಳ ಅಭಿವೃದ್ಧಿಗೆ ಸ್ಥಳಾವಕಾಶ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ’ ಎನ್ನುತ್ತಾರೆ ಕಡಲ ವಿಜ್ಞಾನಿ ಡಾ.ಪ್ರಕಾಶ ಮೇಸ್ತ.

‘ಕರಾವಳಿ ತೀರದ ಸಮೀಪದಲ್ಲೇ ರಸ್ತೆ ನಿರ್ಮಾಣ, ಅಭಿವೃದ್ಧಿ ಕಾರ್ಯಗಳು, ಮಳೆಗಾಲದಲ್ಲಿ ಸಮುದ್ರ ನೀರಿನ ಉಬ್ಬರದ ಗೆರೆಯಿಂದ ಕನಿಷ್ಠ 10 ಮೀಟರ್ ದೂರದಲ್ಲೇ ಮಾಡಬೇಕು. ಮಳೆಗಾಲವಲ್ಲದ ಸಮಯದಲ್ಲಿ ಸಮುದ್ರದ ನೀರಿನ ಉಬ್ಬರ ಮತ್ತು ಆರ್ಭಟ ಕಡಿಮೆ ಇರುತ್ತದೆ. ಆ ಸಂದರ್ಭವನ್ನು ಪರಿಗಣಿಸಿ, ಅಲೆಗಳು ಅಪ್ಪಳಿಸುವ ವ್ಯಾಪ್ತಿಯನ್ನು ತಪ್ಪಾಗಿ ವಿಶ್ಲೇಷಿಸಿ ಯೋಜನೆ ರೂಪಿಸಲಾಗುತ್ತಿದೆ. ಇದು ಬಹಳಷ್ಟು ಸಂಪನ್ಮೂಲ, ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತಿದೆ’ ಎಂದು ಅವರು ವಿಶ್ಲೇಷಿಸುತ್ತಾರೆ.

‘ಕಡಲ್ಕೊರೆತ ಮತ್ತು ಮರಳಿನ ದಿಬ್ಬದ ರಚನೆಗಳು ಇವು ವರ್ಷ‍ಪೂರ್ತಿ ನಡೆಯುವ ನೈಸರ್ಗಿಕ ವಿದ್ಯಮಾನಗಳು. ಇವುಗಳನ್ನು ಬೇರೆ ಬೇರೆಯಾಗಿ ಅರ್ಥೈಸಿ ನಿರ್ಣಯ ಮಾಡಿದರೆ ಅವಘಡಗಳು ತಪ್ಪಿದ್ದಲ್ಲ’ ಎಂದು ಅವರು ಹೇಳುತ್ತಾರೆ.

‘ಚಲನೆ ಬದಲಿಸಿದ್ದೇ ಕಾರಣ’

ಸಮುದ್ರದ ಅಲೆಗಳ ನೈಸರ್ಗಿಕ ಚಲನೆಯನ್ನು ಬದಲಿಸಲು ಮುಂದಾಗಿದ್ದೇ ಈಗಿನ ಅನಾಹುತಗಳಿಗೆ ಕಾರಣ ಎಂದು ವಿಜ್ಞಾನಿ ಡಾ.ವಿ.ಎನ್.ನಾಯಕ ಹೇಳುತ್ತಾರೆ.

‘ಕಡಲ್ಕೊರೆತದಿಂದ ಕೊರೆದು ಹೋಗಿರುವ ಮರಳಿನ ದಿಬ್ಬಗಳು ಸುಮಾರು ಒಂದೂವರೆ ತಿಂಗಳ ಅವಧಿಯಲ್ಲಿ ಮತ್ತೆ ತುಂಬಿಕೊಳ್ಳುತ್ತವೆ. ಹಾಗಾಗಿ ಹಿಂದಿನ ದಿನಗಳಲ್ಲಿ ಯಾರೂ ವಿಶೇಷವಾಗಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಈಗ ಸಮುದ್ರದಲ್ಲಿ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವುದೇ ಅನಾಹುತಗಳಿಗೆ ಕಾರಣ’ ಎಂದು ಅವರು ಅಭಿಪ್ರಾಯ ಪಡುತ್ತಾರೆ.

‘ಆಗ ಮೀನುಗಾರರು ಮಾತ್ರ ಕಡಲತೀರದಲ್ಲಿ ವಸತಿ ಹೊಂದಿದ್ದರು. ಅವರಿಗೆ ಕಡಲ್ಕೊರೆತದ ಬಗ್ಗೆ ಅನುಭವ ಇದ್ದ ಕಾರಣ, ಸುಮಾರು 300 ಮೀಟರ್‌ಗಳಷ್ಟು ಮರಳಿನ ದಿನ್ನೆಗಳ ಹಿಂದೆ ಮನೆಗಳನ್ನು ನಿರ್ಮಸಿಕೊಳ್ಳುತ್ತಿದ್ದರು. ಆದರೆ, ತಂತ್ರಜ್ಞಾನ, ಪ್ರವಾಸೋದ್ಯಮದಂಥ ಆಕರ್ಷಣೆಗಳು ಹೆಚ್ಚಾದವು. ಅವೈಜ್ಞಾನಿಕವಾಗಿ ತಡೆಗೋಡೆಗಳ ನಿರ್ಮಾಣ ಹಾಗೂ ಸಮುದ್ರದೊಳಗೆ ಹೂಳೆತ್ತುವುದೇ ಈಗಿನ ಬಹುತೇಕ ಸಮಸ್ಯೆಗಳಿಗೆ ಕಾರಣ’ ಎಂದು ಅವರು ಅಭಿಪ್ರಾಯ ಪಡುತ್ತಾರೆ.

***

ಸಮುದ್ರ ತನ್ನ ಜಾಗವನ್ನು ಯಾವತ್ತೂ ಬಿಟ್ಟು ಕೊಡುವುದಿಲ್ಲ. ಒಂದು ವೇಳೆ ಬಿಟ್ಟರೂ ತಾತ್ಕಾಲಿಕ. ಮಳೆಗಾಲದಲ್ಲಿ ಅದರ ರೌದ್ರಾವತಾರದ ಅಲೆಗಳು ಕಾಮಗಾರಿ ನಾಶ ಪಡಿಸುತ್ತವೆ.

–ಡಾ.ಪ್ರಕಾಶ ಮೇಸ್ತ, ಕಡಲ ವಿಜ್ಞಾನಿ, ಹೊನ್ನಾವರ

***

ಸಮುದ್ರ ಕೊರೆತ ತಾತ್ಕಾಲಿಕ. ನಾವು ಅಲ್ಲಿಂದ ಸ್ವಲ್ಪ ಹಿಂದೆ ಸರಿಯಬೇಕು. ಬೇಕಾಬಿಟ್ಟಿ ಕಲ್ಲು ಹಾಕುವುದು ಸರಿಯಲ್ಲ. ವೈಜ್ಞಾನಿಕ ವಿಧಾನವನ್ನು ಅನುಸರಿಸಬೇಕು.

–ಡಾ.ವಿ.ಎನ್.ನಾಯಕ, ವಿಜ್ಞಾನಿ, ಕಾರವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT