ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲ್ಕೊರೆತ ಕುರಿತು ಒಳನೋಟ: ₹ 864 ಕೋಟಿ ಕಡಲಪಾಲು

ಶಾಶ್ವತ ಕಾಮಗಾರಿ ಕೈಗೊಂಡ ಬಳಿಕವೂ ಕಾಡುತ್ತಲೇ ಇದೆ ಕಡಲ್ಕೊರೆತ
Last Updated 23 ಜುಲೈ 2022, 19:08 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯದ ಕರಾವಳಿ ತೀರದ ಉದ್ದಕ್ಕೂ ಕಡಲ್ಕೊರೆತ ಸಮಸ್ಯೆ ನೀಗಿಸಲು ನಾಲ್ಕು ದಶಕಗಳಿಂದ ಸಾವಿರಾರು ಕೋಟಿ ರೂಪಾಯಿ ವ್ಯಯಿಸ ಲಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಏಷ್ಯನ್‌ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ) ನೆರವಿನಿಂದ ₹864 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿಗೊಳಿಸಲಾಗಿದೆ. ವಿಪರ್ಯಾಸವೆಂದರೆ ಆ ಬಳಿಕವೂ ಕಡಲ್ಕೊರೆತ ಸಮಸ್ಯೆ ಹಾಗೆಯೇ ಮುಂದುವರಿದಿದೆ. ‌

ಕರ್ನಾಟಕವು 300 ಕಿ.ಮೀ ಉದ್ದದ ಕಡಲ ತೀರವನ್ನು ಹೊಂದಿದೆ. ಅದರಲ್ಲಿ 121.62 ಕಿ.ಮೀ ಉದ್ದದ ತೀರದಲ್ಲಿ ಮಳೆಗಾಲದ ವೇಳೆ ಕಡಲ್ಕೊರೆತ ಹಾವಳಿ ಕಾಣಿಸಿಕೊಳ್ಳುತ್ತದೆ. ಇದನ್ನು ತಡೆಯಲು ಸರ್ಕಾರವು ಎಡಿಬಿ ನೆರವಿನಿಂದ 12 ವರ್ಷಗಳ ಹಿಂದೆ ಕರಾ ವಳಿಯ ಸುಸ್ಥಿರ ಸಂರಕ್ಷಣೆ ಮತ್ತು ನಿರ್ವಹಣೆ ಹೂಡಿಕೆ ಯೋಜನೆಯನ್ನು (ಎಸ್‌ಸಿಪಿಎಂಐಪಿ) ಎರಡು ಹಂತಗಳಲ್ಲಿ ಕೈಗೆತ್ತಿಕೊಂಡಿತು. ಭೌತಿಕ ಕಾಮಗಾರಿಗಳಿಗೆ ₹ 601.40 ಕೋಟಿ ವ್ಯಯಿಸ ಲಾಗಿದೆ. ಎರಡನೇ ಹಂತದ ಯೋಜನೆ ಯಲ್ಲಿ ಪರಿಕರ ಖರೀದಿ, ಅಧ್ಯಯನ ಮತ್ತು ಸಮೀಕ್ಷಾ ಕಾರ್ಯ, ಸಲಹಾ ಸಂಸ್ಥೆ, ವೇತನ ಮತ್ತಿತರ ವೆಚ್ಚವೇ ₹161.46 ಕೋಟಿಗಳಷ್ಟಿದೆ. 2021ರ ಮಾರ್ಚ್‌ನಲ್ಲೇ ಈ ಯೋಜನೆ ಮುಕ್ತಾಯವಾಗಿದ್ದು, ಕಾಮಗಾರಿಗಳನ್ನು ಮೂಲ ಸೌಕರ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ. ಇಷ್ಟೆಲ್ಲಾ ಆದ ನಂತರವೂ, ಕಿನಾರೆಗಳಲ್ಲಿ ವಾಸವಾಗಿರುವ ಕುಟುಂಬ ಗಳ ಪಾಲಿಗೆ ಕಡಲ್ಕೊರೆತ ದುಃಸ್ವಪ್ನವಾಗಿ ಕಾಡುತ್ತಲೇ ಇದೆ.

‘ಎಡಿಬಿ ನೆರವಿನಿಂದ ಕಾಮಗಾರಿ ಯನ್ನು ಪ್ರಾಯೋಗಿಕವಾಗಿ ಅನುಷ್ಠಾನ ಮಾಡಲಾಗಿದೆ. ಈ ಯೋಜನೆಯಿಂದ ಬಹುತೇಕ ಕಡೆ ಕಡಲ್ಕೊರೆತ ಹತೋಟಿಗೆ ಬಂದಿದೆ’ ಎಂದು ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಾರೆ.

ಅಚ್ಚರಿಯೆಂದರೆ ಈ ಯೋಜನೆಯಡಿ ಕಿನಾರೆಗೆ ಸಮಾನಾಂತರವಾಗಿ ಬಂಡೆ ಸಾಲು (ರೀಫ್‌) ಅಳವಡಿಸಿರುವ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಬಟ್ಟಪ್ಪಾಡಿಯಲ್ಲಿ ಅರಬ್ಬೀಸಮುದ್ರವು ಸುಮಾರು 600 ಮೀ. ನೆಲವನ್ನು ಕಬಳಿಸಿದೆ. ಸುಮಾರು 700 ಮೀ ಉದ್ದದ ಡಾಂಬರು ರಸ್ತೆ ಕಡಲ ಒಡಲು ಸೇರಿದೆ. 30ಕ್ಕೂ ಅಧಿಕ ಕಟ್ಟಡಗಳು ಸಮುದ್ರದ ಪಾಲಾಗುವ ಆತಂಕ ಎದುರಿಸುತ್ತಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಟ್ಟಪ್ಪಾಡಿ, ಉಚ್ಚಿಲ, ಸೀ ಗ್ರೌಂಡ್‌, ಮೊಗವೀರಪಟ್ಣ, ಮೀನಕಳಿಯ, ಸುರತ್ಕಲ್‌ ದೀಪಸ್ತಂಭ ಹಾಗೂ ಸಸಿಹಿತ್ಲುವಿನಲ್ಲಿ ಈಗಲೂ ಕಡಲ್ಕೊರೆತ ಉಂಟಾಗುತ್ತಿದೆ.ಪಣಂಬೂರು ಸಮೀಪದ ಮೀನಕಳಿಯದಲ್ಲಿ ಕಾಂಕ್ರೀಟ್‌ ರಸ್ತೆಯನ್ನೂ ಕಡಲ ಅಲೆಗಳು ಬುಡಮೇಲು ಮಾಡಿವೆ. ಇಲ್ಲಿ 15ಕ್ಕೂ ಅಧಿಕ ಮನೆಗಳು ಕೊಚ್ಚಿಹೋಗುವ ಆತಂಕ ಎದುರಿಸುತ್ತಿವೆ.

ಉಡುಪಿ ಜಿಲ್ಲೆಯಲ್ಲಿ ಮೂಳೂರು ತೊಟ್ಟಂ, ಪಡುಬಿದ್ರಿ ನಡಿಪಟ್ನ, ಕೈಪುಂಜಾಲು, ನಡಿಪಟ್ನ ಬ್ಲೂ ಫ್ಲಾಗ್‌ ಕಿನಾರೆ, ಮೂಳೂರು ಪಡು, ಕುತ್ಪಾಡಿ ಪಡುಕೆರೆ, ಕೋಟ, ಕೋಡಿ ಕನ್ಯಾನ, ಹೊಸಬೆಂಗ್ರೆ, ಮರವಂತೆ, ಗುಜ್ಜಾಡಿ, ಕಂಚಗೋಡು ರಾಣರಕೇರಿ, ಕಿರಿ ಮಂಜೇಶ್ವರದ ಆದ್ರಗೋಳಿಯಲ್ಲಿ ಕಡಲ್ಕೊರೆತ ಉಂಟಾಗುತ್ತಿದೆ. ಮರವಂತೆಯಲ್ಲಿಉತ್ತರ ಭಾಗದ ಬ್ರೇಕ್ ವಾಟರ್‌ ಬಳಿಯೂ ಸಮಸ್ಯೆ ಮುಂದುವರಿದಿದೆ.

ಉತ್ತರ ಕನ್ನಡ ಜಿಲ್ಲೆಯ ಗೊರ್ಟೆ, ಬೆಳ್ಕೆ, ಹೊನ್ನಿಗದ್ದೆ, ತೆಂಗಿನಗುಂಡಿ, ಭಾವಿಕೇರಿ, ಬೇಲೆಕೇರಿ, ಬೆಳಂಬಾರ, ಗಾಬೀತಕೇಣಿ, ಹಾರವಾಡ, ಬಾಡ, ಹೊಲನಗದ್ದೆ, ಅಳ್ವೆಕೋಡಿ, ಪಾವಿನಕುರ್ವ, ತೊಪ್ಪಲ ಕೇರಿ, ಕಾರವಾರ, ದೇವಬಾಗದಲ್ಲೂ ಅರಬ್ಬೀ ಸಮುದ್ರದ ದೈತ್ಯ ಅಲೆಗಳು ಈಗಲೂ ನೆಲವನ್ನು ಕಬಳಿಸುತ್ತಿವೆ.

ಎಡಿಬಿ ಕಾಮಗಾರಿ ಕೈಗೊಳ್ಳುವ ಮುನ್ನ ಕಡಲ್ಕೊರೆತ ಕಾಣಿಸಿಕೊಂಡಾಗಲೆಲ್ಲ ಭಾರಿ ಗಾತ್ರದ ಬಂಡೆಕಲ್ಲುಗಳನ್ನು ಸಮುದ್ರಕ್ಕೆ ಸುರಿಯಲಾಗುತ್ತಿತ್ತು. ಇದಕ್ಕೆ ಲೆಕ್ಕ ಇಡುವ ಪರಿಪಾಟವಿಲ್ಲ. ಈ ತುರ್ತು ಕಾಮಗಾರಿ ಹೆಸರಿನಲ್ಲಿ ಪ್ರತಿವರ್ಷವೂ ಕೋಟಿಗಟ್ಟಲೆ ರೂಪಾಯಿ ವ್ಯಯಿಸಲಾಗುತ್ತಿತ್ತು. ಶಾಶ್ವತ ಪರಿಹಾರ ಕಾಮಗಾರಿ ಕೈಗೊಂಡ ಬಳಿಕವೂ ಕಡಲಿಗೆ ಕಲ್ಲುಗಳನ್ನು ಸುರಿಯುವುದು ನಿಂತಿಲ್ಲ.

2018ರಿಂದ 2021ರ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 30 ಹೊಸ ಕಾಮಗಾರಿಗಳಿಗೆ ₹ 23.54 ಕೋಟಿ ಮೊತ್ತದ ಪ್ರಸ್ತಾವಗಳನ್ನು ಹಾಗೂ ಉಡುಪಿ ಜಿಲ್ಲೆಯಲ್ಲಿ 40 ಕಾಮಗಾರಿಗಳಿಗೆ ₹ 91.67 ಕೋಟಿ ಮೊತ್ತದ ಪ್ರಸ್ತಾವಗಳನ್ನು ಮೂಲಸೌಕರ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ ಸಿದ್ಧಪಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ₹114.45 ಕೋಟಿ ವೆಚ್ಚದಲ್ಲಿ ಏಳು ಕಡೆ ಶಾಶ್ವತಪರಿಹಾರಕಾಮಗಾರಿಗಳನ್ನುನಡೆಸುವ ಹೊಸ ಪ್ರಸ್ತಾವಗಳನ್ನು ಇಲಾಖೆಯಿಂದ ಸರ್ಕಾರಕ್ಕೆ ಈ ವರ್ಷ ಮತ್ತೆ ಸಲ್ಲಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2022ನೇ ಸಾಲಿನಲ್ಲಿ ಕಡಲ್ಕೊರೆತ ತಡೆಗೆ ₹ 14.75 ಕೋಟಿ ಮೊತ್ತದ ತಾತ್ಕಾಲಿಕ ಕಾಮಗಾರಿಗಳನ್ನು ಮತ್ತೆ ಏಳು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಇದುವರೆಗೆ ₹ 5.83 ಕೋಟಿ ವೆಚ್ಚವಾಗಿದೆ. ತುರ್ತು ತಡೆಗೋಡೆ ನಿರ್ಮಿಸಲು ಮತ್ತೆ ₹ 6 ಕೋಟಿ ಮೊತ್ತದ ಏಳು ಕಾಮಗಾರಿಗಳ ಪ್ರಸ್ತಾವವನ್ನು ಇಲಾಖೆಯು ಸರ್ಕಾರಕ್ಕೆ ಸಲ್ಲಿಸಿದೆ. ವರ್ಷವೂ ನೂರಾರು ಕೋಟಿ ರೂಪಾಯಿ ಅನುದಾನ ಸಮುದ್ರಪಾಲಾಗುತ್ತಿದ್ದರೂ ಕಡಲ್ಕೊರೆತ ಮಾತ್ರ ಹತೋಟಿಗೆ ಬರುತ್ತಿಲ್ಲ.

ಪೂರಕ ಮಾಹಿತಿ: ಬಾಲಚಂದ್ರ ಎಚ್‌.

***

ಎಡಿಬಿ ಕಾಮಗಾರಿಯ ತನಿಖೆ: ಸಿ.ಎಂ

ಈ ಬಾರಿ ಮಳೆಗಾಲದಲ್ಲಿ ಕಡಲ್ಕೊರೆತದ ಹಾವಳಿ ಹೆಚ್ಚುತ್ತಿದ್ದಂತೆಯೇ ಎಡಿಬಿ ನೆರವಿನಿಂದ ಅನುಷ್ಠಾನಗೊಳಿಸಲಾಗಿರುವ ಕಾಮಗಾರಿಗಳನ್ನು ಸಮಗ್ರವಾಗಿ ತನಿಖೆಗೆ ಒಳಪಡಿಸಬೇಕು ಎಂಬ ಕೂಗೆದ್ದಿದೆ. ಸೋಮೇಶ್ವರ ಪುರಸಭೆ ವ್ಯಾಪ್ತಿಯ ಬಟ್ಟಪ್ಪಾಡಿಯ ಕಡಲ್ಕೊರೆತ ಪ್ರದೇಶಕ್ಕೆ ಇತ್ತೀಚೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಡಿಬಿ ಕಾಮಗಾರಿಯನ್ನು ತನಿಖೆಗೆ ಒಳಪಡಿಸುವ ಭರವಸೆ ನೀಡಿದ್ದಾರೆ.

ಕಡಲಾಮೆ ಸಂತತಿಗೂ ಕುತ್ತು?

ಕಡಲಾಮೆಗಳು ಮರಳಿನಿಂದ ಕೂಡಿದ ಕಿನಾರೆಗಳನ್ನು ಇಷ್ಟಪಡುತ್ತವೆ. ಮರಳಿನಲ್ಲಿ ಗುಂಡಿ ತೋಡಿ ಅವು ಮೊಟ್ಟೆಗಳನ್ನು ಇಡುತ್ತವೆ. ಅರಬ್ಬೀ ಸಮುದ್ರದ ತೀರದುದ್ದಕ್ಕೂ ಕಡಲಾಮೆಗಳ ಸಂತಾನೋತ್ಪತ್ತಿಗೆ ಪ್ರಶಸ್ತವಾದ ಹಲವಾರು ತಾಣಗಳಿವೆ. ಕಡಲ್ಕೊರೆತದಿಂದಾಗಿ ಇಂತಹ ತಾಣಗಳು ನಾಶವಾಗುವುದರಿಂದ ಕಡಲಾಮೆಗಳ ಸಂತಾನೋತ್ಪತ್ತಿ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎನ್ನುತ್ತಾರೆ ಪರಿಸರ ತಜ್ಞರು.

***

ತಜ್ಞರ ಸಮಿತಿ ಶಿಫಾರಸು ಆಧರಿಸಿ ಕ್ರಮ

ರಾಜ್ಯದ ಕರಾವಳಿಯಲ್ಲಿ ಕಡಲ್ಕೊರೆತ ತಡೆಗೆ ಎಡಿಬಿ ನೆರವಿನಿಂದ ಕಾಮಗಾರಿಗಳನ್ನು ಕೈಗೊಂಡ ಬಳಿಕವೂ ಅನೇಕ ಕಡೆ ಸಮಸ್ಯೆ ಮರುಕಳಿಸುತ್ತಿದೆ. ಎಲ್ಲಿ ಲೋಪವಾಗಿದೆ ಎಂಬ ಬಗ್ಗೆ ಸರ್ಕಾರ ಕೂಲಂಕಷವಾಗಿ ತನಿಖೆ ನಡೆಸಲಿದೆ. ಕಡಲ್ಕೊರೆತ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ಬಗ್ಗೆ ಪರಿಶೀಲಿಸಲು ತಜ್ಞರ ಸಮಿತಿಯನ್ನು ನೇಮಿಸಿದ್ದೇವೆ

-ಎಸ್‌.ಅಂಗಾರ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ

***

ನೆಲ್ಲಿಕುನ್ನು ಮಾದರಿ ಬಳಕೆಗೆ ಆಸಕ್ತಿ

ಕಾಸರಗೋಡಿನ ಉದ್ಯಮಿ ಯು.ಕೆ.ಯೂಸುಫ್‌ ಎಂಬುವರು ಕಡಲ್ಕೊರೆತ ತಡೆಗೆ ‘ಸೀ ವೇವ್‌ ಬ್ರೇಕರ್‌’ ಮಾದರಿಯನ್ನು ಅಭಿವೃದ್ಧಿಪಡಿಸಿದ್ದು, ಇದಕ್ಕೆ ಪೇಟೆಂಟ್ ಕೂಡಾ ಪಡೆದುಕೊಂಡಿದ್ದಾರೆ. ಕಾಸರಗೋಡು ಜಿಲ್ಲೆಯ ನೆಲ್ಲಿಕುನ್ನು ಎಂಬಲ್ಲಿ ವರ್ಷದ ಹಿಂದೆ ಈ ಮಾದರಿಯಲ್ಲಿ ತಡೆಗೋಡೆ ನಿರ್ಮಿಸಿದ್ದಾರೆ. ಆ ಬಳಿಕ ಅಲ್ಲಿ ಕಡಲ್ಕೊರೆತ ಕಾಣಿಸಿಲ್ಲ.

ಕಡಲ್ಕೊರೆತ ತಡೆಯಲು ಕಲ್ಲುಬಂಡೆಗಳನ್ನು ಅಥವಾ ಟೆಟ್ರಾಪಾಡ್‌ಗಳನ್ನು ಬಳಸಲಾಗುತ್ತದೆ. ಇದಕ್ಕೆ ತಗಲುವ ಅರ್ಧದಷ್ಟು ವೆಚ್ಚದಲ್ಲಿ ಸೀ ವೇವ್ ಬ್ರೇಕರ್‌ ತಂತ್ರಜ್ಞಾನವನ್ನು ಅಳವಡಿಸಬಹುದು ಎಂದು ಯೂಸುಫ್‌ ಪ್ರತಿಪಾದಿಸುತ್ತಾರೆ. ಕರ್ನಾಟದ ಅಧಿಕಾರಿಗಳ ನಿಯೋಗವು ಇತ್ತೀಚೆಗೆ ನೆಲ್ಲಿಕುನ್ನುವಿಗೆ ಭೇಟಿ ನೀಡಿ ಪರಿಶೀಲಿಸಿದೆ. ಬಟ್ಟಪ್ಪಾಡಿಯಲ್ಲಿ ಪ್ರಾಯೋಗಿಕವಾಗಿ ಸೀ ವೇವ್‌ ಬ್ರೇಕರ್‌ ಮಾದರಿ ಅಳವಡಿಸಲು ಬಂದರು ಇಲಾಖೆ ಚಿಂತನೆ ನಡೆಸಿದೆ.

***

‘ದತ್ತಾಂಶ ಆಧರಿಸಿ ಕಾಮಗಾರಿ ರೂಪಿಸಿ’

ಕಡಲ್ಕೊರೆತದಿಂದ ಕಟ್ಟಡಗಳು ಸಮುದ್ರ ಪಾಲಾಗುವುದನ್ನು ತಾತ್ಕಾಲಿಕವಾಗಿ ತಡೆಯಲು ಭಾರಿ ಗಾತ್ರದ ಬಂಡೆಕಲ್ಲುಗಳನ್ನು ಬಳಸುವುದುಂಟು. ಆದರೆ, ಕಲ್ಲುಗಳ ಗಾತ್ರ ಮತ್ತು ಆಕಾರ ಸೂಕ್ತವಾಗಿಲ್ಲದಿದ್ದರೆ, ಅ‌ಗತ್ಯವಿರುವಷ್ಟು ಪ್ರಮಾಣದಲ್ಲಿ ಕಲ್ಲುಗಳು ಸಿಗದಿದ್ದರೆ, ಅವುಗಳಿಂದ ನಿರ್ಮಿಸುವ ತಾತ್ಕಾಲಿಕ ತಡೆಗೋಡೆಯೂ ವಿಫಲವಾಗುತ್ತದೆ. ಘನಾಕಾರಾದ ಕಲ್ಲುಗಳು ಹೆಚ್ಚು ಪರಿಣಾಮಕಾರಿ ಎನ್ನುತ್ತಾರೆ ಸುರತ್ಕಲ್‌ನ ಎನ್‌ಐಟಿಕೆಯವಾಟರ್‌ ರಿಸೋರ್ಸಸ್‌ ಆ್ಯಂಡ್‌ ಓಷೀನ್‌ ಎಂಜಿನಿಯರಿಂಗ್‌ ವಿಭಾಗದ
ಪ್ರಾಧ್ಯಾಪಕಪ್ರೊ.ಸುಬ್ಬಾ ರಾವ್‌.

ಕಡಲ್ಕೊರೆತದ ತೀವ್ರತೆ ಹಾಗೂ ಅವುಗಳು ಉಂಟಾಗುವುದಕ್ಕೆ ಕಾರಣಗಳು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತವೆ. ಕಡಲ್ಕೊರೆತ ತಡೆ ಕಾಮಗಾರಿಗಳನ್ನು ವಿನ್ಯಾಸಗೊಳಿಸುವಾಗ ಸ್ಥಳೀಯ ದತ್ತಾಂಶಗಳು ಯಥೇಚ್ಚವಾಗಿ ಲಭ್ಯವಿರಬೇಕು. ಇಲ್ಲದಿದ್ದರೆ ಪರಿಹಾರ ಕಾಮಗಾರಿ ವಿಫಲವಾಗುವ ಸಾಧ್ಯತೆ ಇದೆ. ಕಡಲ ನೀರಿನ ಗರಿಷ್ಠ ಮತ್ತು ಕನಿಷ್ಠ ಮಟ್ಟಗಳ ವ್ಯಾಪ್ತಿಗನುಗುಣವಾಗಿ ತಡೆಗೋಡೆ ನಿರ್ಮಿಸಲು ಸೂಕ್ತ ಸ್ಥಳವನ್ನು ಆಯ್ಕೆ ಮಾಡಬೇಕು. 5 ಮೀ. ಆಳದ ಪಾಯ ಅಗೆದು ಕಲ್ಲಿನ ತಡೆಗೋಡೆ ಕಟ್ಟಬೇಕು. ತಡೆಗೋಡೆ 10 ಡಿಗ್ರಿಯಿಂದ 20 ಡಿಗ್ರಿಯಷ್ಟು ಇಳಿಜಾರನ್ನು ಹೊಂದಿರಬೇಕು. 50 ವರ್ಷದಲ್ಲಿ ಆಗುವ ಬದಲಾವಣೆ ಆಧರಿಸಿ ಹೆಚ್ಚು ಎತ್ತರದ ಅಲೆ ಎಲ್ಲಿಯವರೆಗೆ ಬಂದಿದೆ ಎಂಬುದನ್ನು ನೋಡಿಕೊಂಡು ತಡೆಗೋಡೆಯ ಸ್ಥಳ ನಿಗದಿ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT