ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರಗ ಖಾತೆ ಬದಲಾವಣೆ: ಬಿಜೆಪಿಯೊಳಗೆ ಚರ್ಚೆ

Last Updated 7 ಏಪ್ರಿಲ್ 2022, 22:16 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರವನ್ನೇ ಮುಜುಗರಕ್ಕೆ ಸಿಲುಕಿಸುವಂತಹ ಹೇಳಿಕೆಗಳನ್ನು ನೀಡಿ ಪದೇ ಪದೇ ಎಡವಟ್ಟು ಮಾಡಿಕೊಳ್ಳುತ್ತಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಖಾತೆ ಬದಲಿಸಬೇಕೆಂಬ ಚರ್ಚೆ ಬಿಜೆಪಿಯಲ್ಲಿ ಆರಂಭವಾಗಿದೆ.

ಜ್ಞಾನೇಂದ್ರ ಅವರು ಗೃಹ ಸಚಿವರ ಹುದ್ದೆಯ ಸೂಕ್ಷ್ಮತೆ ಮರೆತು ಬಹಿರಂಗ ಹೇಳಿಕೆಗಳನ್ನು ನೀಡುತ್ತಿರುವ ಆರೋಪ ಅವರು ಸಂಪುಟ ಸೇರಿದ ದಿನದಿಂದಲೂ ಇದೆ. ಇದೇ ಕಾರಣಕ್ಕಾಗಿ ಅವರನ್ನು ಸಂಪುಟದಿಂದ ಕೈಬಿಡಬೇಕು ಅಥವಾ ಖಾತೆ ಬದಲಿಸಬೇಕು ಎಂದು ಪ್ರತಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಹಲವು ಬಾರಿ ಆಗ್ರಹಿಸಿದ್ದವು.

ಜಗಜೀವನರಾಂ ನಗರದಲ್ಲಿ ಚಂದ್ರಶೇಖರ್‌ ಎಂಬ ಯುವಕನ ಕೊಲೆಗೆ ಸಂಬಂಧಿಸಿದಂತೆ ಮತೀಯ ಸಂಘರ್ಷದ ಬಣ್ಣ ನೀಡುವ ರೀತಿಯಲ್ಲಿ ಗೃಹ ಸಚಿವರೇ ಹೇಳಿಕೆ ನೀಡಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಟೀಕೆಗೆ ಗುರಿಯಾಗಿದೆ. ಆರಗ ಖಾತೆ ಬದಲಾವಣೆ ಕುರಿತು ಈಗ ಬಿಜೆಪಿಯಲ್ಲೇ ಚರ್ಚೆ ಜೋರಾಗಿದೆ.

ಜ್ಞಾನೇಂದ್ರ ಗೃಹ ಸಚಿವರಾದ ಕೆಲವೇ ದಿನಗಳಲ್ಲಿ ಮೈಸೂರಿನಲ್ಲಿ ಯುವತಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ‘ಕತ್ತಲೆ ಸಮಯದಲ್ಲಿ ಸಂತ್ರಸ್ತ ಯುವತಿ ಅಲ್ಲಿಗೇಕೆ ಹೋಗಬೇಕಿತ್ತು? ಈಗ ಕಾಂಗ್ರೆಸ್‌ನವರು ನನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ’ ಎಂದು ಹೇಳಿಕೆ ನೀಡಿದ್ದರು. ತೀವ್ರ ಟೀಕೆ ವ್ಯಕ್ತವಾದ ಬಳಿಕ ಹೇಳಿಕೆ ಹಿಂಪಡೆದು, ಕ್ಷಮೆ ಯಾಚಿಸಿದ್ದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ದನಗಳವು ಮಾಡುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಗೃಹ ಸಚಿವರನ್ನು ಭೇಟಿಮಾಡಿ ದೂರು ನೀಡಿದ್ದರು. ಆ ಸ್ಥಳದಿಂದಲೇ ಪೊಲೀಸ್‌ ಅಧಿಕಾರಿಗೆ ಕರೆಮಾಡಿದ್ದ ಗೃಹ ಸಚಿವರು, ‘ನೀವು ಪೊಲೀಸರು ಲಂಚ ತಿನ್ನುವ ನಾಯಿಗಳು...’ ಎಂದು ಬೈದಿದ್ದರು.

ಜಗಜೀವನರಾಂ ನಗರದಲ್ಲಿ ಸೋಮವಾರ ತಡರಾತ್ರಿ ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿದ ಬಳಿಕ ನಡೆದ ಗಲಾಟೆಯಲ್ಲಿ ಚಂದ್ರಶೇಖರ್‌ ಕೊಲೆಯಾಗಿತ್ತು. ‘ಉರ್ದು ಭಾಷೆಯಲ್ಲಿ ಮಾತನಾಡಿಲ್ಲ ಎಂಬ ಕಾರಣಕ್ಕೆ ಚಂದ್ರಶೇಖರ್‌ ಅವರನ್ನು ಚುಚ್ಚಿ, ಚುಚ್ಚಿ ಕೊಲೆ ಮಾಡಲಾಗಿದೆ’ ಎಂದು ಜ್ಞಾನೇಂದ್ರ ಹೇಳಿಕೆ ನೀಡಿದ್ದರು. ನಂತರ ಹೇಳಿಕೆ ವಾಪಸ್‌ ಪಡೆದು, ‘ಬೈಕ್‌ ಡಿಕ್ಕಿ ನಂತರದ ಗಲಾಟೆಯೇ ಕೊಲೆಗೆ ಕಾರಣ’ ಎಂದು ಸಮಜಾಯಿಷಿ ನೀಡಿದ್ದರು.

ಜ್ಞಾನೇಂದ್ರ ವಜಾ; ಡಿಕೆಶಿ ಆಗ್ರಹ

ಬೆಂಗಳೂರು: ‘ಸಮಾಜದಲ್ಲಿ ಅಶಾಂತಿ, ಜಾತಿ, ಧರ್ಮಗಳ ಮಧ್ಯೆ ವೈಷಮ್ಯ ಪ್ರಚೋದಿಸುವಂಥ ಹೇಳಿಕೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಸಂಪುಟದಿಂದ ವಜಾ ಮಾಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಗೃಹ ಸಚಿವರ ವಿರುದ್ಧ ಪೊಲೀಸ್ ಆಯುಕ್ತರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು. ಕೇಸ್ ದಾಖಲಿಸದಿದ್ದರೆ ಪಕ್ಷದ ವತಿಯಿಂದ ನಾವು ದೂರು ಸಲ್ಲಿಸುತ್ತೇವೆ. ಜನರ ಮುಂದೆ ಹೋಗುತ್ತೇವೆ’ ಎಂದರು.

‘ಗೃಹ ಸಚಿವರಿಗೆ ಸಾಮಾನ್ಯ ಪ್ರಜ್ಞೆ ಎಂಬುದೇ ಇಲ್ಲವಾಗಿದೆ. ಅವರು ಗೃಹ ಸಚಿವರಾಗಿ ಆ ಸ್ಥಾನದ ಪರವಾಗಿ ಮಾತನಾಡುತ್ತಿದ್ದಾರಾ, ಸರ್ಕಾರದ ಪರವಾಗಿ ಮಾತನಾಡುತ್ತಿದ್ದಾರಾ, ತಮ್ಮ ಪಕ್ಷ ಬಿಜೆಪಿ ಪರ ಮಾತನಾಡುತ್ತಿದ್ದಾರಾ ಎಂಬ ಪ್ರಶ್ನೆ ಮೂಡುತ್ತದೆ’ ಎಂದರು.

ಆರಗ ಜ್ಞಾನೇಂದ್ರ ಪರ ಈಶ್ವರಪ್ಪ ವಕಾಲತ್ತು

ಶಿವಮೊಗ್ಗ: ‘ಚಂದ್ರಶೇಖರ್‌ ಕೊಲೆ ಪ್ರಕರಣದಲ್ಲಿ ಪ್ರಾಥಮಿಕ ಮಾಹಿತಿಯನ್ನು ಆಧರಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಅದು ತಪ್ಪು ಎಂದು ತಿಳಿದ ತಕ್ಷಣವೇ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲಿ ತಪ್ಪು ಏನಿದೆ’ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದರು. ‘ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಇಂತಹ ಎಷ್ಟು ಹೇಳಿಕೆ ಕೊಟ್ಟು, ನಂತರ ತಪ್ಪು ತಿದ್ದಿಕೊಂಡು ಮಾತನಾಡಿಲ್ಲ’ ಎಂದು ಅವರು ಗೃಹ ಸಚಿವರನ್ನು ಸಮರ್ಥಿಸಿಕೊಂಡರು.

‘ನಾನು ಯಾವುದೇ ಸ್ಥಾನದ ಆಕಾಂಕ್ಷಿ ಅಲ್ಲ’

ಬೆಂಗಳೂರು: ‘ನಾನು ಯಾವುದೇ ಸ್ಥಾನದ ಆಕಾಂಕ್ಷಿ ಅಲ್ಲ. ಪಕ್ಷದ ಕಾರ್ಯಕರ್ತ. ಪಕ್ಷ ನೀಡುವ ಜವಾಬ್ದಾರಿ ನಿಭಾಯಿಸಲು ಬದ್ಧ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಹೆಸರು ಕೇಳಿಬರುತ್ತಿರುವ ಹಿನ್ನೆಲೆ
ಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿಯಲ್ಲಿ ಯಾವುದೂ ಶಾಶ್ವತ ಅಲ್ಲ. ಕಾಲಕಾಲಕ್ಕೆ ಬದಲಾವಣೆಗಳು ಆಗುತ್ತಿರುತ್ತವೆ’ ಎಂದರು.

ಭಾಷೆಯೂ ಕೊಲೆಗೆ ಕಾರಣ: ‘ಜೆಜೆ ನಗರದಲ್ಲಿ ಚಂದ್ರು ಎಂಬಾತನ ಕೊಲೆ ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವರು ನೀಡಿದ್ದ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ಕೆಲವೊಮ್ಮೆ ಪೊಲೀಸರು ಸತ್ಯ ಸಂಗತಿ ಹೇಳುವುದಕ್ಕಿಂತಲೂ, ಮುಂದೆ ಆಗಬಹುದಾದ ಗಲಾಟೆ ತಡೆಯುವ ಪ್ರಯತ್ನ ಮಾಡುತ್ತಾರೆ. ಪೊಲೀಸರೇ ಸಚಿವರ ಬಾಯಿಂದ ಸುಳ್ಳು ಹೇಳಿಸಿರುತ್ತಾರೆ. ಮೃತನ ತಾಯಿ ಹೇಳಿಕೆ ಗಮನಿಸಿದರೆ, ಭಾಷೆ ಕೂಡ ಕೊಲೆಗೆ ಕಾರಣವಾಗಿದೆ’ ಎಂದರು.

‘ನಾನು ಕೋಮು ಕದಡುವ ಹೇಳಿಕೆ‌ ನೀಡಿಲ್ಲ. ಮೃತ ಚಂದ್ರು ತಾಯಿಯ ಹೇಳಿಕೆ ಆಧರಿಸಿ ಮಾತನಾಡಿದ್ದೇನೆ. ಬೈಕ್ ಅಪಘಾತದಿಂದ ಹಾನಿ ಆಗಿಲ್ಲ, ಗಾಯ ಕೂಡ ಆಗಿಲ್ಲ. ಭಾಷೆಯೂ ಒಂದು ನೆಪವಾಗಿದೆ’ ಎಂದು ಹೇಳಿದರು.

ಆರಗ ವಿರುದ್ಧ ಪೊಲೀಸ್‌ ಠಾಣೆಗೆ ದೂರು

ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್‌ ಮುಖಂಡರು ಜಯನಗರ ಠಾಣೆಯಲ್ಲಿ ಆರಗ ಜ್ಞಾನೇಂದ್ರ ವಿರುದ್ಧ ಜಾತಿ–ಧರ್ಮಗಳ ನಡುವೆ ವೈಷಮ್ಯಕ್ಕೆ ಕಾರಣವಾಗುವ ಹೇಳಿಕೆ ನೀಡಿದ್ದಕ್ಕೆ ದೂರು ಸಲ್ಲಿಸಿದ್ದಾರೆ. ಭದ್ರಾವತಿ ನಗರ ಮತ್ತು ಗ್ರಾಮಾಂತರ ಯುವ ಕಾಂಗ್ರೆಸ್ ಕಾರ್ಯಕರ್ತರು ಭದ್ರಾವತಿ ಹಳೆ ನಗರ ಠಾಣೆಗೆ ಇದೇ ವಿಚಾರವಾಗಿ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT