ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಾಂತರ ಆರೋಪಕ್ಕೆ ಸಾಕ್ಷ್ಯ ಕೊಡಿ

ಬೆಂಗಳೂರು ಆರ್ಚ್‌ ಬಿಷಪ್‌ ಪೀಟರ್‌ ಮಚಾದೊ ಸವಾಲು
Last Updated 5 ಡಿಸೆಂಬರ್ 2021, 16:42 IST
ಅಕ್ಷರ ಗಾತ್ರ

ಬೆಂಗಳೂರು: ಕ್ರೈಸ್ತ ಮಿಷನರಿಗಳು ನಡೆಸುತ್ತಿರುವ ಶಾಲೆ, ಆಸ್ಪತ್ರೆಗಳಲ್ಲಿ ಮತಾಂತರ ನಡೆಯುತ್ತಿರುವುದಕ್ಕೆ ಸಾಕ್ಷ್ಯ ನೀಡಿದರೆ ಅಂತಹ ಸಂಸ್ಥೆಗಳನ್ನೇ ಮುಚ್ಚಲು ಸಿದ್ಧ ಎಂದು ಬೆಂಗಳೂರು ಧರ್ಮಪ್ರಾಂತ್ಯದ ಆರ್ಚ್‌ ಬಿಷಪ್‌ ಪೀಟರ್‌ ಮಚಾದೊ ಹೇಳಿದರು.

ಅಸೋಸಿಯೇಷನ್‌ ಫಾರ್‌ ಪ್ರೊಟೆಕ್ಷನ್‌ ಆಫ್‌ ಸಿವಿಲ್‌ ರೈಟ್ಸ್‌, ಯುನೈಟೆಡ್‌ ಕ್ರಿಶ್ಚಿಯನ್‌ ಫೋರಂ ಮತ್ತು ಯುನೈಟೆಡ್‌ ಎಗೆನೆಸ್ಟ್‌ ಹೇಟ್‌ ಸಂಘಟನೆಗಳು ಜಂಟಿಯಾಗಿ ಸಿದ್ಧಪಡಿಸಿರುವ ‘ಭಾರತದಲ್ಲಿ ದಾಳಿಗೊಳಗಾದ ಕ್ರೈಸ್ತರು– ಒಂದು ಸತ್ಯಶೋಧನಾ ವರದಿ’ ಬಿಡುಗಡೆ ಕಾರ್ಯಕ್ರಮದಲ್ಲಿ ಭಾನುವಾರ ಅವರು ಮಾತನಾಡಿದರು.

‘ಶಾಲೆ, ಆಸ್ಪತ್ರೆಗಳಲ್ಲಿ ಮತಾಂತರ ನಡೆಸಲಾಗುತ್ತಿದೆ ಎಂಬ ಸುಳ್ಳು ಆರೋಪ ಮಾಡಲಾಗುತ್ತಿದೆ. ಕೋವಿಡ್‌ ಕಾಲದಲ್ಲಿ ಸೋಂಕಿತರಿಗೆ ತಮ್ಮ ಸಂಸ್ಥೆಗಳ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಯಿತು. ಆಗ, ಚಿಕಿತ್ಸೆಯ ಆಮಿಷವೊಡ್ಡಿ ಮತಾಂತರಕ್ಕೆ ಯತ್ನಿಸಬಹುದಿತ್ತು. ಆದರೆ, ಕ್ರೈಸ್ತ ಧಾರ್ಮಿಕ ಸಂಸ್ಥೆಗಳು ಎಂದೂ ಅಂತಹ ಕೆಲಸ ಮಾಡುವುದಿಲ್ಲ’ ಎಂದರು.

‘ಈಗ ಮತಾಂತರ ನಿಷೇಧ ಮಸೂದೆ ಹೆಸರಿನಲ್ಲಿ ಕ್ರೈಸ್ತ ಧರ್ಮೀಯರನ್ನು ನಿಯಂತ್ರಿಸುವ ಪ್ರಯತ್ನ ಆರಂಭವಾಗಿದೆ. ನಾವು ಎಲ್ಲದಕ್ಕಿಂತಲೂ ಮೊದಲು ಭಾರತೀಯರು. ನಮ್ಮ ಸಂವಿಧಾನ ಅತ್ಯುತ್ತಮವಾದುದು. ಧರ್ಮ ಪ್ರಚಾರದಲ್ಲಿ ಮುಕ್ತ ಅವಕಾಶವಿದೆ. ಸ್ವಯಂ ಇಚ್ಛೆಯಿಂದ ಮತಾಂತರಕ್ಕೂ ಅವಕಾಶಗಳಿವೆ’ ಎಂದು ಹೇಳಿದರು.

‘ಸಬ್‌ ಕೆ ಸಾತ್‌ ಸಬ್‌ ಕಾ ವಿಕಾಸ್‌, ಸಬ್‌ ವಿಶ್ವಾಸ್‌ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದಾರೆ. ಅವರು ಹೇಳುವ ಮಾತು ಚೆನ್ನಾಗಿದೆ. ಆದರೆ, ಒಂದು ವರ್ಷದಲ್ಲಿ ದೇಶದಲ್ಲಿ ಕ್ರೈಸ್ತರು, ಮುಸ್ಲಿಮರು ಮತ್ತು ದಲಿತರ ಮೇಲೆ ನಡೆದಿರುವ ದೌರ್ಜನ್ಯಗಳನ್ನು ಗಮನಿಸಬೇಕು. ನಾವು ಸರ್ಕಾರದಿಂದ ಯಾವ ನೆರವನ್ನೂ ಕೇಳುವುದಿಲ್ಲ. ಎಲ್ಲ ಧರ್ಮದವರೂ ಸಮಾನವಾಗಿ ಬದುಕುವ ಸಂವಿಧಾನಬದ್ಧ ಹಕ್ಕು ಬೇಕು’ ಎಂದು ಆಗ್ರಹಿಸಿದರು.

ಒಂಭತ್ತು ತಿಂಗಳಲ್ಲಿ 305 ದಾಳಿ: 2021ರ ಜನವರಿ 1ರಿಂದ ಸೆಪ್ಟೆಂಬರ್‌ 30ರವರೆಗೆ ದೇಶದ ವಿವಿಧೆಡೆ ಕ್ರೈಸ್ತ ಧರ್ಮೀಯರ ಮೇಲೆ ನಡೆದಿರುವ ದಾಳಿಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿಯುಳ್ಳ ವರದಿಯನ್ನು ವಕೀಲ ಬಿ.ಟಿ. ವೆಂಕಟೇಶ್‌ ಬಿಡುಗಡೆ ಮಾಡಿದರು.

273 ದಿನಗಲ್ಲಿ ದೇಶದ ವಿವಿಧೆಡೆ ಕ್ರೈಸ್ತ ಧರ್ಮೀಯರ ಮೇಲೆ 305 ದಾಳಿಗಳು ನಡೆದಿವೆ. ಉತ್ತರ ಪ್ರದೇಶದಲ್ಲಿ 66, ಛತ್ತೀಸ್‌ಗಢದಲ್ಲಿ 47, ಕರ್ನಾಟಕದಲ್ಲಿ 32 ಪ್ರಕರಣಗಳು ನಡೆದಿವೆ ಎಂಬ ಮಾಹಿತಿ ವರದಿಯಲ್ಲಿದೆ.

‘ನೀವು ದೇಶದ ಎರಡನೇ ದರ್ಜೆಯ ನಾಗರಿಕರು ಎಂದು ಹೇಳುವುದೇ ಮತಾಂತರ ನಿಷೇಧ ಕಾಯ್ದೆಯನ್ನು ತರುವ ಪ್ರಯತ್ನದ ಹಿಂದಿರುವ ಉದ್ದೇಶ’ ಎಂದು ವೆಂಕಟೇಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT