ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಕಾವತಿ ರೀಡೂ | ತಪ್ಪಿತಸ್ಥರನ್ನು ಜೈಲಿಗೆ ಅಟ್ಟುತ್ತೇವೆ: ಸಿಎಂ ಬೊಮ್ಮಾಯಿ

Last Updated 23 ಫೆಬ್ರುವರಿ 2023, 22:30 IST
ಅಕ್ಷರ ಗಾತ್ರ

ಬೆಂಗಳೂರು: ‘ಅರ್ಕಾವತಿ ರೀಡೂ ಸುಮಾರು ₹8,000 ಕೋಟಿ ಹಗರಣವಾಗಿದ್ದು, ಇದರ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರು ಯಾರಿದ್ದಾರೋ ಅವರೆಲ್ಲರನ್ನೂ ಜೈಲಿಗೆ ಅಟ್ಟುತ್ತೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಬ್ಬರಿಸಿದರು.

ವಿಧಾನಸಭೆಯಲ್ಲಿ ಗುರುವಾರ ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ನೀಡುವ ಸಂದರ್ಭದಲ್ಲಿ ಅರ್ಕಾವತಿ ಹಗರಣದ ತನಿಖೆಗೆ ರಚಿಸಿದ್ದ ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿಯನ್ನು ಉಲ್ಲೇಖಿಸಿ ರೋಶಾವೇಶದಿಂದ ಮಾತನಾಡಿದ ಬೊಮ್ಮಾಯಿ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಇವರಿಗೆ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಆರ್‌.ಅಶೋಕ, ಸುನಿಲ್‌ಕುಮಾರ್‌, ಮತ್ತಿತರರು ಸಾಥ್‌ ನೀಡಿದರು. ಈ ವೇಳೆ ಸದನದಲ್ಲಿ ಸಿದ್ದರಾಮಯ್ಯ ಇರಲಿಲ್ಲ.

‘ಸಿದ್ದರಾಮಯ್ಯ ಮೊನ್ನೆ ಮಾತನಾಡುವ ಸಂದರ್ಭದಲ್ಲಿ ತಾವು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅರ್ಕಾವತಿ ಬಡಾವಣೆಯಲ್ಲಿ ಒಂದು ಗುಂಟೆಯಷ್ಟು ಜಮೀನು ಡೀನೋಟಿಫೈ ಮಾಡಿಲ್ಲ ಎಂದು ಜಾಣ್ಮೆಯಿಂದ ಹೇಳಿದರು. ಇವರು ಡಿನೋಟಿಫಿಕೇಷನ್‌ಗೆ ‘ರೀಡೂ’ ಎಂಬ ಹೊಸ ಹೆಸರು ಇಟ್ಟು ಸುಮಾರು 868 ಎಕರೆ ಭೂಮಿಯನ್ನು ಡೀನೋಟಿಫೈ ಮಾಡಿದರು. ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ಆದೇಶಗಳನ್ನು ಉಲ್ಲಂಘಿಸಲಾಗಿದೆ ಎಂದು ಕೆಂಪಣ್ಣ ವರದಿ ಸ್ಪಷ್ಟವಾಗಿ ಹೇಳಿದೆ. ಸಿದ್ದರಾಮಯ್ಯ ಅವಧಿಯಲ್ಲೇ ಕೆಂಪಣ್ಣ ವರದಿಯನ್ನು ಸಚಿವ ಸಂಪುಟ ಸಭೆಯ ಮುಂದೆ ಇಡಲಾಯಿತು. ಅದರಲ್ಲಿನ ಕಹಿ ಸತ್ಯವನ್ನು ತಿಳಿದು, ಮುಚ್ಚಿ ಹಾಕುವ ಉದ್ದೇಶದಿಂದ ಆ ಬಳಿಕ ತಮ್ಮಿಂದ ಯಾವುದೇ ತಪ್ಪು ಆಗಿಲ್ಲ, ರೈತರಿಗೆ ಅನ್ಯಾಯವಾಗಿಲ್ಲ ಎಂದು ತೇಪೆ ಹಚ್ಚಿ ಮೂಲೆಗೆ ಸರಿಸಿದರು’ ಎಂದು ಹರಿಹಾಯ್ದರು.

‘ಅರ್ಕಾವತಿ ರೀಡೂದಲ್ಲಿ ರಾಜಕಾರಣಿಗಳು, ಭೂಮಾಫಿಯಾ, ಅಧಿಕಾರಿಗಳು ಸೇರಿ ಮಾಡಿದ್ದಾರೆ. ಇದೊಂದು ಮಾಯಾಜಾಲ ಎಂದು ವರದಿ ಸ್ಪಷ್ಟವಾಗಿ ಉಲ್ಲೇಖಿಸಿದೆ. ಹೀಗಾಗಿ ಇದೊಂದು ಸ್ಕೀಮ್ ಅಲ್ಲ ಸ್ಕ್ಯಾಮ್‌’ ಎಂದು ಬೊಮ್ಮಾಯಿ ಹೇಳಿದಾಗ ಬಿಜೆಪಿ ಸದಸ್ಯರು ‘ಶೇಮ್ ಶೇಮ್‌’ ಎಂದು ಘೋಷಣೆ ಕೂಗಿದರು. ಈ ವೇಳೆ ಸದನದಲ್ಲಿದ್ದ ವಿರೋಧಪಕ್ಷದ ಉಪನಾಯಕ ಯು.ಟಿ.ಖಾದರ್‌, ಕೆ.ಜೆ.ಜಾರ್ಜ್‌ ಮತ್ತು ಅಜಯ್ ಸಿಂಗ್ ಅವರು ಮುಖ್ಯಮಂತ್ರಿಯವರ ಮಾತುಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ನೀವು ಕೆಂಪಣ್ಣ ವರದಿಯನ್ನು ಸದನದಲ್ಲಿ ಮಂಡಿಸಿ ಮಾತನಾಡಬೇಕೇ ಹೊರತು, ಬಜೆಟ್‌ ಉತ್ತರದ ಸಂದರ್ಭದಲ್ಲಿ ಪ್ರಸ್ತಾಪಿಸಿರುವುದು ಸರಿಯಲ್ಲ’ ಎಂದು ತಿರುಗೇಟು ನೀಡಿದರು.

‘ನಿಮ್ಮ ನಾಯಕರು(ಸಿದ್ದರಾಮಯ್ಯ) ಪ್ರಸ್ತಾಪಿಸಿದ್ದಕ್ಕೇ, ನಾನೂ ಈ ವಿಷಯ ಪ್ರಸ್ತಾಪಿಸಿದ್ದೇನೆ. ಅವರು ಇವತ್ತು ಇಲ್ಲಿರಬೇಕಿತ್ತು. ಸಿದ್ದರಾಮಯ್ಯ ಅವರು ಸಂಪುಟಕ್ಕೆ ತಂದು ಬಳಿಕ ವರದಿಯನ್ನು ಮುಚ್ಚಿಟ್ಟಿದ್ದೇಕೆ? ಈ ಹಗರಣ ಬಡ ರೈತರ ಕಣ್ಣಲ್ಲಿ ನೀರು ತರಿಸಿದರೆ, ಭೂಮಾಫಿಯಾದ ಮುಖದಲ್ಲಿ ನಗು ತರಿಸಿದೆ. ಆ ಸಂದರ್ಭದಲ್ಲಿ ಅರ್ಕಾವತಿ ಬಡಾವಣೆ ಪ್ರದೇಶದಲ್ಲಿ ಒಂದು ಎಕರೆಗೆ ₹10 ಕೋಟಿ ಇತ್ತು. 868 ಎಕರೆ ಎಂದರೆ ಸುಮಾರು ₹8000 ಕೋಟಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ. ಇದು ಯಾರ ಖಜಾನೆ ಮತ್ತು ಜೇಬಿಗೆ ಹೋಗಿದೆ’ ಎಂದು ಕಾಂಗ್ರೆಸ್‌ ಸದಸ್ಯರನ್ನು ಪ್ರಶ್ನಿಸಿದರು.

‘ಕೆಂಪಣ್ಣ ಅವರ ವರದಿಯಲ್ಲಿರುವುದನ್ನು ಉಲ್ಲೇಖಿಸಿ ದಾಖಲೆಗಳ ಸಮೇತ ಹೇಳುತ್ತಿದ್ದೇನೆ. ಆದರೆ, ನೀವು ಆಧಾರ ರಹಿತ ಕೆಂಪಣ್ಣ ಎಂಬ ಗುತ್ತಿಗೆದಾರನ ಒಂದು ಪತ್ರವನ್ನು ಇಟ್ಟುಕೊಂಡು ಶೇ 40 ಲಂಚದ ಸುಳ್ಳು ಆರೋಪಗಳನ್ನು ಮಾತನಾಡುತ್ತಿದ್ದೀರಿ. ಈವರೆಗೂ ಒಂದು ತುಂಡು ಸಾಕ್ಷ್ಯ ನೀಡಲು ಸಾಧ್ಯವಾಗಿಲ್ಲ. ನಾನು ಜಸ್ಟಿಸ್‌ ಕೆಂಪಣ್ಣ ಆಯೋಗದ ವರದಿಯನ್ನು ಉಲ್ಲೇಖಿಸಿ ಮಾತನಾಡುತ್ತಿದ್ದೇನೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. ಸತ್ಯ ಬಯಲಿಗೆ ಬಂದಿದೆ. ಇದು ನಮಗೆ ಮತ್ತು ನಿಮಗೆ ಇರುವ ವ್ಯತ್ಯಾಸ’ ಎಂದರು.

ಬೊಮ್ಮಾಯಿ ಅವರ ಹೇಳಿಕೆಯನ್ನು ಆಕ್ಷೇಪಿಸಿ ಜಾರ್ಜ್‌ ಏರಿದ ಧ್ವನಿಯಲ್ಲಿ ಮಾತನಾಡಿದಾಗ, ‘ಏಕೆ ಕುಣಿಯುತ್ತೀರಿ, ಕಾಲಿಗೆ ಸ್ಪ್ರಿಂಗ್‌ ಕಟ್ಟಿಕೊಂಡಿದ್ದೀರಾ?
ಸತ್ಯವನ್ನು ಎದುರಿಸುವ ಧೈರ್ಯ ಇರಬೇಕು’ ಎಂದು ಬೊಮ್ಮಾಯಿ ನಗುತ್ತಲೇ ಲೇವಡಿ ಮಾಡಿದರು.

ಜೆಡಿಎಸ್‌ನ ಸಾ.ರಾ.ಮಹೇಶ್‌ ಮಧ್ಯ ಪ್ರವೇಶಿಸಿ, ‘ರೀಡೂ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು’ ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಮುಂದಿನ ದಿನಗಳಲ್ಲಿ ಸದನದಲ್ಲಿ ಈ ವರದಿಯನ್ನು ಮಂಡಿಸಬೇಕು ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಭ್ರಷ್ಟಾಚಾರ ಪರ: ಸಿದ್ದರಾಮಯ್ಯ ಸರ್ಕಾರ ಲೋಕಾಯುಕ್ತವನ್ನು ರದ್ದು ಮಾಡಿ ಎಸಿಬಿ ರಚನೆ ಮಾಡಿರುವ ಬಗ್ಗೆ ಹೈಕೋರ್ಟ್‌ ಛೀಮಾರಿ ಹಾಕಿದೆ. ಈಗಲೂ ನಿಮ್ಮ ಕ್ರಮವನ್ನು ಸಮರ್ಥಿಸಿಕೊಳ್ಳುತ್ತೀರಿ ಎಂದರೆ, ನೀವು ಭ್ರಷ್ಟಚಾರದ ಪರ ಇದ್ದೀರಿ ಎಂದು ಬೊಮ್ಮಾಯಿ ಅವರು ಜಾರ್ಜ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

‘ಗೃಹಿಣಿ ಶಕ್ತಿ ₹1,000 ಕ್ಕೆ ಏರಿಕೆ

‘ಗೃಹಿಣಿ ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ₹500 ನೀಡುವುದಾಗಿ ಬಜೆಟ್‌ನಲ್ಲಿ ಪ್ರಕಟಿಸಲಾಗಿತ್ತು. ಅದನ್ನು ₹1,000 ಕ್ಕೆ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಪ್ರಕಟಿಸಿದರು.

ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಶಾಲಾ– ಕಾಲೇಜುಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಘೋಷಿಸಲಾಗಿದ್ದ 1,000 ಬಸ್‌ಗಳ ಷೆಡ್ಯೂಲ್‌ಗಳನ್ನು 2,000 ಕ್ಕೆ ಹೆಚ್ಚಳ ಮಾಡುವುದಾಗಿಯೂ ಘೋಷಿಸಿದರು.

7ನೇ ವೇತನ ಆಯೋಗ ಮಧ್ಯಂತರ ವರದಿ ಜಾರಿ

ರಾಜ್ಯ ಸರ್ಕಾರಿ ನೌಕರರ 7ನೇ ವೇತನ ಆಯೋಗಕ್ಕೆ ಮಾರ್ಚ್‌ನಲ್ಲಿ ಮಧ್ಯಂತರ ವರದಿಯನ್ನು ಸಲ್ಲಿಸಲು ಸೂಚಿಸಿದ್ದು, ಆಯೋಗ ವರದಿ ಸಲ್ಲಿಸಿದ ಬಳಿಕ ಪರಿಶೀಲನೆ ನಡೆಸಿ ಅನುಷ್ಠಾನಗೊಳಿಸಲಾಗುವುದು ಎಂದು ಬೊಮ್ಮಾಯಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT